ADVERTISEMENT

ಪದಕದತ್ತ ಕೀನ್ಯಾ ಓಟಗಾರರ ಚಿತ್ತ

ವಿಶ್ವ 10 ಕೆ ಓಟ ಇಂದು: ಭಾರತದ ಸ್ವಾತಿ, ಮೋನಿಕಾ, ಸಂಜೀವಿನಿ ಆಕರ್ಷಣೆ

ಜಿ.ಶಿವಕುಮಾರ
Published 26 ಮೇ 2018, 20:04 IST
Last Updated 26 ಮೇ 2018, 20:04 IST
ಭಾರತದ ಸ್ಪರ್ಧಿಗಳು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ
ಭಾರತದ ಸ್ಪರ್ಧಿಗಳು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಹನ್ನೊಂದನೇ ಆವೃತ್ತಿಯ ವಿಶ್ವ 10 ಕೆ ಓಟದ ಸ್ಪರ್ಧೆಗಳಿಗೆ ಉದ್ಯಾನ ನಗರಿಯಲ್ಲಿ ವೇದಿಕೆ ಸಜ್ಜಾಗಿದೆ.

ಭಾನುವಾರ ಬೆಳಿಗ್ಗೆ ಸ್ಪರ್ಧೆಗಳು ನಡೆಯಲಿದ್ದು, ಈ ಬಾರಿಯೂ ಕೀನ್ಯಾ ಮತ್ತು ಇಥಿಯೋಪಿಯಾದ ಓಟಗಾರರು ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದೆ.  ಐದು ವಿಭಾಗಗಳಲ್ಲಿ ಸುಮಾರು 24000 ಮಂದಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪುರುಷರ ಎಲೀಟ್‌ ವಿಭಾಗದಲ್ಲಿ ಕೀನ್ಯಾದ ಅಲೆಕ್ಸ್‌ ಕೊರಿಯೊ ಎಲ್ಲರ ಆಕರ್ಷಣೆಯಾಗಿದ್ದಾರೆ. ಹೋದ ವರ್ಷ ಚಿನ್ನ ಗೆದ್ದಿದ್ದ ಅವರು ಈ ಬಾರಿಯೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಿಂಚು ಹರಿಸಲು ಸನ್ನದ್ಧರಾಗಿದ್ದಾರೆ.

ADVERTISEMENT

ಕೊರಿಯೊಗೆ ಕೀನ್ಯಾದ ಮತ್ತೊಬ್ಬ ಓಟಗಾರ ಜಿಯೊಫ್ರೆ ಕಮವೊರೊರ್‌ ಅವರಿಂದ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಈ ವರ್ಷದ ಆರಂಭದಲ್ಲಿ ವಲೆನ್ಸಿಯಾದಲ್ಲಿ ನಡೆದಿದ್ದ ಐಎಎಎಫ್‌ ವಿಶ್ವ ಹಾಫ್‌ ಮ್ಯಾರಥಾನ್‌ನಲ್ಲಿ ಜಿಯೊಫ್ರೆ ಚಿನ್ನ ಗೆದ್ದಿದ್ದರು. 2012 ಮತ್ತು 2014ರಲ್ಲಿ ನಡೆದಿದ್ದ ವಿಶ್ವ 10 ಕೆ ಓಟಗಳಲ್ಲಿ ಅವರು ಚಿನ್ನಕ್ಕೆ ಕೊರಳೊಡ್ಡಿದ್ದರು. ಇಥಿಯೋಪಿಯಾದ ಮೋಸೆನೆಟ್‌ ಜೆರೆಮೆವ್‌ ಅವರೂ ಮೂರನೇ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. ಅವರು 2015 ಮತ್ತು 2016ರಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಹೋದ ವರ್ಷ 10ನೇಯವರಾಗಿ ಗುರಿ ತಲುಪಿದ್ದರು.

