ADVERTISEMENT

ಪಾಕಿಸ್ತಾನ ತಂಡದವರ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಬೆಂಗಳೂರು: ಭಾರತ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯವನ್ನಾಡಲು ಉದ್ಯಾನನಗರಿಗೆ ಬಂದಿರುವ ಮಹಮ್ಮದ್ ಹಫೀಜ್ ನೇತೃತ್ವದ ಪಾಕಿಸ್ತಾನ ತಂಡ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು.

ಎರಡು ಗಂಟೆಗೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ನಂತರ ಕೆಲ ಆಟಗಾರರು ವಿಶ್ರಾಂತಿ ಪಡೆದರೆ, ನಾಯಕ ಹಫೀಜ್, ವೇಗಿ ಉಮರ್ ಗುಲ್, ಸೊಹೇಲ್ ತನ್ವೀರ್, 23 ವರ್ಷದ ಯುವ ಆಟಗಾರ ಉಮರ್ ಅಮಿನ್ ಪತ್ರಿಕಾಗೋಷ್ಠಿಗೆ ಆಗಮಿಸಿದರು. ಇದೇ ಸಂದರ್ಭದಲ್ಲಿ ತಂಡದ ಮ್ಯಾನೇಜರ್ ನವೀದ್ ಅಕ್ರಮ್ ಚೀಮಾ ಸಹ ಉಪಸ್ಥಿತರಿದ್ದರು. ಮೊದಲ ಪಂದ್ಯ ಡಿಸೆಂಬರ್ 25ರಂದು ನಡೆಯಲಿದೆ.

ಮೊದಲ ಸರಣಿ: `ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಯಾವಾಗಲೂ ಕುತೂಹಲದಿಂದ ಕೂಡಿರುತ್ತದೆ. ಪಾಕ್ ತಂಡಕ್ಕೆ ಕೋಚ್ ಆದ ನಂತರ ಭಾರತ ವಿರುದ್ಧದ ಮೊದಲ ಸರಣಿ ಇದು. ನಮ್ಮ ಆಟಗಾರರು ಹೆಚ್ಚು ಉತ್ಸಾಹದಿಂದ ಆಡಲು ಇಲ್ಲಿಗೆ ಬಂದಿದ್ದಾರೆ' ಎಂದು ಪ್ರವಾಸಿ ತಂಡದ ಕೋಚ್ ಡೇವ್ ವಾಟ್ಮೋರ್ ಹೇಳಿದರು.ವಾಟ್ಮೋರ್ ಮೊದಲು ಬಾಂಗ್ಲಾದೇಶ ತಂಡದ ಕೋಚ್ ಆಗಿದ್ದರು. ಇವರು ಮಾರ್ಚ್‌ನಲ್ಲಿ ಪಾಕ್ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದರು. 

ಐದು ವರ್ಷಗಳ ಬಳಿಕ ಪಂದ್ಯ: ಭಾರತ ಹಾಗೂ ಪಾಕಿಸ್ತಾನ ತಂಡಗಳು ಐದು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿವೆ. 2007ರ ಡಿಸೆಂಬರ್‌ನಲ್ಲಿ ಉಭಯ ತಂಡಗಳ ನಡುವೆ ಟೆಸ್ಟ್ ಪಂದ್ಯ ನಡೆದಿತ್ತು. ಈ ಪಂದ್ಯ  ಡ್ರಾದಲ್ಲಿ ಅಂತ್ಯ ಕಂಡಿತ್ತು. ಈಗ ವರ್ಷದ ಅಂತ್ಯದ ಮತ್ತೊಂದು ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.ಮಹೇಂದ್ರ ಸಿಂಗ್ ದೋನಿ ಹಾಗೂ ಹಫೀಜ್ ಅವರು ಟ್ವೆಂಟಿ-20 ಸರಣಿಯ ಟ್ರೋಫಿ ಅನಾವರಣ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.