ADVERTISEMENT

ತಂಡ ಸೋತರೂ ಬಾಂಗ್ಲಾದಲ್ಲಿ ಇನ್ನೂ ನಿಲ್ಲದ ಕ್ರೇಜ್!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST
ತಂಡ ಸೋತರೂ ಬಾಂಗ್ಲಾದಲ್ಲಿ ಇನ್ನೂ ನಿಲ್ಲದ ಕ್ರೇಜ್!
ತಂಡ ಸೋತರೂ ಬಾಂಗ್ಲಾದಲ್ಲಿ ಇನ್ನೂ ನಿಲ್ಲದ ಕ್ರೇಜ್!   

ಢಾಕಾ: ‘ನಮ್ಮ ದೇಶದ ತಂಡ ಸೋತಿರಬಹುದು. ಆದರೆ ನಮ್ಮ ಕ್ರಿಕೆಟ್ ಪ್ರೀತಿಗೆ ಸೋಲಿಲ್ಲ’ - ಹಜ್ರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಕೆಲ ಅಭಿಮಾನಿಗಳು ಪೋಸ್ಟರ್ ಹಿಡಿದು ನಿಂತಿದ್ದರು.

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಆಡಲು ತಮ್ಮ ದೇಶಕ್ಕೆ ಆಗಮಿಸುವ ತಂಡಗಳನ್ನು ಸ್ವಾಗತಿಸಲು ಅವರು ಹೂಗುಚ್ಛ ಹಿಡಿದು ಬಂದಿದ್ದರು. ಆದರೆ ಭಾನುವಾರ ಇಲ್ಲಿಗೆ ಯಾವುದೇ ತಂಡ ಆಗಮಿಸಲಿಲ್ಲ.

ತವರಿನ ತಂಡ ವಿಶ್ವಕಪ್‌ನಿಂದ ನಿರ್ಗಮಿಸಿರಬಹುದು, ಆದರೆ ಇಲ್ಲಿನ ಅಭಿಮಾನಿಗಳ ಕ್ರಿಕೆಟ್ ಪ್ರೀತಿ ಕಡಿಮೆಯಾಗಿಲ್ಲ. ನೆರೆಯ ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ನಡುವೆ ಚೆನ್ನೈನಲ್ಲಿ ನಡೆದ ಪಂದ್ಯವನ್ನು ಟಿವಿಯಲ್ಲಿ ಕುತೂಹಲದಿಂದ ವೀಕ್ಷಿಸುತ್ತಿದ್ದ ಪರಿಯೇ ಇದಕ್ಕೆ ಸಾಕ್ಷಿ. ಅಕಸ್ಮಾತ್ ಬಾಂಗ್ಲಾ ತಂಡ ಕ್ವಾರ್ಟರ್ ಫೈನಲ್ ತಲುಪಿದ್ದರೆ ಇವರು ಸಡಗರ ಯಾವ ರೀತಿ ಇರಬಹುದಿತ್ತು?!

ಮಿರ್‌ಪುರ್‌ಗೆ ತೆರಳುವ ಹಾದಿ ಮಧ್ಯೆ ಸಿಗುವ ತುರಗ್ ನದಿಯ ತೀರದಲ್ಲಿನ ಸ್ಲಮ್‌ಗಳಲ್ಲೂ ವಿಶ್ವಕಪ್ ಕ್ರಿಕೆಟ್ ಕ್ರೇಜ್. ಪುಟ್ಟ ಪುಟ್ಟ ಗುಡಿಸಲಿನಲ್ಲೂ ಗುಂಪುಕಟ್ಟಿ ಟಿವಿ ವೀಕ್ಷಿಸುತ್ತಿದ್ದ ರೀತಿ ಈ ದೇಶದ ಕ್ರಿಕೆಟ್ ಪ್ರೀತಿಯನ್ನು ಬಿಚ್ಚಿಡುತ್ತದೆ. ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೂ ಯಾರ್ಯಾರು ಕ್ವಾರ್ಟರ್ ಫೈನಲ್ ಪ್ರವೇಶಿಸಬಹುದು ಎಂಬ ಕುತೂಹಲ!

ಒಂದು ಕಾಲದಲ್ಲಿ ಫುಟ್‌ಬಾಲ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಈ ದೇಶದಲ್ಲಿ ಈಗ ಕ್ರಿಕೆಟ್‌ಗೆ ಮಹತ್ವದ ಸ್ಥಾನ. ಫುಟ್‌ಬಾಲ್ ಮೈದಾನವಾಗಿದ್ದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣ ಈಗ ಕ್ರಿಕೆಟ್‌ಗೆ ಮೀಸಲು. ಹಾಗೇ, ಪುಟ್ಟ ಸ್ಥಳವಿದ್ದರೂ ಅಲ್ಲಿ ಮಕ್ಕಳ ಕ್ರಿಕೆಟ್ ಕಲರವ ಕೇಳಬಹುದು. ರಿಕ್ಷಾ ವಾಲಾ, ಆಟೋ ಚಾಲಕರ ನಡುವೆಯೂ  ಕ್ರಿಕೆಟ್‌ನದ್ದೇ ಮಾತು. ಭಾರತ, ಪಾಕ್‌ಗಿಂತ ಈ ಬಾರಿ ಈ ದೇಶದಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದೆ.

