ADVERTISEMENT

ಜೀವ್ ಪ್ರಮುಖ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಬೆಂಗಳೂರು: ಜೀವ್ ಮಿಲ್ಖಾ ಸಿಂಗ್ ಒಳಗೊಂಡಂತೆ ದೇಶದ ಪ್ರಮುಖ ಗಾಲ್ಫ್ ಸ್ಪರ್ಧಿಗಳ ಪ್ರದರ್ಶನವನ್ನು ವೀಕ್ಷಿಸುವ ಉತ್ತಮ ಅವಕಾಶ ಬೆಂಗಳೂರಿನ ಜನತೆಗೆ ಲಭಿಸಿದೆ. ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಬುಧವಾರ ಆರಂಭವಾಗಲಿರುವ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್‌ಷಿಪ್ ಇದಕ್ಕೆ ಅವಕಾಶ ಕಲ್ಪಿಸಿದೆ.

ನಾಲ್ಕು ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ 10 ನಗರಗಳ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪ್ರತಿ ತಂಡಗಳು ಮೂರು ಸ್ಪರ್ಧಿಗಳನ್ನು ಹೊಂದಿರುತ್ತವೆ. ಒಟ್ಟು 1.2 ಕೋಟಿ ರೂ. ಬಹುಮಾನ ಮೊತ್ತದ ಈ ಚಾಂಪಿಯನ್‌ಷಿಪ್ ಗಾಲ್ಫ್ ಪ್ರಿಯರಿಗೆ ಸಾಕಷ್ಟು ಮನರಂಜನೆ ನೀಡುವುದು ಖಚಿತ.

ಮೊದಲ ಎರಡು ದಿನ ಎಲ್ಲ 10 ತಂಡಗಳು ಕಣಕ್ಕಿಳಿಯಲಿವೆ. ಇದರಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ನಾಲ್ಕರಘಟ್ಟದ ಪಂದ್ಯಗಳು ಶುಕ್ರವಾರ ಹಾಗೂ ಫೈನಲ್ ಶನಿವಾರ ನಡೆಯಲಿವೆ.

ಎಲ್ಲ ತಂಡಗಳು ಸಮತೋಲನದಿಂದ ಕೂಡಿರುವ ಕಾರಣ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಆದರೂ ಗುಡಗಾಂವ್, ಚೆನ್ನೈ, ನೋಯ್ಡಾ ಮತ್ತು ಬೆಂಗಳೂರು ತಂಡಗಳು ಸೆಮಿಫೈನಲ್ ಪ್ರವೇಶಿಸುವ `ಫೇವರಿಟ್~  ಎನಿಸಿವೆ.

ಅನಿರ್ಬನ್ ಲಾಹಿರಿ, ಅಭಿಷೇಕ್ ಜಾ ಮತ್ತು ಮಾನವ್ ಜೈನಿ ಬೆಂಗಳೂರು ತಂಡದಲ್ಲಿದ್ದಾರೆ. ಬ್ರಿಟಿಷ್ ಓಪನ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುವ ಲಾಹಿರಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರಿಂದ ಶ್ರೇಷ್ಠ ಪ್ರದರ್ಶನ ಮೂಡಿಬಂದರೆ ಬೆಂಗಳೂರು ತಂಡಕ್ಕೆ ಪ್ರಶಸ್ತಿಯ ಕನಸು ಕಾಣಬಹುದು.

`ಸ್ಟಾರ್~ ಸ್ಪರ್ಧಿ ಜೀವ್ ಮಿಲ್ಖಾ ಸಿಂಗ್ ಅವರ ಸಾನಿಧ್ಯ ನೋಯ್ಡಾ ತಂಡಕ್ಕೆ ಹೆಚ್ಚಿನ ಬಲ ಒದಗಿಸಿದೆ. ಗೌರವ್ ಪ್ರತಾಪ್ ಸಿಂಗ್ ಮತ್ತು ರಾಜು ಅಲಿ ಮೊಲ್ಲಾ ಈ ತಂಡದ ಇನ್ನಿಬ್ಬರು ಸ್ಪರ್ಧಿಗಳು. ಏಷ್ಯನ್ ಮತ್ತು ಯೂರೋಪಿಯನ್ ಟೂರ್‌ಗಳಲ್ಲಿ ಪ್ರಭಾವಿ ಪ್ರದರ್ಶನ ನೀಡಿರುವ ಜೀವ್ ತಮ್ಮ ತಂಡಕ್ಕೆ ಟ್ರೋಫಿ ಗೆದ್ದುಕೊಡುವರೇ ಎಂಬುದನ್ನು ನೋಡಬೇಕು.

ಯೂರೋಪಿಯನ್ ಟೂರ್ ವಿಜೇತ ಎಸ್‌ಎಸ್‌ಪಿ ಚೌರಾಸಿಯ, ಏಷ್ಯನ್ ಟೂರ್ ಚಾಂಪಿಯನ್‌ಗಳಾದ ಜ್ಯೋತಿ ರಾಂಧವ, ಶಿವ ಕಪೂರ್, ಹಿಮ್ಮತ್ ಸಿಂಗ್ ರಾಯ್ ಮತ್ತು ಗಗನ್‌ಜೀತ್ ಭುಲ್ಲರ್ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಬಾಂಗ್ಲಾದೇಶದ ಸಿದ್ದೀಕುರ್ ರಹ್ಮಾನ್ ಮತ್ತು ಶ್ರೀಲಂಕಾದ ಅನುರಾ ರೋಹನ ಅವರೂ ಪಾಲ್ಗೊಳ್ಳುತ್ತಿದ್ದಾರೆ.

ಚೌರಾಸಿಯ, ಗೌರವ್ ಘಾಯ್ ಮತ್ತು ರೋಹನ ಚೆನ್ನೈ ತಂಡಲ್ಲಿದ್ದರೆ, ರಾಂಧವ, ದಿಗ್ವಿಜಯ್ ಸಿಂಗ್ ಹಾಗೂ ಹಿಮ್ಮತ್ ಗುಡಗಾಂವ್ ತಂಡವನ್ನು ಪ್ರತಿನಿಧಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.