ADVERTISEMENT

ಡಬಲ್ಸ್‌ನಲ್ಲಿ ಭೂಪತಿ- ಬೋಪಣ್ಣಗೆ ಸೋಲು

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಮೆಲ್ಬರ್ನ್ (ಪಿಟಿಐ): ಡಬಲ್ಸ್ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೋಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡಿತು.

ಮೆಲ್ಬರ್ನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 13ನೇ ಶ್ರೇಯಾಂಕದ ಅಮೆರಿಕದ ರಾಜೀವ್ ರಾಮ್-ಸ್ಕಾಟ್ ಲಿಪ್ಸಿಕಿ ಜೋಡಿ 7-6, 6-2ರಲ್ಲಿ ನಾಲ್ಕನೇ ಶ್ರೇಯಾಂಕದ ಭಾರತದ ಜೋಡಿಯನ್ನು ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಕಳೆದ ವರ್ಷ ಲಿಯಾಂಡರ್ ಪೇಸ್ ಜೊತೆಗೂಡಿ ಇದೇ ಟೂರ್ನಿಯಲ್ಲಿ ಆಡಿದ್ದ ಭೂಪತಿ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದರು. ಫೈನಲ್‌ನಲ್ಲಿ ಅಗ್ರ ಶ್ರೇಯಾಂಕ ಅಮೆರಿಕದ ಬಾಬ್ ಹಾಗೂ ಮೈಕ್ ಬ್ರಯಾನ್ ಸಹೋದರರ ಎದುರು ಸೋಲು ಕಂಡಿದ್ದರು. ಆದರೆ, ಈ ಸಲ ಬೋಪಣ್ಣ ಜೊತೆಗೂಡಿ ಆಡಿದ ಭೂಪತಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹೋರಾಟ ಅಂತ್ಯಗೊಳಿಸಿದರು.

51 ನಿಮಿಷ ನಡೆದ ಮೊದಲ ಸೆಟ್‌ನಲ್ಲಿ ಗಂಟೆಗೆ 206 ಕಿ.ಮೀ ವೇಗದಲ್ಲಿ ಚೆಂಡನ್ನು ಸರ್ವ್ ಮಾಡಿ ಭಾರತದ ಜೋಡಿ ಭಾರಿ ಪ್ರತಿರೋಧ ತೋರಿತು. ಇದಕ್ಕೆ ಪ್ರತಿಯಾಗಿ ಅಮೆರಿಕದ ಆಟಗಾರರು ಪ್ರಬಲ ಪೈಪೋಟಿ ಒಡ್ಡಿ ಪಂದ್ಯವನ್ನು ಗೆದ್ದುಕೊಂಡರು. ಭೂಪತಿ-ಬೋಪಣ್ಣ ಕೆಲ ಕೆಟ್ಟ ಸರ್ವ್‌ಗಳನ್ನು ಮಾಡಿ ಪಂದ್ಯ ಕೈ ಚೆಲ್ಲಿದರು.

ಕ್ವಾರ್ಟರ್‌ಫೈನಲ್‌ಗೆ ಪೇಸ್-ರಾಡೆಕ್:  ಭಾರತದ ಲಿಯಾಂಡರ್ ಪೇಸ್-ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೋಡಿ        ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಈ ಜೋಡಿ 7-5, 7-6ರಲ್ಲಿ ಫ್ರಾನ್ಸ್‌ನ ಮೈಕಲ್ ಲೊದ್ರಾ-ಸರ್ಬಿಯಾದ ನೆನಾದ್ ಜಿಮೊಂಜಿಕ್ ಎದುರು ಗೆಲುವು ಸಾಧಿಸಿತು.

99 ನಿಮಿಷ ನಡೆದ ಪಂದ್ಯದ ಎರಡೂ ಸೆಟ್‌ಗಳಲ್ಲಿ ಪೇಸ್-ಸ್ಟೆಪಾನೆಕ್ ಅವರು ಪ್ರಬಲ ಪೈಪೋಟಿ ಎದುರಿಸಬೇಕಾಯಿತು. ಪೇಸ್ ಮೂರು ಸಲ (1999, 2006 ಹಾಗೂ 2011) ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್ ಪ್ರವೇಶಿಸಿದ್ದರೂ, ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ.

ಈ ಸಲ ಜೆಕ್ ಗಣರಾಜ್ಯದ ಆಟಗಾರನ ಜೊತೆ ಆಡುತ್ತಿರುವ ಭಾರತದ 38 ವರ್ಷದ ಆಟಗಾರ ಬಹು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.