ADVERTISEMENT

ಟೆಸ್ಟ್‌ ಕ್ರಿಕೆಟ್‌: ಮಂಜಿನ ಮರೆಯಲ್ಲಿ ಮ್ಯಾಥ್ಯೂಸ್‌–ಚಾಂಡಿಮಲ್‌ ಬೆಳಗು

ಕೊನೆಯ ಅವಧಿಯಲ್ಲಿ ಭಾರತದ ಹಿಡಿತ; ಫಾಲೊ ಆನ್‌ನಿಂದ ತಪ್ಪಿಸಿಕೊಂಡ ಶ್ರೀಲಂಕಾ ತಂಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಟೆಸ್ಟ್‌ ಕ್ರಿಕೆಟ್‌: ಮಂಜಿನ ಮರೆಯಲ್ಲಿ ಮ್ಯಾಥ್ಯೂಸ್‌–ಚಾಂಡಿಮಲ್‌ ಬೆಳಗು
ಟೆಸ್ಟ್‌ ಕ್ರಿಕೆಟ್‌: ಮಂಜಿನ ಮರೆಯಲ್ಲಿ ಮ್ಯಾಥ್ಯೂಸ್‌–ಚಾಂಡಿಮಲ್‌ ಬೆಳಗು   

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರವೂ ಮಂಜಿನ ಆಟ ಮುಂದುವರಿಯಿತು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲೂ ಮಂಜು ‘ಪರದೆ’ ಹಾಕಿತ್ತು. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತದ ಬೌಲಿಂಗ್ ದಾಳಿಯನ್ನು ಮೆಟ್ಟಿನಿಂತ ಏಂಜೆಲೊ ಮ್ಯಾಥ್ಯೂಸ್ ಮತ್ತು ದಿನೇಶ್ ಚಾಂಡಿಮಲ್ ಬೆಳಗಿದರು.

ಇವರಿಬ್ಬರ ಮೋಹಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತರಿಕೆ ಕಂಡಿದ್ದು ಫಾಲೊ ಆನ್‌ನಿಂದ ತ‍ಪ್ಪಿಸಿಕೊಂಡಿದೆ. ಭರ್ಜರಿ ಶತಕ ಸಿಡಿಸಿದ ಮ್ಯಾಥ್ಯೂಸ್‌ 111 ರನ್‌ ಗಳಿಸಿ ಔಟಾದರೆ ದಿನೇಶ್ ಚಾಂಡಿಮಲ್‌ ಶತಕ ಗಳಿಸಿ ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಮೊದಲ ಎರಡು ಅವಧಿಯಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಆಧಿಪತ್ಯ ಸ್ಥಾಪಿಸಿದರು. ಆದರೆ ಕೊನೆಯ ಅವಧಿಯಲ್ಲಿ ತಿರುಗೇಟು ನೀಡಿದ ಭಾರತ ಎದುರಾಳಿಗಳ ಆರು ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ದಿನದಾಟದ ಮುಕ್ತಾಯಕ್ಕೆ ಲಂಕಾ ಒಂಬತ್ತು ವಿಕೆಟ್‌ಗಳಿಗೆ 356 ರನ್‌ ಗಳಿಸಿದ್ದು ಮೊದಲ ಇನಿಂಗ್ಸ್‌ನಲ್ಲಿ 180 ರನ್‌ಗಳಿಂದ ಹಿಂದೆ ಉಳಿದಿದೆ. ನಾಯಕನ ಜೊತೆ ಲಕ್ಷಣ್‌ ಸಂಡಗನ್‌ ಕ್ರೀಸ್‌ನಲ್ಲಿದ್ದಾರೆ.

