ADVERTISEMENT

ಪುಣೆ ವಾರಿಯರ್ಸ್‌ಗೆ ಸಾಧಾರಣ ಗುರಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST
ಪುಣೆ ವಾರಿಯರ್ಸ್‌ಗೆ ಸಾಧಾರಣ ಗುರಿ
ಪುಣೆ ವಾರಿಯರ್ಸ್‌ಗೆ ಸಾಧಾರಣ ಗುರಿ   

ಮುಂಬೈ (ಪಿಟಿಐ): ರ್ಯಾನ್ ಮೆಕ್‌ಲಾರೆನ್ (ಅಜೇಯ 51, 43 ಎಸೆತ, 6 ಬೌಂ, 1 ಸಿಕ್ಸರ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ಕಿಂಗ್ಸ್ ಇಲೆವೆನ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 112 ರನ್ ಗಳಿಸಿತು.

ಗೆಲುವಿಗೆ 113 ರನ್‌ಗಳ ಗುರಿ ಬೆನ್ನಟ್ಟಿರುವ ಯುವರಾಜ್ ಸಿಂಗ್ ನೇತೃತ್ವದ ಪುಣೆ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ 8 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 60 ರನ್ ಗಳಿಸಿತ್ತು.ಗ್ರೇಮ್ ಸ್ಮಿತ್ ಅವರನ್ನು ತಂಡ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಪ್ರವೀಣ್ ಕುಮಾರ್ ಎಸೆತದಲ್ಲಿ ಅವರು ಮೆಕ್‌ಲಾರೆನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಮಿಥುನ್ ಮನ್ಹಾಸ್ (35) ಔಟಾದರು. ಜೆಸ್ಸಿ ರೈಡರ್ (23) ಹಾಗೂ ರಾಬಿನ ಉತ್ತಪ್ಪ (0) ಕ್ರೀಸ್‌ನಲ್ಲಿದ್ದರು.

ಟಾಸ್ ಗೆದ್ದ ಗಿಲ್‌ಕ್ರಿಸ್ಟ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಅವರ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. 9 ರನ್ ಗಳಿಸುವಷ್ಟರಲ್ಲೇ ತಂಡದ ನಾಲ್ಕು ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದರು. 45 ರನ್ ಆಗಿದ್ದಾಗ ತಂಡದ ಆರು ವಿಕೆಟ್‌ಗಳು ಉರುಳಿದ್ದವು. ಪುಣೆ ತಂಡದ ಅಲ್ಫೊನ್ಸೊ ಥಾಮಸ್ (27ಕ್ಕೆ 2) ಮತ್ತು ಶ್ರೀಕಾಂತ್ ವಾಗ್ (16ಕ್ಕೆ 3) ಅವರು ಸೊಗಸಾದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ತೊಡಿಸಿದರು.

ಆದರೆ ಕೊನೆಯಲ್ಲಿ ರ್ಯಾನ್ ಮೆಕ್‌ಲಾರೆನ್ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಕಾರಣ ಪಂಜಾಬ್ ತಂಡದ ಮೊತ್ತ 100ರ ಗಡಿ ದಾಟಿತು. ಅವರು ಎದುರಾಳಿ ತಂಡದ ಎಲ್ಲ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತರು. ಪಿಯೂಷ್ ಚಾವ್ಲಾ (15) ಅವರು ಮೆಕ್‌ಲಾರೆನ್‌ಗೆ ಅಲ್ಪ ಬೆಂಬಲ ನೀಡಿದರು. ಏಳನೆಯವರಾಗಿ ಕ್ರೀಸ್‌ಗಿಳಿದ ಮೆಕ್‌ಲಾರೆನ್ ಅವರು ಚಾವ್ಲಾ ಜೊತೆ ಏಳನೇ ವಿಕೆಟ್‌ಗೆ 35 ರನ್‌ಗಳ ಜೊತೆಯಾಟ ನೀಡಿದರು.

ಪಂಜಾಬ್ ತಂಡದ ಇನಿಂಗ್ಸ್ ಆರಂಭಿಸಿದ ನಾಯಕ ಗಿಲ್‌ಕ್ರಿಸ್ಟ್ ಮತ್ತು ಶಾನ್ ಮಾರ್ಷ್ ಅವರು ತಲಾ ಒಂದು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಬಂದ ಪಾಲ್ ವಾಲ್ತಟಿ (6) ವಿಫಲರಾದರೆ, ದಿನೇಶ್ ಕಾರ್ತಿಕ್ ‘ಸೊನ್ನೆ’ ಸುತ್ತಿದರು. ಸ್ಕೋರ್ ಬೋರ್ಡ್‌ನಲ್ಲಿ ಎರಡಂಕಿಯ ಮೊತ್ತ ತಲುಪುವ ಮುನ್ನವೇ ನಾಲ್ಕು ವಿಕೆಟ್ ಕಳೆದುಕೊಂಡ ತಂಡಕ್ಕೆ ಬಳಿಕ ಚೇತರಿಸಿಕೊಳ್ಳಲು ಆಗಲಿಲ್ಲ.

