ADVERTISEMENT

ಜೂನಿಯರ್ ವಿಶ್ವಕಪ್‌: ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಭಾರತ ತಂಡ ಇಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್‌ ಟೂರ್ನಿಯ 9 ರಿಂದ 12 ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಜಯ ಸಾಧಿಸಿತು. 

ಗುರುವಾರ ಮೇಜರ್ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 4–2 ಗೋಲುಗಳಿಂದ ಭಾರತ ಜಯ ಸಂಪಾದಿಸಿತು.
ಕ್ವಾರ್ಟರ್ ಫೈನಲ್ ಅವಕಾಶವನ್ನು ಕೈಚೆಲ್ಲುವ ಮೂಲಕ ಗಾಯಗೊಂಡ ಹುಲಿಗಳಾಂತಾಗಿದ್ದ ಭಾರತದ ಆಟಗಾರರು ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.

ಪಂದ್ಯದ ಆರಂಭದ ನಾಲ್ಕನೇ ನಿಮಿಷದಲ್ಲಿ ರಮಣ್‌ ದೀಪ್ ಸಿಂಗ್ ಗೋಲು ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ಏಳನೇ ನಿಮಿಷದಲ್ಲಿ ಡ್ರಾಗ್ ಫ್ಲಿಕ್ ಪರಿಣಿತ ಅಮಿತ್ ರೋಹಿದಾಸ್ ಗಳಿಸಿದ ಗೋಲಿನೊಂದಿಗೆ ಭಾರತ 2–0 ಮುನ್ನಡೆ ತನ್ನದಾಗಿಸಿಕೊಂಡಿತು.
ನಂತರ ಮತ್ತೆ ಮಿಂಚಿನ ಆಟ ಪ್ರದರ್ಶಿಸಿದ ರಮಣ್‌ದೀಪ್ 31 ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಮುನ್ನಡೆಯನ್ನು 3–0 ಗೆ ಹೆಚ್ಚಿಸಿದರು.

ಪಂದ್ಯದ 38 ನೇ ನಿಮಿಷದಲ್ಲಿ  ಲುಕಾಸ್ ಮಾರ್ಟಿನ್ಜ್‌ ಗೋಲು ಬಾರಿಸುವ ಮೂಲಕ  ಅರ್ಜೆಂಟೀನಾಗೆ ಮೊದಲ ಗೋಲು ತಂದಿತ್ತರು. ಆದರೆ 40 ನೇ ನಿಮಿಷದಲ್ಲಿ ಗುರ್ಜಿಂಧರ್ ಸಿಂಗ್ ಗಳಿಸಿದ ಗೋಲಿನೊಂದಿಗೆ ಭಾರತ 4–1 ರಲ್ಲಿ ಮುನ್ನಡೆ ಸಾಧಿಸಿ ಜಯವನ್ನು ಖಾತ್ರಿಪಡಿಸಿಕೊಂಡಿತು.

ಅಂತಿಮವಾಗಿ ಅರ್ಜೆಂಟೀನಾದ ಲಾವುತರೊ ಡಿಯಾಜ್ 69 ನೇ ನಿಮಿಷದಲ್ಲಿ ಗೋಲುಗಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರುಮಾಡಲಾಗಲಿಲ್ಲ.ಬದಲಾಗಿ  ಗೋಲಿನ ಅಂತರವನ್ನು ಕಡಿಮೆ ಮಾಡಿದರು.

ಈ ಜಯದೊಂದಿಗೆ ಭಾರತ ಶನಿವಾರ ನಡೆಯಲಿರುವ 9 ಮತ್ತು 10 ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

ಪಾಕಿಸ್ತಾನ ತಂಡ ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 4–0 ರಿಂದ ಜಯ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.