ಎರಡು ವರ್ಷಗಳ ನಂತರ ಶತಕ

ಶ್ರೀಲಂಕಾ ತಂಡ ಭಾನುವಾರ 131 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಜೊತೆಯಾದ ಹಿರಿಯ ಆಟಗಾರರಾದ ಏಂಜೆಲೊ ಮ್ಯಾಥ್ಯೂಸ್ ಮತ್ತು ದಿನೇಶ್ ಚಾಂಡಿಮಲ್‌ ಸೋಮವಾರ ಬೆಳಿಗ್ಗೆ ದಿಟ್ಟತನದಿಂದ ಭಾರತದ ಬೌಲಿಂಗ್‌ ದಾಳಿಯನ್ನು ಎದುರಿಸಿದರು. ಮೂರು ಬಾರಿ ಜೀವದಾನ ಪಡೆದ ಮ್ಯಾಥ್ಯೂಸ್ ಎರಡು ವರ್ಷಗಳ ನಂತರ ಶತಕ ಸಿಡಿಸಿ ಮಿಂಚಿದರು. 99 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಅವರನ್ನು ಬೌಂಡರಿಗೆ ಅಟ್ಟಿದ ಅವರು ಬ್ಯಾಟ್ ಎತ್ತಿ ಸಂಭ್ರಮಿಸಿದರು. ಅವರ ಕೊನೆಯ ಶತಕವೂ ಭಾರತದ ವಿರುದ್ಧ, ಗಾಲ್‌ನಲ್ಲಿ ಮೂಡಿ ಬಂದಿತ್ತು. ಟೆಸ್ಟ್ ಪಂದ್ಯವೊಂದರಲ್ಲಿ ಅವರು ಭಾರತದಲ್ಲಿ ಗಳಿಸಿದ ಮೊದಲ ಶತಕ ಇದು.

ಚಹಾ ವಿರಾಮಕ್ಕೆ ಸ್ವಲ್ಪ ಮುನ್ನ ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದ ಮ್ಯಾಥ್ಯೂ ನಾಲ್ಕನೇ ವಿಕೆಟ್‌ಗೆ ನಾಯಕನ ಜೊತೆ 181 ರನ್‌ ಸೇರಿಸಿದರು. ಸದೀರ ಸಮರವಿಕ್ರಮ ಐದನೇ ವಿಕೆಟ್‌ಗೆ ಚಾಂಡಿಮಲ್ ಅವರೊಂದಿಗೆ 61 ರನ್‌ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಇವರಿಬ್ಬರ ಜೊತೆಯಾಟ ಮುಕ್ತಾಯಗೊಂಡ ಕೂಡಲೇ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಹೀಗಾಗಿ ಸುಲಭವಾಗಿ ಫಾಲೊ ಆನ್ ತಪ್ಪಿಸಿಕೊಳ್ಳಬಹುದು ಎಂದು ಲೆಕ್ಕ ಹಾಕಿದ್ದ ಲಂಕಾದ ಲೆಕ್ಕಾಚಾರಕ್ಕೆ ಪೆಟ್ಟು ಬಿತ್ತು. ಆದರೂ ನಾಯಕನ ತಾಳ್ಮೆಯ ಆಟದಿಂದಾಗಿ ತಂಡ ಪ್ರಯಾಸದಲ್ಲಿ ಫಾಲೊ ಆನ್‌ ತಪ್ಪಿಸಿಕೊಂಡಿತು. ಆದರೂ 26 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

ಸದೀರ ಸಮರವಿಕ್ರಮ ಅವರನ್ನು ಇಶಾಂತ್ ಶರ್ಮಾ ಪೆವಿಲಿಯನ್‌ಗೆ ಕಳುಹಿಸಿದರೆ ಚೊಚ್ಚಲ ಪಂದ್ಯ ಆಡುತ್ತಿರುವ ರೋಷನ್ ಸಿಲ್ವಾ ಮತ್ತು ವಿಕೆಟ್ ಕೀಪರ್‌ ನಿರೋಷನ್ ಡಿಕ್ವೆಲ್ಲಾ ಅವರನ್ನು ಅಶ್ವಿನ್ ಔಟ್ ಮಾಡಿದರು. ಇಬ್ಬರೂ ಸೊನ್ನೆ ಸುತ್ತಿದರು.

ಕಾಡಿದ ಚಾಂಡಿಮಲ್‌

ವಾಯು ಮಾಲಿನ್ಯದಿಂದ ಬಳಲಿದ ಶ್ರೀಲಂಕಾ ಆಟಗಾರರು ಭಾನುವಾರ ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ ಎಂದು ದೂರಿದ್ದರು. ಹೀಗಾಗಿ ನಿರೀಕ್ಷೆಗೂ ಮೊದಲು ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿದ್ದರು. ಸೋಮವಾರ ಬೆಳಿಗ್ಗೆ ಕೆಲಹೊತ್ತು ಚಾಂಡಿಮಲ್‌ ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಟ್ರೇನರ್ ಅವರನ್ನು ಕರೆಸಿಕೊಂಡು ಸಲಹೆ ಪಡೆದಿದ್ದರು. ನಂತರ ಸುಧಾರಿಸಿಕೊಂಡು ಭಾರತದ ಬೌಲರ್‌ಗಳನ್ನು ಕಾಡಿದರು. ಶ್ರೀಲಂಕಾ ಪರ ವೇಗದ 10ನೇ ಶತಕ ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.