ನವದೆಹಲಿ (ಪಿಟಿಐ): ಮುಂದಿನ ತಿಂಗಳು ಕೊರಿಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಸೋಮದೇವ್ ದೇವವರ್ಮನ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಸಿಂಗಲ್ಸ್ ಆಟಗಾರ ಸೋಮದೇವ್ ಸಾರಥ್ಯದ ತಂಡದಲ್ಲಿ ಯೂಕಿ ಭಾಂಬ್ರಿ, ರೋಹನ್ ಬೋಪಣ್ಣ ಮತ್ತು ಸಾಕೇತ್ ಮೈನೇನಿ ಅವರಿದ್ದಾರೆ. ಆನಂದ್ ಅಮೃತರಾಜ್ ನಾಯಕ ಮತ್ತು ಜೇಶನ್ ಅಲಿ ತರಬೇತುದಾರರಾಗಿದ್ದಾರೆ. ಎಐಟಿಎ ರಾಷ್ಟ್ರೀಯ ಆಯ್ಕೆ ಸಮಿತಿ ಸೋಮವಾರ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಿತು.
ಏಷ್ಯಾ/ಒಸೇನಿಯಾ ಗುಂಪು–1ರ ಪಂದ್ಯ ಏಪ್ರಿಲ್ 4ರಿಂದ 6ರ ವರೆಗೆ ಬೂಸಾನ್‌ನಲ್ಲಿ ನಡೆಯಲಿದ್ದು, ಭಾರತ ಹಾಗೂ ಕೊರಿಯಾ ನಡುವಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಅಲ್ಲಿ ಹೋರಾಟ ನಡೆಸಲಿದೆ.
ಹೋದ ವರ್ಷ ನವದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 1–4ರಲ್ಲಿ ಕೊರಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಆಗ ಆಡಿದ್ದ ತಂಡವೇ ಈಗಲೂ ಕಣಕ್ಕಿಳಿಯಲಿದೆ. ಉಭಯ ತಂಡಗಳು ಇದುವರೆಗೂ ಒಟ್ಟು 9 ಸಲ ಮುಖಾಮುಖಿಯಾಗಿವೆ. ಆರು ಪಂದ್ಯಗಳಲ್ಲಿ ಕೊರಿಯಾ ಪ್ರಾಬಲ್ಯ ಮೆರೆದಿದೆ. ಜೀವನ್ ನೆಡುಂಚೆಳಿಯನ್ ಮತ್ತು ಸನಮ್ ಸಿಂಗ್ ಅವರು ಕಾಯ್ದಿರಿಸಿದ ಆಟಗಾರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.