ADVERTISEMENT

ಜಿಂಬಾಬ್ವೆಗೆ ಸ್ಮರಣೀಯ ಗೆಲುವು

ಕ್ರಿಕೆಟ್‌: ಮಿಂಚಿದ ಚಟಾರ; ಪಾಕಿಸ್ತಾನ ತಂಡಕ್ಕೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST
ಜಿಂಬಾಬ್ವೆಗೆ ಸ್ಮರಣೀಯ ಗೆಲುವು
ಜಿಂಬಾಬ್ವೆಗೆ ಸ್ಮರಣೀಯ ಗೆಲುವು   

ಹರಾರೆ (ಎಎಫ್‌ಪಿ): ಟೆಂಡೈ ಚಟಾರ ತೋರಿದ ಪ್ರಭಾವಿ ಬೌಲಿಂಗ್‌ ನೆರವಿನಿಂದ ಜಿಂಬಾಬ್ವೆ ತಂಡ ಎರಡನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 24 ರನ್‌ಗಳ ರೋಚಕ ಗೆಲುವು ಪಡೆಯಿತು.

ಈ ಮೂಲಕ ಎರಡು ಪಂದ್ಯಗಳ ಸರಣಿ 1–1 ರಲ್ಲಿ ಸಮಬಲದಲ್ಲಿ ಕೊನೆಗೊಂಡಿದೆ. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 264 ರನ್‌ಗಳನ್ನು ಬೆನ್ನಟ್ಟಿದ ಪಾಕ್‌ ಅಂತಿಮ ದಿನವಾದ ಶನಿವಾರ 81 ಓವರ್‌ಗಳಲ್ಲಿ 239 ರನ್‌ಗಳಿಗೆ ಆಲೌಟಾಯಿತು. 61 ರನ್‌ಗಳಿಗೆ ಐದು ವಿಕೆಟ್‌ ಪಡೆದ ಚಟಾರ ತಮ್ಮ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ನಾಯಕ ಮಿಸ್ಬಾ ಉಲ್‌ ಹಕ್‌ (ಅಜೇಯ 79) ಪಾಕ್‌ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಕೊನೆ­ಯವರೆಗೆ ಪ್ರಯತ್ನ ನಡೆಸಿದರೂ ಯಶ ಕಾಣಲಿಲ್ಲ.

ಟೆಸ್ಟ್ ಆಡುವ ಪ್ರಮುಖ ದೇಶದ ವಿರುದ್ಧ ಜಿಂಬಾಬ್ವೆಗೆ ದೊರೆತ ಐದನೇ ಗೆಲುವು ಇದು. ಅದೇ ರೀತಿ ಪಾಕಿಸ್ತಾನ ವಿರುದ್ಧ ತನ್ನ ಮೂರನೇ ಜಯ ದಾಖಲಿಸಿತು. 2000/01 ರಲ್ಲಿ ಭಾರತವನ್ನು ಮಣಿಸಿದ ಬಳಿಕ ಜಿಂಬಾಬ್ವೆಗೆ ಲಭಿಸಿದ ಮಹತ್ವದ ಗೆಲುವು ಇದಾಗಿದೆ. ಪಾಕ್‌ ತಂಡ 5 ವಿಕೆಟ್‌ಗೆ 158 ರನ್‌ ಗಳೊಂದಿಗೆ ಶನಿವಾರ ಆಟ ಮುಂದುವರಿಸಿತ್ತು. ತಂಡವನ್ನು ಸೋಲಿನಿಂದ ಪಾರು ಮಾಡುವ ಜವಾಬ್ದಾರಿ ಮಿಸ್ಬಾ ಮೇಲಿತ್ತು. ಅವರು ಏಕಾಂಗಿಯಾಗಿ ಹೋರಾಟ ನಡೆಸಿದರೂ ಇತರ ಬ್ಯಾಟ್ಸ್‌ಮನ್‌ಗಳಿಂದ ತಕ್ಕ ಬೆಂಬಲ ದೊರೆಯಲಿಲ್ಲ.

ಅದ್ನಾನ್‌ ಅಕ್ಮಲ್‌ ನಾಲ್ಕನೇ ದಿನದ ಮೊತ್ತಕ್ಕೆ ಕೇವಲ ಮೂರು ರನ್‌ ಗಳಿಸಿ ಔಟಾದರು. ಅಬ್ದುರ್‌ ರಹ್ಮಾನ್‌ (16) ಮತ್ತು ಮಿಸ್ಬಾ ಏಳನೇ ವಿಕೆಟ್‌ಗೆ 34 ರನ್‌ ಸೇರಿಸಿದರು. ರಹ್ಮಾನ್‌ ವಿಕೆಟ್‌ ಪಡೆದ ಪನ್ಯಂಗರ ಜಿಂಬಾಬ್ವೆ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು. ಸಯೀದ್‌ ಅಜ್ಮಲ್‌ ಮತ್ತು ಜುನೈದ್‌ ಖಾನ್‌ ಅವರನ್ನು ಚಟಾರ ಬೇಗನೇ ಪೆವಿಲಿಯನ್‌ಗೆ ಅಟ್ಟಿದರು.

ಈ ಹಂತದಲ್ಲಿ ಮಿಸ್ಬಾ ತಾವೇ ಹೆಚ್ಚು ಎಸೆತಗಳನ್ನು ಎದುರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರು. ಆದರೆ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಹತ್‌ ಅಲಿ ರನೌಟ್‌ ಆಗುತ್ತಿದ್ದಂತೆಯೇ ಜಿಂಬಾಬ್ವೆ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: ಮೊದಲ ಇನಿಂಗ್ಸ್‌ 109.5 ಓವರ್‌ಗಳಲ್ಲಿ 294 ಮತ್ತು ಎರಡನೇ ಇನಿಂಗ್ಸ್‌ 89.5 ಓವರ್‌ಗಳಲ್ಲಿ 199  ಪಾಕಿಸ್ತಾನ: ಮೊದಲ ಇನಿಂಗ್ಸ್‌ 104.5 ಓವರ್‌ಗಳಲ್ಲಿ 230 ಮತ್ತು ಎರಡನೇ ಇನಿಂಗ್ಸ್‌ 81 ಓವರ್‌ಗಳಲ್ಲಿ 239 (ಮಿಸ್ಬಾ ಉಲ್‌ ಹಕ್‌ ಅಜೇಯ 79, ಅದ್ನಾನ್‌ ಅಕ್ಮಲ್‌ 20, ಅಬ್ದುರ್‌ ರಹ್ಮಾನ್‌ 16, ಟೆಂಡೈ ಚಟಾರ 61ಕ್ಕೆ 2, ಪ್ರಾಸ್ಪರ್‌ ಉತ್ಸೆಯಾ 62ಕ್ಕೆ 2) ಫಲಿತಾಂಶ: ಜಿಂಬಾಬ್ವೆಗೆ 24 ರನ್‌ ಗೆಲುವು; ಎರಡು ಪಂದ್ಯಗಳ ಸರಣಿ 1–1 ರಲ್ಲಿ ಸಮಬಲ
ಪಂದ್ಯಶ್ರೇಷ್ಠ: ಟೆಂಡೈ ಚಟಾರ, ಸರಣಿಶ್ರೇಷ್ಠ: ಯೂನಿಸ್‌ ಖಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.