ADVERTISEMENT

‘ಪುಟಿದೇಳುವ ಗುಣ ಮೈಗೂಡಿಸಿಕೊಂಡಿದ್ದೇನೆ’

ಭಾರತದ ಬ್ಯಾಡ್ಮಿಂಟನ್‌ ಆಟಗಾರ

ಪಿಟಿಐ
Published 9 ಜುಲೈ 2017, 19:05 IST
Last Updated 9 ಜುಲೈ 2017, 19:05 IST
‘ಪುಟಿದೇಳುವ ಗುಣ ಮೈಗೂಡಿಸಿಕೊಂಡಿದ್ದೇನೆ’
‘ಪುಟಿದೇಳುವ ಗುಣ ಮೈಗೂಡಿಸಿಕೊಂಡಿದ್ದೇನೆ’   

ನವದೆಹಲಿ: ‘ನಾನು ಪುಟಿದೇಳುವ ಗುಣ ಮೈಗೂಡಿಸಿಕೊಂಡಿ ದ್ದೇನೆ. ಹೀಗಾಗಿ ಎಷ್ಟೇ ಬಾರಿ ಗಾಯಗೊಂಡರೂ ಮತ್ತೆ ಫೀನಿಕ್ಸ್‌ನಂತೆ ಎದ್ದು ಬಂದು ಪರಿಣಾ ಮಕಾರಿ ಆಟ ಆಡಲು ಸಾಧ್ಯವಾಗುತ್ತಿದೆ’ ಎಂದು ಭಾರತದ ಬ್ಯಾಡ್ಮಿಂಟನ್‌ ಆಟಗಾರ ಎಚ್‌.ಎಸ್‌. ಪ್ರಣಯ್‌ ತಿಳಿಸಿದ್ದಾರೆ.

‘ಹಿಂದಿನ ಟೂರ್ನಿಗಳಲ್ಲಿ ನನ್ನಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬಂದಿದೆ ಎಂದು ಹೇಳುವುದಿಲ್ಲ. ಆದರೆ ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಗಾಯದ  ಸಮಸ್ಯೆ ಎದುರಾದಾಗಲೆಲ್ಲಾ ತರಬೇತಿಯಿಂದ ದೂರ ಉಳಿದಿದ್ದೇನೆ. ಹೀಗಾಗಿ ಕೆಲ  ಟೂರ್ನಿಗಳಲ್ಲಿ ಗುಣಮಟ್ಟದ ಆಟ ಆಡಲು ಸಾಧ್ಯವಾಗಿಲ್ಲ’ ಎಂದಿದ್ದಾರೆ.

‘ಒಂದು ಟೂರ್ನಿಯಲ್ಲಿ ವೈಫಲ್ಯ ಕಂಡರೆ ಸಾಕಷ್ಟು ಟೀಕೆಗಳನ್ನು ಎದುರಿ ಸಬೇಕಾಗುತ್ತದೆ. ಇಂತಹ ಅನುಭವಗಳು  ಸಾಕಷ್ಟು ಬಾರಿ  ಆಗಿವೆ. ಆದರೆ ವೈಫಲ್ಯದ ಹಿಂದಿನ ಕಾರಣ ಯಾರಿಗೂ ಗೊತ್ತಿರು ವುದಿಲ್ಲ. ಒಮ್ಮೆ ಗಾಯಗೊಂಡರೆ ಅದ ರಿಂದ ಚೇತರಿಸಿಕೊಂಡು ಮತ್ತೆ ಅಂಗಳಕ್ಕೆ ಇಳಿಯುವುದು ಎಷ್ಟು ಕಷ್ಟ ಎಂಬುದು ಕ್ರೀಡಾಪಟುಗಳಿಗೆ ಮಾತ್ರ ಗೊತ್ತಿರುತ್ತದೆ. ಒಬ್ಬರನ್ನು ಟೀಕಿಸುವ ಮುನ್ನ ಸಾಕಷ್ಟು ಬಾರಿ ಯೋಚಿಸಬೇಕು. ಅವರ ವೈಫಲ್ಯಕ್ಕೆ ಏನು ಕಾರಣ ಇರಬಹುದು ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಪ್ರಣಯ್‌  ನುಡಿದಿದ್ದಾರೆ.

ADVERTISEMENT

‘ನನ್ನ ಪಾಲಿಗೆ ಟೂರ್ನಿಯ ಮೊದಲ ಸುತ್ತಿನ ಪಂದ್ಯ ತುಂಬಾ ಮಹತ್ವದ್ದಾಗಿರು ತ್ತದೆ. ಆರಂಭಿಕ ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿದಾಗ ಆತಂಕ ಮನೆ ಮಾಡಿರುತ್ತದೆ. ಹೀಗಾಗಿ ಪರಿಣಾಮಕಾರಿ ಆಟ ಆಡಲು ಆಗದೆ ಸೋತ ಸಾಕಷ್ಟು ಉದಾಹರಣೆಗಳಿವೆ. ಮೊದಲ ಸುತ್ತಿನಲ್ಲಿ ಗೆದ್ದುಬಿಟ್ಟರೆ ಸಾಕು ಆ ನಂತರದ ಪಂದ್ಯ ಗಳಲ್ಲಿ  ಎದುರಾಳಿ ಎಷ್ಟೇ ಬಲಿಷ್ಠನಾದರೂ ಆತನ ಸವಾಲು ಮೀರಿ ನಿಂತುಬಿಡುತ್ತೇನೆ. ಅಷ್ಟರ ಮಟ್ಟಿಗೆ ಮನೋಬಲ ಹೆಚ್ಚಿರುತ್ತದೆ’ ಎಂದು ತಿಳಿಸಿದ್ದಾರೆ.