ವಿಶ್ವಕಪ್ ಉದ್ಘಾಟನೆಯ ಯಶಸ್ವಿ ಆಯೋಜನೆ ಬಗ್ಗೆ ಜಗತ್ತಿನ ಮಾಧ್ಯಮಗಳಿಂದ ಹೊಗಳಿಕೆ ವ್ಯಕ್ತವಾಗಿರುವುದು ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ. ವಿಮಾನ ನಿಲ್ದಾಣ, ನಗರದ ಪ್ರಮುಖ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳ ಗೋಡೆಗಳ ಮೇಲೆಲ್ಲಾ ವಿಶ್ವಕಪ್ ಸಂಬಂಧಿಸಿದ ಜಾಹೀರಾತುಗಳು, ನಮ್ಮ ದೇಶಕ್ಕೆ ನಿಮಗೆ ಸ್ವಾಗತ, ವಿಶ್ವಕಪ್ ಆಯೋಜಿಸಲು ನಮಗೆ ಹೆಮ್ಮೆ ಎನ್ನುವ ಬರಹಗಳು, ಈ ದೇಶದ ತಂಡದ ನಾಯಕ ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್ ಚಿತ್ರಗಳು ರಾರಾಜಿಸುತ್ತಿವೆ. ಪ್ರವಾಸೋದ್ಯಮಕ್ಕೆ ಕೂಡ ಈ ವಿಶ್ವಕಪ್‌ನಿಂದ ಸಹಾಯವಾಗಿದೆ.

ವಿಶೇಷವೆಂದರೆ ಬಾಂಗ್ಲಾದೇಶದ ಪಂದ್ಯಗಳು ಇದ್ದಾಗ ರಜೆ ಕೂಡ ಘೋಷಿಸಲಾಗಿತ್ತು. ಬಾಂಗ್ಲಾ ತಂಡ ಆಡುವಾಗ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಮತ್ತೊಂದು ಕಾರಣ. ಸುತ್ತಮುತ್ತಲಿನ ಕಾರ್ಖಾನೆಗಳೂ ಸ್ಥಗಿತಗೊಂಡಿದ್ದವು. ಮನೆಗಳಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಲು ವಿದ್ಯುತ್ ಲಭಿಸಲಿ ಎಂಬುದು ಅದಕ್ಕೆ ಕಾರಣವಂತೆ. ಫೈನಲ್ ಪಂದ್ಯ ಮುಗಿಯುವವರೆಗೆ ಪ್ರತಿದಿನ ಸಂಜೆ ಆರು ಗಂಟೆ ಕಾಲ ಕಾರ್ಖಾನೆಗಳನ್ನು ಸ್ಥಗಿತಗೊಳಿಸಲು ಸರ್ಕಾರವೇ ಆದೇಶಿಸಿದೆ.

ಒಟ್ಟು ಆರು ಪಾಯಿಂಟ್ ಗಳಿಸಿದ ಬಾಂಗ್ಲಾ ತಂಡ ‘ಬಿ’ ಗುಂಪಿನಲ್ಲಿ ಐದನೇ ಸ್ಥಾನ ಪಡೆದಿದೆ. ವಿಂಡೀಸ್ ಕೂಡ ಆರು ಪಾಯಿಂಟ್ ಹೊಂದಿದೆ. ಆದರೆ ರನ್‌ರೇಟ್ ಆಧಾರದ ಮೇಲೆ ಅವರು ಮುಂದಿನ ಹಂತ ಪ್ರವೇಶಿಸಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ್ದು ಈ ವಿಶ್ವಕಪ್‌ನಲ್ಲಿ ಬಾಂಗ್ಲಾದ ಮಹತ್ವದ ಸಾಧನೆ. ಆದರೆ ವಿಂಡೀಸ್ ಎದುರು 58 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 78 ರನ್‌ಗಳಿಗೆ ಆಲ್‌ಔಟ್ ಆದ ಈ ತಂಡದವರು ಅಭಿಮಾನಿಗಳು ತಮ್ಮ ಮೇಲಿಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ.

ಹಾಗಾಗಿಯೇ ಮಾಜಿ ಆಟಗಾರ ಹಾಗೂ ಕ್ರಿಕೆಟ್ ವಿಶ್ಲೇಷಕ ನವಜ್ಯೋತ್ ಸಿಂಗ್ ಸಿಧು, ಈ ತಂಡವನ್ನು ಜಿರಲೆಗೆ  ಹೋಲಿಸಿದ್ದಾರೆ. ‘ಪಕ್ಷಿಯಂತೆ ಹಾರಾಡಲು ಜಿರಲೆ ಪ್ರಯತ್ನಿಸುತ್ತಿದೆ’ ಎಂದಿದ್ದಾರೆ.

ಕ್ವಾರ್ಟರ್ ಫೈನಲ್ ಹೋರಾಟಕ್ಕೆ ಸಜ್ಜು: ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ ಕ್ವಾರ್ಟರ್ ಫೈನಲ್ ಪಂದ್ಯ ಆಯೋಜಿಸಲು ಸಿದ್ಧವಾಗಿದೆ. ಈ ಕ್ರೀಡಾಂಗಣದಲ್ಲಿ ಮಾರ್ಚ್ 23ರಂದು ನಡೆಯಲಿರುವ ಮೊದಲ ಎಂಟರ ಘಟ್ಟದ ಪಂದ್ಯದಲ್ಲಿ ಪಾಕಿಸ್ತಾನ (ಎ1)-ವೆಸ್ಟ್‌ಇಂಡೀಸ್ (ಬಿ4) ತಂಡಗಳು ಪೈಪೋಟಿ ನಡೆಸಲಿವೆ.
ಮಾ. 25ರಂದು ನಡೆಯಲಿರುವ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ನ್ಯೂಜಿಲೆಂಡ್ (ಎ4) ಹಾಗೂ ದಕ್ಷಿಣ ಆಫ್ರಿಕಾ (ಬಿ1) ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.