ಟೊರಾಂಟೊ (ಪಿಟಿಐ): ಒಲಿಂಪಿಕ್ಸ್‌ಗೆ ಸಜ್ಜಾಗಲು ಉತ್ತಮ ವೇದಿಕೆ ಎನಿಸಿದ್ದ ಟೊರಾಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೊವಿಚ್ ಚಾಂಪಿಯನ್ ಆಗಿದ್ದಾರೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಸರ್ಬಿಯಾದ ಆಟಗಾರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 6–3, 7–5ರಲ್ಲಿ ಕೀ ನಿಶಿಕೋರಿ ಅವರನ್ನು ಮಣಿಸಿ ವೃತ್ತಿ ಜೀವನದ 66ನೇ ಪ್ರಶಸ್ತಿ ಗೆದ್ದು ಕೊಂಡರು. ಈ ಟೂರ್ನಿಯಲ್ಲಿ ಜೊಕೊವಿಚ್ ಜಯಿಸಿದ ನಾಲ್ಕನೇ ಪ್ರಶಸ್ತಿ ಇದು.
ಏಷ್ಯಾದ ಅಗ್ರಮಾನ್ಯ ಆಟಗಾರ ಎನಿಸಿರುವ ನಿಶಿಕೋರಿ ಸೆಮಿಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕ ಅವರನ್ನು ಮಣಿಸಿದ್ದರು. ಆದರೆ ಫೈನಲ್‌ನಲ್ಲಿ ಕಠಿಣ ಎದುರಾಳಿ ಇದ್ದ ಕಾರಣ ನಿಶಿಕೋರಿ ಅವರಿಗೆ ಕಠಿಣ ಪೈಪೋಟಿ ಒಡ್ಡಲು ಸಾಧ್ಯವಾಗಲಿಲ್ಲ. ಈ ಪಂದ್ಯ 90 ನಿಮಿಷ ನಡೆಯಿತು.
‘ಒಲಿಂಪಿಕ್ಸ್‌ಗೆ ನಾಲ್ಕು ದಿನಗಳಷ್ಟೇ ಬಾಕಿ ಇರುವಾಗ ಟ್ರೋಫಿ ಜಯಿಸಿದ್ದಕ್ಕೆ ಖುಷಿಯಾಗಿದೆ. 2008ರ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದೆ. ಹಿಂದಿನ ಒಲಿಂಪಿಕ್ಸ್‌ನ ಪಥ ಸಂಚಲನದ ವೇಳೆ ರಾಷ್ಟ್ರಧ್ವಜ ಹಿಡಿಯುವ ಗೌರವ ಲಭಿಸಿತ್ತು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಆಸೆ ಹೊಂದಿದ್ದೇನೆ’ ಎಂದು ಜೊಕೊವಿಚ್ ಹೇಳಿದ್ದಾರೆ.
29 ವರ್ಷದ ಜೊಕೊವಿಚ್ ಈ ವರ್ಷ ಆಸ್ಟ್ರೇಲಿಯಾ ಮತ್ತು ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.
‘ವಿಂಬಲ್ಡನ್ ಟೂರ್ನಿಯಲ್ಲಿ ಬೇಗನೆ ಸೋತಿದ್ದರಿಂದ ಬೇಸರವಾಗಿದ್ದು ನಿಜ. ಆದರೆ ಮತ್ತಷ್ಟು ಕಠಿಣ ಅಭ್ಯಾಸ ನಡೆಸಲು ಆಗ ಸಮಯ ಲಭಿಸಿತು. ಆ ಟೂರ್ನಿಯಲ್ಲಿ ಸೋತ ಬಳಿಕ ಕುಟುಂಬದ ಜೊತೆ ಹೆಚ್ಚು ಸಮಯ ಕಳೆದೆ.
ಟೊರಾಂಟೊ ಟೂರ್ನಿಯ ಸೆಮಿಫೈನಲ್‌ನಲ್ಲಿ ಕಠಿಣ ಸವಾಲು ಎದುರಾಯಿತು. ಅಂತಿಮವಾಗಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರಿಂದ ರಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಬಂದಿದೆ’ ಎಂದೂ ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.