ADVERTISEMENT

ನೂತನ ಕೃತಕ ಟರ್ಫ್; ಫಿಫಾ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು (ಕೆಎಸ್‌ಎಫ್‌ಎ) ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನೂತನವಾಗಿ ಅಳವಡಿಸಿರುವ ಕೃತಕ ಟರ್ಫ್‌ಗೆ ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಮೆಚ್ಚುಗೆ ವ್ಯಕ್ತಪಡಿಸಿದೆ.

ಫಿಫಾದ ಟರ್ಫ್ ಪರಿಣತ ಎರಿಕ್ ಹ್ಯಾರಿಸನ್ ಸಾರಥ್ಯದ ತಂಡ ಮಂಗಳವಾರ ಹಾಗೂ ಬುಧವಾರ  ಟರ್ಫ್ ಪರಿಶೀಲನೆ ನಡೆಸಿತು. `ಟರ್ಫ್ ತುಂಬಾ ಚೆನ್ನಾಗಿದೆ. ಉತ್ತಮ ಸ್ಥಿತಿಯಲ್ಲಿದೆ. ಈ ಬಗ್ಗೆ ನನಗೆ ತೃಪ್ತಿ ಇದೆ. ಈ ಟರ್ಪ್ ಬಗ್ಗೆ ಯಾವುದೇ ದೂರುಗಳಿಲ್ಲ~ ಎಂದು ಇಂಗ್ಲೆಂಡ್‌ನ ಹ್ಯಾರಿಸನ್ ತಿಳಿಸಿದರು.

ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೃತಕ ಟರ್ಫ್ ಹಾಸಲಾಗಿದೆ. ಇಲ್ಲಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಫಿಫಾ ಟರ್ಫ್ ಹಾಸಲು ಉದ್ಯಾನ ನಗರಿಯನ್ನು ಆಯ್ಕೆ ಮಾಡಿತ್ತು.ಆದರೆ ಈ ಪರಿಶೀಲನೆಯೇ ಅಂತಿಮವಲ್ಲ. ಏಕೆಂದರೆ ಫಿಫಾ ತಾಂತ್ರಿಕ ಸಮಿತಿ ಕೂಡ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಬೇಕಾಗಿದೆ.

`ಫಿಫಾ ತಾಂತ್ರಿಕ ಸಮಿತಿ ಕೂಡ ಬೇರೆ ಬೇರೆ ದೃಷ್ಟಿಕೋನದಲ್ಲಿ ಪರಿಶೀಲನೆ ನಡೆಸಬೇಕಾಗಿದೆ. ಅವರು ಚೆಂಡು  ಬೌನ್ಸ್ ಆಗುವ ವಿಷಯಕ್ಕೆ ಸಂಬಂಧಿಸಿದಂತಹ ಅಂಶಗಳ ಬಗ್ಗೆ ಪರೀಕ್ಷೆ ನಡೆಸುತ್ತಾರೆ. ಬಳಿಕ ಟರ್ಫ್ ಅಂತರರಾಷ್ಟ್ರೀಯ ದರ್ಜೆ ಹೊಂದಿದೆಯೇ ಇಲ್ಲವೇ ಎಂಬುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಇದು ಶೀಘ್ರದಲ್ಲಿ ಆಗುವ ಕೆಲಸವಲ್ಲ. ಏಕೆಂದರೆ ಈಗ ಮಳೆಗಾಲ~ ಎಂದು ಅವರು ವಿವರಿಸಿದರು.

ಆದರೆ ಟರ್ಫ್‌ನ ಪರಿಸ್ಥಿತಿ ವಿಶ್ಲೇಷಿಸಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಅಧಿಕೃತವಾಗಿ ಪ್ರಮಾಣ ಪತ್ರ ನೀಡಲು ಈ ಎಲ್ಲಾ ಪರೀಕ್ಷೆಗಳು ನಡೆಯಬೇಕು ಅಷ್ಟೆ ಎಂದು ಹ್ಯಾರಿಸನ್ ಹೇಳಿದರು.

ಈಗಾಗಲೇ ಈ ಕ್ರೀಡಾಂಗಣದ ನೂತನ ಟರ್ಫ್‌ನಲ್ಲಿ ಎಚ್‌ಎಎಲ್ ಹಾಗೂ ಈಸ್ಟ್ ಬೆಂಗಾಲ್ ನಡುವೆ ಐ-ಲೀಗ್ ಪಂದ್ಯ ಆಯೋಜಿಸಲಾಗಿತ್ತು. ಆದರೆ ಟರ್ಫ್ ಅತಿಯಾಗಿ ಬಿಸಿಯಾಗುತ್ತಿರುವ ಬಗ್ಗೆ ಸ್ಥಳೀಯ ಆಟಗಾರರು ದೂರು ನೀಡಿದ್ದಾರೆ. ಆ ಕಾರಣ ಇದಕ್ಕೆ ಹೆಚ್ಚು ನೀರು ಹಾಕುವುದೇ ಸರಿಯಾದ ಪರಿಹಾರ ಎಂದು ಹ್ಯಾರಿಸನ್ ತಿಳಿಸಿದ್ದಾರೆ.

ನೈಸರ್ಗಿಕ ಹಸಿರು ಇಲ್ಲದ ಸ್ಥಳಗಳಲ್ಲಿ ಕೃತಕ ಟರ್ಫ್ ಹಾಸುವುದು ತುಂಬಾ ಅಗತ್ಯ ಎಂದ ಹ್ಯಾರಿಸನ್, `ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಹಲವು ಆದ್ಯತೆಗಳಿವೆ. ಆದರೆ ಸೌದಿ ಅರೇಬಿಯಾದಲ್ಲಿ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ಗೇರುತ್ತದೆ. ಆಗ ಅಲ್ಲಿ ಮರಳು ಅಥವಾ ಕೃತಕ ಪಿಚ್‌ನಲ್ಲಿ ಮಾತ್ರ ಆಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ~ ಎಂದಿದ್ದಾರೆ.

ಫಿಫಾ ಭಾರತದಲ್ಲಿ ಕೃತಕ ಟರ್ಫ್ ಹಾಕಲು ನಾಲ್ಕು ನಗರಗಳನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಬೆಂಗಳೂರು ಕೂಡ ಒಂದು. ಮುಂಬೈ, ಶಿಲ್ಲಾಂಗ್ ಹಾಗೂ ಇಂಫಾಲ್ ಇತರ ನಗರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.