ರಿಯೊ ಡಿ ಜನೈರೊ (ಪಿಟಿಐ): ರಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಗೆಲುವಿನ ಆರಂಭ ಲಭಿಸಿದ್ದು, ವಿಕಾಸ್ ಕೃಷ್ಣನ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ವಿಕಾಸ್ 3–0 ರಲ್ಲಿ ಅಮೆರಿಕದ ಚಾರ್ಲ್ಸ್ ಕಾನ್‌ವೆಲ್ ಅವರನ್ನು ಮಣಿಸಿದರು. ಇದೇ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ 18ರ ಹರೆಯದ ಕಾನ್‌ವೆಲ್ ಭಾರತದ ಬಾಕ್ಸರ್‌ನ ಬಲವಾದ ‘ಪಂಚ್’ಗಳ ಮುಂದೆ ತಬ್ಬಿಬ್ಬಾದರು.
ವಿಕಾಸ್ ರಕ್ಷಣೆಗೆ ಹೆಚ್ಚು ಒತ್ತು ನೀಡಲಿಲ್ಲ. ಮೊದಲ ಸುತ್ತಿನ ಆರಂಭ ದಿಂದಲೇ ಆಕ್ರಮಣಕ್ಕೆ ಮುಂದಾದರು. ಕಾನ್‌ವೆಲ್ ಇದರ ಲಾಭ ಪಡೆದು ಪ್ರತ್ಯಾಕ್ರಮಣಕ್ಕೆ ಪ್ರಯತ್ನಿಸಿದರೂ ಯಶ ಕಾಣಲಿಲ್ಲ.
24ರ ಹರೆಯದ ವಿಕಾಸ್ ಮೊದಲ ಸುತ್ತಿನಲ್ಲಿ ಎದುರಾಳಿಗೆ ಬಲಗೈನಿಂದ ನೇರ ‘ಪಂಚ್’ ಗಳನ್ನು ಮಾಡಲು ತಕ್ಕಮಟ್ಟಿಗೆ ಯಶಸ್ಸು ಕಂಡರು.
ಎರಡನೇ ಸುತ್ತಿನಲ್ಲಿ ವಿಕಾಸ್ ಇನ್ನಷ್ಟು ಸುಧಾರಿತ ಪ್ರದರ್ಶನ ನೀಡಿದರು. ಕಾನ್‌ವೆಲ್ ಅವರ ತಲೆಯನ್ನು ಗುರಿಯಾಗಿಸಿ ಒಂದೇ ಸಮನೆ ‘ಪಂಚ್’ ಮಾಡಿ ಅವರ ರಕ್ಷಣೆಯನ್ನು ಭೇದಿಸಲು ಪ್ರಯತ್ನಿಸಿದರು. ಎರಡನೇ ಸುತ್ತಿನಲ್ಲಿ ವಿಕಾಸ್ ಅವರನ್ನು ವಿಜಯಿ ಎಂದು ಪ್ರಕಟಿಸಲು ತೀರ್ಪುಗಾರರಲ್ಲಿ ಒಮ್ಮತ ಮೂಡಿಬರಲಿಲ್ಲ.
ಆದರೂ ಭಾರತದ ಬಾಕ್ಸರ್ ಉತ್ತಮ ಮುನ್ನಡೆ ಕಾಪಾಡಿಕೊಳ್ಳಲು ಯಶಸ್ವಿಯಾದರು. ಮೊದಲ ಎರಡು ಸುತ್ತುಗಳಲ್ಲಿ ಅತಿಯಾಗಿ ಬಾಗಿದ್ದಕ್ಕೆ ಕಾನ್‌ವೆಲ್ ಎರಡು ಸಲ ಎಚ್ಚರಿಕೆಯನ್ನೂ ಪಡೆದರು. ಅಮೆರಿಕದ ಬಾಕ್ಸರ್ ಕೊನೆಯ ಮೂರು ನಿಮಿಷಗಳಲ್ಲಿ ವಿಕಾಸ್‌ಗೆ ಕೆಲವೊಂದು ಪಂಚ್ ನೀಡಿದರು. ಆದರೆ ಆಗಲೇ ಕಾಲ ಮಿಂಚಿಹೋಗಿತ್ತು. ಅಂತಿಮ ಸುತ್ತಿನಲ್ಲಿ ಇಬ್ಬರೂ ಸಮಾನ ಅಂಕಗಳನ್ನು ಗಳಿಸಿದರು. ಮೊದಲ ಎರಡು ಸುತ್ತುಗಳಲ್ಲಿ ಉತ್ತಮ ಸಾಧನೆ ತೋರಿದ್ದರಿಂದ ವಿಕಾಸ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.
‘ಲಂಡನ್ ಒಲಿಂಪಿಕ್ಸ್‌ನಲ್ಲಿ ಉಂಟಾ ಗಿದ್ದ ಕಹಿ ಅನುಭವ ಮರುಕಳಿಸದಂತೆ ನೋಡಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಮೊದಲ ಎರಡು ಸುತ್ತುಗಳಲ್ಲೇ ಬೌಟ್ ಗೆಲ್ಲಲು ಬಯಸಿದ್ದೆ’ ಎಂದು ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ವಿಕಾಸ್ ಪ್ರತಿಕ್ರಿಯಿಸಿದ್ದಾರೆ.
ಲಂಡನ್ ಕೂಟದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ವಿಕಾಸ್ ಅಮೆರಿಕದ ಎರೊಲ್ ಸ್ಪೆನ್ಸ್ ವಿರುದ್ಧ ಗೆಲುವು ಪಡೆದಿದ್ದರು. ಆದರೆ ಇದನ್ನು ಪ್ರತಿಭಟಿಸಿ ಅಮೆರಿಕ ಮನವಿ ಸಲ್ಲಿಸಿತ್ತು. ಆ ಬಳಿಕ ಸ್ಪೆನ್ಸ್ ವಿಜಯಿ ಎಂದು ಘೋಷಿಸ ಲಾಗಿತ್ತು.
‘ಮೊದಲ ಸುತ್ತಿನಲ್ಲಿ ಅಮೆರಿಕದ ಬಾಕ್ಸರ್ ಎದುರಾಗಲಿದ್ದಾರೆ ಎಂಬುದು ತಿಳಿದಾಗ ನಾಲ್ಕು ವರ್ಷಗಳ ಹಿಂದಿನ ಘಟನೆ ನೆನಪಾಯಿತು. ಲಂಡನ್ ಕೂಟದಲ್ಲಿ ಎದುರಾಗಿದ್ದ ಪರಿಸ್ಥಿತಿ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ತೀರ್ಮಾನಿಸಿದೆ. ಮೊದಲ ಎರಡು ಸುತ್ತುಗಳಲ್ಲೇ ಎದುರಾಳಿಯನ್ನು ಮಣಿಸುವ ಗುರಿ ಇಟ್ಟುಕೊಂಡೆ’ ಎಂದು ವಿಕಾಸ್ ಹೇಳಿದ್ದಾರೆ.
ವಿಕಾಸ್ ಅಲ್ಲದೆ ಮನೋಜ್ ಕುಮಾರ್ (64 ಕೆ.ಜಿ. ವಿಭಾಗ) ಮತ್ತು ಶಿವ ಥಾಪಾ (56 ಕೆ.ಜಿ. ವಿಭಾಗ) ಅವರು ಬಾಕ್ಸಿಂಗ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ. ಶಿವ ಥಾಪಾ ಅವರು ಗುರುವಾರ ನಡೆಯುವ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಕ್ಯೂಬಾದ ರಮಿರೆಜ್ ರೊಬೆಸಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.