ADVERTISEMENT

ಜೂನ್ 5ರಂದು ಟಿಸಿಎಸ್ ವಿಶ್ವ 10ಕೆ ಓಟ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ದಿನವಾದ ಜೂನ್ 5ರಂದು ‘ಉದ್ಯಾನ ನಗರಿ’ ಬೆಂಗಳೂರು ಮತ್ತೊಂದು ಬೃಹತ್ ಮ್ಯಾರಥಾನ್‌ಗೆ ಅಣಿಯಾಗಲಿದೆ.ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸೇರಿದಂತೆ ಹಲವು ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆಯಲಿರುವ ‘ಟಿಸಿಎಸ್ ವಿಶ್ವ 10ಕೆ-2011’ ಓಟದಲ್ಲಿ ವಿಶ್ವದ ಅಗ್ರಮಾನ್ಯ ದೂರ ಅಂತರದ ಓಟಗಾರರೂ ಸೇರಿದಂತೆ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಟಾಟಾ ಕನ್ಸೆಲ್ಟೆನ್ಸಿ ಸರ್ವೀಸಸ್‌ನ ಅಧ್ಯಕ್ಷ (ಹಣಕಾಸು ಸೇವೆ) ಎನ್.ಜಿ. ಸುಬ್ರಹ್ಮಣ್ಯಂ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲೈಟ್ ಪುರುಷರು ಮತ್ತು ಮಹಿಳೆಯರ ವಿಭಾಗ, ಹಿರಿಯ ನಾಗರಿಕರ ಓಟ ಹಾಗೂ ಗಾಲಿ ಕುರ್ಚಿ, ಮುಕ್ತ 10-ಕೆ ಹಾಗೂ ಕಾರ್ಪೊರೇಟ್ ಚಾಲೆಂಜ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಲೈಟ್ ಪುರುಷರು ಮತ್ತು ಮಹಿಳೆಯರ ವಿಶ್ವ 10-ಕೆ ಓಟ ವಿಭಾಗದಲ್ಲಿ ಬಹುಮಾನ ಮೊತ್ತವನ್ನು 1,55,000 ಡಾಲರ್‌ಗಳಿಂದ 1,70,000 ಡಾಲರ್‌ಗೆ ಹೆಚ್ಚಿಸಲಾಗಿದೆ. ಇದರ ಹೆಚ್ಚಿನ ಪ್ರಯೋಜನವನ್ನು ಭಾರತೀಯ ಅಥ್ಲೀಟ್‌ಗಳು ಪಡೆಯಲಿದ್ದಾರೆ.

ಎಲೈಟ್ 10-ಕೆ ಓಟದಲ್ಲಿ ಪುರುಷರು ಹಾಗೂ ಮಹಿಳಾ ವಿಜೇತರು ಎಂದಿನಂತೆ 21,000 ಡಾಲರ್ ಬಹುಮಾನ ಪಡೆದರೆ, ಭಾರತೀಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಪುರುಷರು ಹಾಗೂ ಮಹಿಳೆಯರು 2 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ ಎಂದು ಅವರು ಹೇಳಿದರು.ಮೇ 14ರವರೆಗೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವೆಬ್ ಸೈಟ್:  www.tcsworld10k.procamrunning.in. ಮೂಲಕ ಹೆಸರು ನೋಂದಾಯಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.