ಇಥಿಯೋಪಿಯಾದ ಬಿರ್ಹಾನು ಲೆಗೆಸೆ, ಲೆವುಲ್‌ ಗೆಬ್ರಸೆಲಾಸಿ, ಬಹ್ರೇನ್‌ನ ಅಬ್ರಾಹಂ ಚೆರೊಬೆನ್‌, ಕೀನ್ಯಾದ ಎಡ್ವಿನ್‌ ಕಿಪ್ಟೂ, ಆಸ್ಟ್ರೇಲಿಯಾದ ಬ್ರೆಟ್‌ ರಾಬಿನ್‌ಸನ್‌, ಅಮೆರಿಕದ ರ‍್ಯಾನ್‌ ವೇಲ್‌ ಮತ್ತು ಉಗಾಂಡದ ಮೋಸೆಸ್‌ ಕುರೊಂಗ್‌ ಅವರೂ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ನೆಟ್‌ಸಾನೆಟ್‌ ಆಕರ್ಷಣೆ: ಮಹಿ ಳೆಯರ ಎಲೀಟ್‌ ವಿಭಾಗದಲ್ಲಿ ಇಥಿಯೋ ಪಿಯಾದ ನೆಟ್‌ಸಾನೆಟ್‌ ಗುಡೆಟಾ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ವಿಶ್ವ ಹಾಫ್‌ ಮ್ಯಾರಥಾನ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಗುಡೆಟಾ ಅವರಿಗೆ ಕೀನ್ಯಾದ ಅಗನೆಸ್‌ ತಿರೋಪ್‌ ಮತ್ತು ಪೌಲಿನ್‌ ಕಮುಲು ಅವರಿಂದ ಪೈಪೋಟಿ ಎದುರಾಗುವ ಸಂಭವ ಇದೆ.

22ರ ಹರೆಯದ ತಿರೋಪ್‌, 2015ರಲ್ಲಿ ನಡೆದಿದ್ದ ವಿಶ್ವ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಗಳಿದ್ದರು. 23 ವರ್ಷದ ಕಮುಲು ಮೊದಲ ಬಾರಿಗೆ ಬೆಂಗಳೂರಿನ ರಸ್ತೆಗಳಲ್ಲಿ ಓಡಲಿದ್ದಾರೆ. ಕಿರ್ಗಿಸ್ತಾನದ ಡೇರಿಯಾ ಮಸ ಲೋವಾ, ಇಥಿಯೋಪಿಯಾದ ಸೆನ್‌ಬೆರೆ ತೆಫೆರಿ ಮತ್ತು ಉಗಾಂಡದ ಸ್ಟೆಲ್ಲಾ ಚೆಸಾಂಗ್‌ ಅವರೂ ಶ್ರೇಷ್ಠ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

ವಿಶ್ವಾಸದಲ್ಲಿ ಸ್ವಾತಿ: ಭಾರತದ ಮಹಿಳೆಯರ ಪೈಕಿ ಸ್ವಾತಿ ಗಡವೆ ಮೂರನೇ ಚಿನ್ನ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. 2014 ಮತ್ತು 2016ರಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದ ಸ್ವಾತಿ, ಇತ್ತೀಚೆಗೆ ನಡೆದಿದ್ದ ಫೆಡರೇಷನ್‌ ಕಪ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದರು. ಮೋನಿಕಾ ಅಥಾರೆ ಮತ್ತು ಸಂಜೀವಿನಿ ಅವರೂ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಪುರುಷರ ವಿಭಾಗದಲ್ಲಿ ಕರ್ನಾಟಕದ ಎ.ಬಿ.ಬೆಳ್ಳಿಯಪ್ಪ, ಶಂಕರ್‌ ಮನ್‌ ಥಾಪಾ ಮತ್ತು ಶ್ರೀನು ಬುಗಾಟ ಅವರ ನಡುವೆ ತುರುಸಿನ ಪೈಪೋಟಿ ಇದ್ದು ಇವರ ಪೈಕಿ ಚಿನ್ನ ಯಾರ ಪಾಲಾಗಲಿದೆ ಎಂಬ ಕುತೂಹಲ ಗರಿಗೆದರಿದೆ.

ಯದುವೀರ ಕಣಕ್ಕೆ
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಈ ಬಾರಿಯ 10ಕೆ ಓಟಕ್ಕೆ ರಂಗು ತುಂಬಲಿದ್ದಾರೆ. ದತ್ತಿ ನಿಧಿ ಸಂಗ್ರಹದ ಉದ್ದೇಶದಿಂದ ಅವರು ಕಲಿಸು ಫೌಂಡೇಷನ್‌ ಪರವಾಗಿ ಓಡಲಿದ್ದಾರೆ.

*
ದೆಹಲಿ ಮ್ಯಾರಥಾನ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದೇನೆ. ವಿಶ್ವ 10ಕೆಯಲ್ಲೂ ಚಿನ್ನ ಗೆಲ್ಲುವ ಗುರಿ ಇದೆ.
-ಮೋನಿಕಾ ಅಥಾರೆ, ಭಾರತದ ಓಟಗಾರ್ತಿ

*
ಬಿ.ಸಿ.ತಿಲಕ್‌ ಅವರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸಿದ್ದೇನೆ. 30 ನಿಮಿಷಗಳ ಒಳಗೆ ರೇಸ್‌ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇನೆ.
-ಎ.ಬಿ.ಬೆಳ್ಳಿಯಪ್ಪ, ಭಾರತದ ಓಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.