ನವದೆಹಲಿ (ಪಿಟಿಐ): ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ತೋರಿದ ಅಮೋಘ ಪ್ರದರ್ಶನ ಹಾಗೂ ಫೈನಲ್ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ತೆಗೆದುಕೊಂಡು ನಿರ್ಧಾರಗಳ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸ್ದ್ದಿದು `ಸಮತೋಲನದಿಂದ ಕೂಡಿರುವ ತಂಡ' ಎಂದು ಹೇಳಿದ್ದಾರೆ.
`ಅಮೋಘ ಕ್ಷೇತ್ರರಕ್ಷಣೆ, ಕಠಿಣ ಪರಿಸ್ಥಿತಿಯಲ್ಲಿ ತೋರಿದ ಛಲದ ಆಟ ಭಾರತದ ಸಾಧನೆಗೆ ಕಾರಣ. ವಿರಾಟ್ ಕೊಹ್ಲಿ ಮತ್ತು ರವಿಂದ್ರ ಜಡೇಜ ಕಟ್ಟಿದ ಇನಿಂಗ್ಸ್ ಮೆಚ್ಚುವಂತದ್ದು' ಎಂದು `ದ ವಾಲ್' ಖ್ಯಾತಿಯ ದ್ರಾವಿಡ್ ನುಡಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಗೆಲುವಿನ ಓಟದೊಂದಿಗೆ ಟ್ರೋಫಿ ಎತ್ತಿ ಹಿಡಿರುವ ದೋನಿ ಪಡೆ, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಐದು ರನ್‌ಗಳಿಂದ ಮಣಿಸಿತ್ತು.
`ಚಾಂಪಿಯನ್ಸ್ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದವು. ಎಲ್ಲಾ ತಂಡಗಳಿಗಿಂತ ಭಾರತದ ಕ್ಷೇತ್ರರಕ್ಷಣೆ ವಿಭಾಗ ಚುರುಕಾಗಿತ್ತು. ಉತ್ತಮ ತಂಡವನ್ನು ಆಯ್ಕೆ ಮಾಡಿದ ಆಯ್ಕೆದಾರರಿಗೂ ಈ ಸಾಧನೆಯ ಶ್ರೇಯ ಸಲ್ಲುತ್ತದೆ. ಟೂರ್ನಿಗೆ ತೆರಳುವ ಮುನ್ನ ಕಠಿಣ ಪರಿಸ್ಥಿತಿ ಎದುರಿಸಿದ್ದ ಆಟಗಾರರು, ಟ್ರೋಫಿ ಗೆಲ್ಲುವ ಮೂಲಕ ತಮ್ಮ ಕರ್ತವ್ಯವನ್ನು ಅಮೋಘವಾಗಿ ನಿಭಾಯಿಸಿದ್ದಾರೆ. 2015ರ ಏಕದಿನ ವಿಶ್ವಕಪ್ ಟೂರ್ನಿಗೆ ಚಾಂಪಿಯನ್ಸ್ ಟ್ರೋಫಿಯ ಗೆಲುವು ಹೊಸ ವಿಶ್ವಾಸ ಮೂಡಿಸಿದೆ' ಎಂದೂ 40 ವರ್ಷದ ದ್ರಾವಿಡ್ ಅಭಿಪ್ರಾಯಪಟ್ಟರು.
`ಮುಂದಿನ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸವಾಲು ಇದೆ. 2011ರ ವಿಶ್ವಕಪ್‌ನಲ್ಲಿ ಆಡಿದ ಕೆಲ ಆಟಗಾರರು ಮಾತ್ರ ಈಗ ತಂಡದಲ್ಲಿದ್ದಾರೆ. ಹೊಸ ಆಟಗಾರರು ಭಾರತ ತಂಡದ ಸಾಮರ್ಥ್ಯ ಹೆಚ್ಚಿಸಿದ್ದಾರೆ.
ವೇಗದ ಬೌಲಿಂಗ್ ವಿಭಾಗ ಬಲಗೊಳ್ಳಲಿದೆ. ಕಪಿಲ್ ದೇವ್, ಮನೋಜ್ ಪ್ರಭಾಕರ್ ಅವರ ನಂತರ ಭಾರತ ವೇಗದ ಬೌಲಿಂಗ್‌ನಲ್ಲಿ ಕೊಂಚ ಕೊರತೆ ಎದುರಿಸುತ್ತಿದೆ. ಆದರೆ, ಈ ಕೊರತೆಯನ್ನು ಆಲ್‌ರೌಂಡರ್ ಇರ್ಫಾನ್ ಪಠಾಣ್ ತುಂಬಬಲ್ಲ ಸಾಮರ್ಥ್ಯ ಹೊಂದಿದ್ದಾರೆ' ಎಂದು ಅವರು ಹೇಳಿದರು.
`ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ಮತ್ತೊಂದು ಕಠಿಣ ಸವಾಲು ಎದುರಾಗಲಿದೆ. ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆದರೆ, ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನ ಹೊಂದಿದೆ. ಈ ಪ್ರವಾಸದಲ್ಲಿ ದೋನಿ ಪಡೆಗೆ ಭಿನ್ನ ಸವಾಲು ಎದುರಾಗಲಿದೆ. ಡೇಲ್ ಸ್ಟೇನ್, ಮಾರ್ನೆ ಮಾರ್ಕೆಲ್ ಸವಾಲನ್ನು ಎದುರಿಸುವುದು ಸುಲಭವಲ್ಲ' ಎಂದೂ ದ್ರಾವಿಡ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.