ADVERTISEMENT

ಪುರುಷರ ವಿಭಾಗದಲ್ಲೂ ಚಿನ್ನ

ಟಿಟಿ: 12 ವರ್ಷಗಳ ನಂತರ ಭಾರತ ತಂಡದ ಸಾಧನೆ

ಪಿಟಿಐ
Published 9 ಏಪ್ರಿಲ್ 2018, 20:16 IST
Last Updated 9 ಏಪ್ರಿಲ್ 2018, 20:16 IST
ಪಂದ್ಯದ ಸಂದರ್ಭದಲ್ಲಿ ಭಾರತದ ಅಚಂತಾ ಶರತ್ ಕಮಲ್ ಪ್ರೇಕ್ಷಕರತ್ತ ಕೈ ಬೀಸಿದರು
ಪಂದ್ಯದ ಸಂದರ್ಭದಲ್ಲಿ ಭಾರತದ ಅಚಂತಾ ಶರತ್ ಕಮಲ್ ಪ್ರೇಕ್ಷಕರತ್ತ ಕೈ ಬೀಸಿದರು   

ಗೋಲ್ಡ್ ಕೋಸ್ಟ್‌: ಭಾರತ ತಂಡದವರು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್‌ನ ಪುರುಷರ ವಿಭಾಗದ ಚಿನ್ನ ಗೆದ್ದರು.

ಸೋಮವಾರ ನಡೆದ ಫೈನಲ್ ಹಣಾಹಣಿಯಲ್ಲಿ ಅಚಂತಾ ಶರತ್ ಕಮಲ್‌ ನೇತೃತ್ವದ ತಂಡ ನೈಜೀರಿಯಾವನ್ನು 3–0 ಅಂತರದಿಂದ ಮಣಿಸಿತು.

ಈ ಮೂಲಕ 12 ವರ್ಷಗಳ ನಂತರ ಈ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿತು. ಭಾನುವಾರ ಮಹಿಳಾ ವಿಭಾಗದವರು ಚೊಚ್ಚಲ ಚಿನ್ನ ಗೆದ್ದು ಇತಿಹಾಸ ರಚಿಸಿದ್ದರು.

ADVERTISEMENT

ಟೇಬಲ್ ಟೆನಿಸ್ ಕ್ರೀಡೆಯನ್ನು ಕಾಮನ್‌ವೆಲ್ತ್ ಕೂಟದಲ್ಲಿ ಸೇರ್ಪಡೆ ಮಾಡಿದ ನಂತರ ಭಾರತದ ಪುರುಷ ಮತ್ತು ಮಹಿಳಾ ತಂಡಗಳೆರಡೂ ಚಿನ್ನ ಗೆಲ್ಲುವುದು ಇದೇ ಮೊದಲು.

ಸೆಮಿಫೈನಲ್‌ನಲ್ಲಿ ಸಿಂಗಪುರ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದ ಭಾರತ ತಂಡದವರು ಫೈನಲ್‌ನಲ್ಲಿ ನಿರಾಯಾಸವಾಗಿ ಗೆದ್ದರು.

ಮೊದಲ ಹಣಾಹಣಿಯಲ್ಲಿ ಅಚಂತಾ ಶರತ್‌ ಕಮಲ್‌ ಅವರು ಬೋಡೆ ಅಬ್ಯೋಡನ್‌ ಎದುರು 4–11, 11–5, 11–4, 11–9ರಲ್ಲಿ ಗೆದ್ದರು.

ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಲಯಕ್ಕೆ ಮರಳಿದ ಕಮಲ್‌ ಮೇಲುಗೈ ಸಾಧಿಸಲು ಎದುರಾಳಿಗೆ ಅವಕಾಶ ನೀಡಲಿಲ್ಲ. ಫೋರ್‌ಹ್ಯಾಂಡ್‌ನಲ್ಲಿ ಬಲಶಾಲಿ ಹೊಡೆತಗಳೊಂದಿಗೆ ಮಿಂಚಿದ ಅವರು ಟೇಬಲ್‌ನ ಎರಡೂ ಬದಿಗಳಲ್ಲಿ ಚೆಂಡನ್ನು ಬಾರಿಯ ಬೋಡ್ ಅಬ್ಯೋಡನ್‌ ಅವರನ್ನು ವಿಚಲಿತಗೊಳಿಸಿದರು.

ಪುರುಷರ ಎರಡನೇ ಸಿಂಗಲ್ಸ್‌ನಲ್ಲೂ ಭಾರತ ಮೇಲುಗೈ ಸಾಧಿಸಿತು. ತಂಡದ ಪರವಾಗಿ ಕಣಕ್ಕೆ ಇಳಿದ ಜಿ.ಸತ್ಯನ್‌ 10–12, 11–3, 11–3, 11–4ರಲ್ಲಿ ಸೇಗುನ್ ತೊರಿಯೊಲಾ ಎದುರು ಗೆದ್ದರು. ನಿರ್ಣಾಯಕ, ಡಬಲ್ಸ್ ಪಂದ್ಯ ದಲ್ಲಿ ಸತ್ಯನ್‌ ಮತ್ತು ಹರಮೀತ್ ದೇಸಾಯಿ ಜೋಡಿ ಅಬ್ಯೋಡನ್‌ ಹಾಗೂ ಒಲಜಿಡೆ ಒಮೊಟಯೊ ಅವ ರನ್ನು 11–8, 11–5, 11–3ರಿಂದ ಮಣಿಸಿದರು.

ಅಂತಿಮ ಪಾಯಿಂಟ್ ಗಳಿಸುತ್ತಿದ್ದಂತೆ ಟೇಬಲ್ ಬಳಿ ಓಡಿ ಬಂದ ಸಹ ಆಟಗಾರರು ಕುಣಿತು ಕುಪ್ಪಳಿಸಿದರು.

**

ಸೇಡು ತೀರಿಸಿಕೊಂಡ ಭಾರತ

ಕಳೆದ ಬಾರಿ ಪುರುಷರ ವಿಭಾಗದಲ್ಲಿ ಅನುಭವಿಸಿದ ಸೋಲಿಗೆ ಭಾರತ ಸೋಮವಾರ ಸೇಡು ತೀರಿಸಿಕೊಂಡಿತು. ಗ್ಲಾಸ್ಗೊದಲ್ಲಿ 2014ರಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ನೈಜೀರಿಯಾ ತಂಡದವರು ಭಾರತವನ್ನು ಮಣಿಸಿದ್ದರು.

ಕಳೆದ ಬಾರಿ ಪುರುಷರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮಾತ್ರ ಗೆದ್ದಿದ್ದ ಭಾರತ ಈ ಬಾರಿ ಈಗಾಗಲೇ ಎರಡು ಚಿನ್ನ ಗೆದ್ದಿದ್ದು ವೈಯಕ್ತಿಕ ವಿಭಾಗಗಳಲ್ಲಿ ಕಣಕ್ಕೆ ಇಳಿಯಬೇಕಷ್ಟೆ.

ಸೋಮವಾರದ ಗೆಲುವಿನೊಂದಿಗೆ ಶರತ್ ಕಮಲ್‌ ಕಾಮನ್‌ವೆಲ್ತ್ ಕೂಟದಲ್ಲಿ ಒಟ್ಟು ನಾಲ್ಕು ಚಿನ್ನ ಗೆದ್ದ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.