ADVERTISEMENT

ಟೆನಿಸ್: ಫೈನಲ್‌ಗೆ ಸೆರೆನಾ, ರಾಡ್ವಾಂಸ್ಕಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಲಂಡನ್ (ಪಿಟಿಐ): ಅಗ್ನಿಸ್ಕಾ ರಾಡ್ವಾಂಸ್ಕಾ ಸೆಂಟರ್ ಕೋರ್ಟ್‌ನಲ್ಲಿ ಗುರುವಾರ ಐತಿಹಾಸಿಕ ಸಾಧನೆಯೊಂದಕ್ಕೆ ಸಾಕ್ಷಿಯಾದರು. ಕಾರಣ 73 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಫೈನಲ್ ತಲುಪಿದ ಪೋಲೆಂಡ್‌ನ ಮೊದಲ ಆಟಗಾರ್ತಿ ಎನ್ನುವಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.

ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ರಾಡ್ವಾಂಸ್ಕಾ 6-3, 6-4ರಲ್ಲಿ ಜರ್ಮನಿಯ ಆ್ಯಂಜಲಿಕ್ ಕರ್ಬರ್ ಎದುರು ಗೆದ್ದರು.

1939ರಲ್ಲಿ ಪೋಲೆಂಡ್‌ನ ಜೇಡ್ವಿಗಾ ಜೆರ್ಜೆಜೊವಾಸ್ಕಾ ಫ್ರೆಂಚ್ ಓಪನ್ ಸಿಂಗಲ್ಸ್ ಫೈನಲ್ ತಲುಪಿದ್ದರು. ಆ ಬಳಿಕ ಇಂಥದೊಂದು ಸಾಧನೆ ಮಾಡಿದ್ದು ರಾಡ್ವಾಂಸ್ಕಾ. ಮೂರನೇ ಶ್ರೇಯಾಂಕದ ರಾಡ್ವಾಂಸ್ಕಾ ಶನಿವಾರ ನಡೆಯಲಿರುವ ಫೈನಲ್ ಹೋರಾಟದಲ್ಲಿ ನಾಲ್ಕು ಬಾರಿಯ ವಿಂಬಲ್ಡನ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ ಅವರನ್ನು ಎದುರಿಸಲಿದ್ದಾರೆ.

ನಾಲ್ಕರ ಘಟ್ಟದ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ರಾಡ್ವಾಂಸ್ಕಾ ಎದುರಾಳಿ ಆಟಗಾರ್ತಿಯನ್ನು ಸೋಲಿಸಲು ಕೇವಲ 70 ನಿಮಿಷ ತೆಗೆದುಕೊಂಡರು. `ನಾನು ಚಿಕ್ಕವಳಿದ್ದಾಗಿನಿಂದ ಇಂತಹದೊಂದು ಕನಸು ಕಾಣುತ್ತಿದ್ದೆ. ಪ್ರತಿಯೊಬ್ಬರೂ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಆಡಲು ಬಯಸುತ್ತಾರೆ. ಹಾಗಾಗಿ ನನ್ನ ಪಾಲಿಗಿದು ವಿಶೇಷ ಕ್ಷಣ~ ಎಂದು ಅವರು ಪ್ರತಿಕ್ರಿಯಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಸೆರೆನಾ 6-3, 7-6ರಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಪರಾಭವಗೊಳಿಸಿದರು.

ಬೋಪಣ್ಣ ಜೋಡಿಗೆ ಜಯ: ಭಾರತದ ರೋಹನ್ ಬೋಪಣ್ಣ ಹಾಗೂ ಚೀನಾದ ಜೀ ಜೆಂಗ್ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು 6-0, 6-3ರಲ್ಲಿ ಇಟಲಿಯ ಡೇನಿಲೆ ಬ್ರಾಸಿಯಾಲಿ ಹಾಗೂ ರಾಬರ್ಟ್ ವಿನ್ಸಿ ವಿರುದ್ಧ ಗೆದ್ದರು.

ಇಂದು ಫೆಡರರ್-ನೊವಾಕ್ ಸೆಮಿಫೈನಲ್: ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಶುಕ್ರವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಪುರುಷರ ವಿಭಾಗದ ಉಳಿದ ಕ್ವಾರ್ಟರ್ ಫೈನಲ್‌ಗಳಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ 6-7, 7-6, 6-4, 7-6ರಲ್ಲಿ ಸ್ಪೇನ್‌ನ ಡೇವಿಡ್ ಫೆರೆರೊ ಎದುರೂ, ಫ್ರಾನ್ಸ್‌ನ ಜೊ-ವಿಲ್‌ಫ್ರೆಡ್ ಸೊಂಗಾ 7-6, 4-6, 7-6, 6-2ರಲ್ಲಿ ಜರ್ಮನಿಯ ಫಿಲಿಪ್ ಕೊಹ್ಲಶ್ರೆಬರ್ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.