‘ಚೀನಾದ ಚೆನ್‌ ಲಾಂಗ್‌, ಬ್ಯಾಡ್ಮಿಂಟನ್‌ ಲೋಕ ಕಂಡ ಅಪ್ರತಿಮ ಆಟಗಾರ. ಚೆನ್‌ ವಿರುದ್ಧ ಮೊದಲ ಬಾರಿ  ಆಡಿದಾಗ ಅವರನ್ನು ಮಣಿಸುವುದು ಅಸಾಧ್ಯ ಎಂಬ ಭಾವನೆ ನನ್ನಲ್ಲಿ ಗಟ್ಟಿಯಾಗಿ ಬೇರೂರಿತ್ತು. ಸಿಂಗಪುರ ಓಪನ್‌ನಲ್ಲೂ  ಅವರ ವಿರುದ್ಧ ಸೋತಿದ್ದೆ. ಚೀನಾ ಓಪನ್‌ನಲ್ಲೂ ಚೆನ್‌ ವಿರುದ್ಧ ಸೋಲು ಎದುರಾಗಿತ್ತು.  ಹೋದ ತಿಂಗಳು ನಡೆದಿದ್ದ ಇಂಡೊನೇಷ್ಯಾ ಓಪನ್‌ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿ ಯಾದಾಗಲೂ ಚೆನ್‌ ಆರಂಭದಲ್ಲಿ ಮುನ್ನಡೆ ಕಂಡಿದ್ದರು. ಬಳಿಕ ನಾನು ಶ್ರೇಷ್ಠ ಆಟ ಆಡಿ ಅವರನ್ನು ಸೋಲಿಸಿದ್ದೆ. ಆ ಕ್ಷಣ ಅವಿಸ್ಮರಣೀಯವಾದುದು. ಮಲೇಷ್ಯಾದ ಲೀ ಚೊಂಗ್‌ ವಿ ಅವರನ್ನು ಮಣಿಸಿದ್ದು ಕೂಡ ವಿಶೇಷವಾದುದು’ ಎಂದು ಪ್ರಣಯ್‌ ಖುಷಿ ವ್ಯಕ್ತಪಡಿಸಿದ್ದಾರೆ.

‘ಇಂಡೊನೇಷ್ಯಾ ಓಪನ್‌ಗೂ ಮುನ್ನ ಕಠಿಣ ತಾಲೀಮು ನಡೆಸಿದ್ದೆ. ಜೊತೆಗೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಿದ್ದೆ. ಹೀಗಾಗಿ ಬ್ಯಾಡ್ಮಿಂಟನ್‌ ದಿಗ್ಗಜರೆನಿಸಿರುವ ಚೆನ್‌ ಲಾಂಗ್‌ ಮತ್ತು  ಚೊಂಗ್‌ ವಿ ಅವರನ್ನು ಸೋಲಿಸಲು ಸಾಧ್ಯವಾಗಿತ್ತು. ಗಾಯದಿಂದ ಚೇತರಿಸಿ ಕೊಂಡು ಕಣಕ್ಕಿಳಿದ ಬಳಿಕ ಸಾಕಷ್ಟು ಟೂರ್ನಿಗಳಲ್ಲಿ ದಿಟ್ಟ ಆಟ ಆಡಿದ್ದೇನೆ. ಆದರೆ ಪ್ರಶಸ್ತಿಗಳನ್ನು ಗೆಲ್ಲಲಾಗಿಲ್ಲ. ಆಗ ನಿರಾಸೆಯಾದರೂ ಅದನ್ನು ಆ ಕ್ಷಣವೇ ಮರೆತು ಮುಂದಿನ ಟೂರ್ನಿಗೆ ಸಜ್ಜಾಗು ತ್ತೇನೆ ’ ಎಂದು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿರುವ ಭಾರತದ ಆಟಗಾರ ನುಡಿದಿದ್ದಾರೆ.
‘ಒಂದು ಟೂರ್ನಿ ಮುಗಿದ ನಂತರ ಯಾವೆಲ್ಲಾ ತಪ್ಪುಗಳನ್ನು ಮಾಡಿದ್ದೇನೆ ಎಂಬುದನ್ನು ಪತ್ತೆ ಹಚ್ಚಿ ಅದನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ. ಜೊತೆಗೆ ಅಭ್ಯಾಸದ ವೇಳೆ ಹೊಸ ಕೌಶಲಗಳನ್ನು ಕಲಿಯಲು ಆದ್ಯತೆ ನೀಡುತ್ತೇನೆ. ಇದ  ರಿಂದ ಮುಂದಿನ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ಅನುವಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಬ್ಯಾಂಕ್‌ಹ್ಯಾಂಡ್‌ ಹೊಡೆತಗಳು ನನ್ನ ಆಟದ ಶಕ್ತಿ. ತಿರುವನಂತಪುರದಲ್ಲಿ ಟೂರ್ನಿಯೊಂದರಲ್ಲಿ ಆಡುವಾಗ ನನ್ನ ಎದುರಾಳಿ ಮನಮೋಹಕ ಬ್ಯಾಂಕ್‌ ಹ್ಯಾಂಡ್‌ ಹೊಡೆತಗಳನ್ನು ಬಾರಿಸುತ್ತಿ ದ್ದರು. ಪಂದ್ಯದ ಬಳಿಕ ಅವರಿಂದ ಆ ಕೌಶಲದ ಬಗ್ಗೆ ತಿಳಿದುಕೊಂಡೆ. ಕ್ರಮೇಣ ಅದನ್ನು ಮೈಗೂಡಿಸಿಕೊಂಡೆ’ ಎಂದು 2016ರ ಸ್ವಿಸ್‌ ಓಪನ್‌ ಚಾಂಪಿಯನ್‌ ಪ್ರಣಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.