ADVERTISEMENT

ಟೀಂ ಇಂಡಿಯಾಗೆ ರವಿಶಾಸ್ತ್ರಿ ಹೊಸ ಕೋಚ್

ಏಜೆನ್ಸೀಸ್
Published 11 ಜುಲೈ 2017, 11:41 IST
Last Updated 11 ಜುಲೈ 2017, 11:41 IST
ರವಿಶಾಸ್ತ್ರಿ (ಸಂಗ್ರಹ ಚಿತ್ರ)
ರವಿಶಾಸ್ತ್ರಿ (ಸಂಗ್ರಹ ಚಿತ್ರ)   

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಮಾಡಿದೆ. 2019ರ ವಿಶ್ವಕಪ್ ಪಂದ್ಯಾವಳಿವರೆಗೂ ರವಿಶಾಸ್ತ್ರಿ ಅವರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂಬರುವ ಶ್ರೀಲಂಕಾ ಪ್ರವಾಸದಿಂದ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದಾರೆ.

ಜುಲೈ 26ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡವು ಮೂರು ಟೆಸ್ಟ್, ಐದು ಏಕದಿನ ಹಾಗೂ ಒಂದು ಟಿ–20 ಪಂದ್ಯಗಳನ್ನು ಆಡಲಿದೆ.

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು ಹತ್ತು ಮಂದಿ ಪೈಕಿ ಐವರನ್ನು ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಸೋಮವಾರ ಸಂದರ್ಶನಕ್ಕೆ ಒಳಪಡಿಸಿತ್ತು. ಈ ಪೈಕಿ, ರವಿಶಾಸ್ತ್ರಿ ನಂತರ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಹೆಸರು ಮುಂಚೂಣಿಯಲ್ಲಿದ್ದವು. ಮಾಜಿ ಕ್ರಿಕೆಟಿಗರಾದ ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್ ಹಾಗೂ ವಿ.ವಿ.ಎಸ್‌. ಲಕ್ಷ್ಮಣ್ ಅವರನ್ನೊಳಗೊಂಡ ಸಿಎಸಿ ಸಂದರ್ಶನ ನಡೆಸಿತ್ತು. ನಂತರ ಆಯ್ಕೆ ನಿರ್ಧಾರವನ್ನು ತಡೆಹಿಡಿಯಲಾಗಿತ್ತು.

ADVERTISEMENT

ನಾಯಕ ವಿರಾಟ್ ಕೊಹ್ಲಿ ಜತೆಗಿನ ಉತ್ತಮ ಸಂಬಂಧದಿಂದಾಗಿ ರವಿಶಾಸ್ತ್ರಿ ಅವರೇ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರವಿಶಾಸ್ತ್ರಿ ಅವರು 2014–2016ರ ಅವಧಿಯಲ್ಲಿ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.