ಅಭಿಷೇಕ್ ನಾಯರ್ ಮತ್ತು ಸನ್ನಿ ಸಿಂಗ್ ಉತ್ತಮ ಆರಂಭ ಪಡೆದರೂ ಕ್ರೀಸ್‌ನಲ್ಲಿ ಹೆಚ್ಚುಹೊತ್ತು ನಿಲ್ಲಲಿಲ್ಲ. ಇನಿಂಗ್ಸ್‌ನ ಯಾವುದೇ ಹಂತದಲ್ಲೂ ಕಿಂಗ್ಸ್ ತಂಡಕ್ಕೆ ಅಬ್ಬರದ ಆಟವಾಡಲು ಸಾಧ್ಯವಾಗಲಿಲ್ಲ. ಥಾಮಸ್ ಹಾಗೂ ವಾಗ್ ಅವರಿಗೆ ಉತ್ತಮ ಬೆಂಬಲ ನೀಡಿದ ವೇಯ್ನೆ ಪಾರ್ನೆಲ್ ನಾಲ್ಕು ಓವರ್‌ಗಳಲ್ಲಿ 20 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.ನ್ಯೂಜಿಲೆಂಡ್‌ನ ಆಲ್‌ರೌಂಡರ್ ಜೆಸ್ಸಿ ರೈಡರ್ ಕೂಡಾ ಪ್ರಭಾವಿ ಎನಿಸಿದರು.

ಸ್ಕೋರ್  ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 112
ಆ್ಯಡಮ್ ಗಿಲ್‌ಕ್ರಿಸ್ಟ್ ಸಿ ರಾಬಿನ್ ಉತ್ತಪ್ಪ ಬಿ ಅಲ್ಫೊನ್ಸೊ ಥಾಮಸ್  01
ಶಾನ್ ಮಾರ್ಷ್ ಸಿ ಶರ್ಮ ಬಿ ಶ್ರೀಕಾಂತ್ ವಾಗ್  01
ಪಾಲ್ ವಾಲ್ತಟಿ ಸಿ ರೈಡರ್ ಬಿ ಅಲ್ಫೊನ್ಸೊ ಥಾಮಸ್  06
ದಿನೇಶ್ ಕಾರ್ತಿಕ್ ಸಿ ಶರ್ಮ ಬಿ ಶ್ರೀಕಾಂತ್ ವಾಗ್ 00
ಅಭಿಷೇಕ್ ನಾಯರ್ ಸಿ ಯುವರಾಜ್ ಬಿ ಜೆಸ್ಸಿ ರೈಡರ್  12
ಸನ್ನಿ ಸಿಂಗ್ ರನೌಟ್  12
ರ್ಯಾನ್ ಮೆಕ್‌ಲಾರೆನ್ ಔಟಾಗದೆ  51
ಚಾವ್ಲಾ ಸಿ ಉತ್ತಪ್ಪ ಬಿ ಶ್ರೀಕಾಂತ್ ವಾಗ್  15
ಪ್ರವೀಣ್ ಕುಮಾರ್ ಸಿ ಉತ್ತಪ್ಪ ಬಿ ವೇಯ್ನ ಪಾರ್ನೆಲ್  03
ನಥಾನ್ ರಿಮಿಂಗ್ಟನ್ ಔಟಾಗದೆ  01
ಇತರೆ: (ಲೆಗ್‌ಬೈ-4, ವೈಡ್-5, ನೋಬಾಲ್-1) 10
ವಿಕೆಟ್ ಪತನ: 1-2 (ಗಿಲ್‌ಕ್ರಿಸ್ಟ್). 2-5 (ಮಾರ್ಷ್), 3-9 (ವಾಲ್ತಟಿ), 4-9 (ಕಾರ್ತಿಕ್), 5-36 (ಸನ್ನಿ ಸಿಂಗ್), 6-45 (ನಾಯರ್), 7-80 (ಚಾವ್ಲಾ), 8-102 (ಪ್ರವೀಣ್)
ಬೌಲಿಂಗ್: ಅಲ್ಫೊನ್ಸೊ ಥಾಮಸ್ 4-0-27-2, ಶ್ರೀಕಾಂತ್ ವಾಗ್ 3-0-16-3, ವೇಯ್ನೊ ಪಾರ್ನೆಲ್ 4-0-20-1, ಮುರಳಿ ಕಾರ್ತಿಕ್ 1-0-10-0, ಜೆಸ್ಸಿ ರೈಡರ್ 3-1-9-1, ಮಿಥುನ್ ಮನ್ಹಾಸ್ 3-0-14-0, ರೋಹಿತ್ ಶರ್ಮ 2-0-12-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.