ಬೆಂಗಳೂರು: `ನನ್ನ ಮಟ್ಟಿಗೆ ಇದೊಂದು ಸ್ಮರಣೀಯ ಟೂರ್ನಿ. ಇಷ್ಟು ದಿನಗಳ ಕಠಿಣ ಪ್ರಯತ್ನಕ್ಕೆ ಲಭಿಸಿದ ಟ್ರೋಫಿ ಇದು. ಚಾಂಪಿಯನ್ ಆದ ಆ ಕ್ಷಣವನ್ನು ನಾನು ಯಾವತ್ತಿಗೂ ಮರೆಯಲಾರೆ. ಏಕೆಂದರೆ ನಾನು ಈ ಹಿಂದೆ ಎರಡು ಬಾರಿ ವಿಫಲಳಾಗಿದ್ದೆ~
-ಲಂಡನ್‌ನಲ್ಲಿ ನಡೆದ ವಿಶ್ವ ಮಹಿಳಾ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಶುಕ್ರವಾರ ಸ್ವದೇಶಕ್ಕೆ ಹಿಂತಿರುಗಿರುವ 47 ವರ್ಷ ವಯಸ್ಸಿನ ಆರ್. ಉಮಾದೇವಿ ಅವರ ಈ ಸಂತೋಷಕ್ಕೆ ಕಾರಣವಿತ್ತು.
ಬೆಂಗಳೂರಿನ ಉಮಾ ಕೆಂಬ್ರಿಜ್ ಸ್ನೂಕರ್ ಸೆಂಟರ್‌ನಲ್ಲಿ ಗುರುವಾರ ನಡೆದ ಫೈನಲ್‌ನಲ್ಲಿ ಸತತ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಇಂಗ್ಲೆಂಡ್‌ನ ಎಮ್ಮಾ ಬೋನಿ ಅವರನ್ನು ಸೋಲಿಸಿದ್ದು ವಿಶೇಷ. 201-143ರಲ್ಲಿ ಕಳೆದ ಬಾರಿಯ ಚಾಂಪಿಯನ್ ಎಮ್ಮಾ ಅವರನ್ನು ಮಣಿಸಿದಾಗ ಉಮಾ ಅವರಿಗೆ ಜಗತ್ತನ್ನೇ ಗೆದ್ದ ಖುಷಿ.
`ಈ ಪ್ರಶಸ್ತಿ ಸಹಜವಾಗಿಯೇ ನನ್ನಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸಿದೆ. ಮುಂದಿನ ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡರೂ ಗೆದ್ದು ಬರುವ ಭರವಸೆ ಇದೆ. ಈ ನನ್ನ ಸಾಧನೆಗೆ ಪತಿ ನಾಗರಾಜ್ ಕಾರಣ. ಜೊತೆಗೆ ಕೆಜಿಎಸ್ ಕ್ಲಬ್ ಹಾಗೂ ಕೆಎಸ್‌ಬಿಎ ಕೂಡ ಕಾರಣ~ ಎಂದು ಉಮಾ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು. ಅವರು ಈ ಚಾಂಪಿಯನ್‌ಷಿಪ್‌ನಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲೂ ಪ್ರಶಸ್ತಿ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.