ADVERTISEMENT

ಫುಟ್‌ಬಾಲ್: ಸಾಧಕ ಸ್ಲಮ್ ಹುಡುಗರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಲಂಡನ್‌ನಲ್ಲಿ ನಡೆದ ಅರ್ಸೆನಲ್ 21ನೇ ಅಂತರರಾಷ್ಟ್ರೀಯ ಫುಟ್‌ಬಾಲ್ ಉತ್ಸವದಲ್ಲಿ ಚಾಂಪಿಯನ್ ಆದ ಭಾರತ ತಂಡದಲ್ಲಿದ್ದ ಉದ್ಯಾನ ನಗರಿಯ ಸ್ಲಮ್ ಹುಡುಗರಾದ ಮಣಿ ಮಾರನ್ ಹಾಗೂ ಸಂತೋಷ್ ಕುಮಾರ್ ಅವರನ್ನು ಬುಧವಾರ ಅಭಿನಂದಿಸಲಾಯಿತು.

ಲಂಡನ್ ವಿಶ್ವವಿದ್ಯಾಲಯದ ರಾಯಲ್ ಹಾಲೊವೇ ಕಾಲೇಜ್ ಕ್ರೀಡಾಂಗಣದಲ್ಲಿ ಜುಲೈ 23ರಿಂದ ಆಗಸ್ಟ್ 31ರವರೆಗೆ ನಡೆದ ಈ ಫುಟ್‌ಬಾಲ್ ಉತ್ಸವದಲ್ಲಿ ಭಾರತದ `ಟಾಟಾ ಟೀ ಜಾಗೊ ರೇ ಸಾಕರ್ ಸ್ಟಾರ್ಸ್‌~ ತಂಡ ಚಾಂಪಿಯನ್ ಆಗಿತ್ತು. ಈ ಟೂರ್ನಿಯನ್ನು ಇಂಗ್ಲೆಂಡ್ ಪ್ರೀಮಿಯರ್ ಲೀಗ್‌ನ ಅರ್ಸೆನಲ್ ಫುಟ್‌ಬಾಲ್ ಕ್ಲಬ್ ಆಯೋಜಿಸಿತ್ತು.

ಈ ಟೂರ್ನಿಯಲ್ಲಿ 12 ದೇಶಗಳ 126 ತಂಡಗಳು ಪಾಲ್ಗೊಂಡಿದ್ದವು. ವಿವಿಧ ವಯೋಮಿತಿ ವಿಭಾಗದಲ್ಲಿ ಟೂರ್ನಿ ನಡೆದಿತ್ತು. 15 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ ಭಾರತ 1-0  ಗೋಲಿನಿಂದ ಇಂಗ್ಲೆಂಡ್‌ನ       ಫಾರೆಸ್ಟ್ ರಾಯಲ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಈ ಟೂರ್ನಿಯ 21 ವರ್ಷದ ಇತಿಹಾಸದಲ್ಲಿ ಭಾರತ ಇದೇ ಮೊದಲ ಬಾರಿ ಚಾಂಪಿಯನ್ ಆಗಿದೆ.

`ಇದೊಂದು ನಮ್ಮ ಪಾಲಿಗೆ ವಿಶೇಷ ಕ್ಷಣ. ಇದನ್ನೂ ಜೀವನಪೂರ್ತಿ ಮರೆಯಲಾರೆವು. ಜಗತ್ತಿನ ಉತ್ತಮ ತಂಡಗಳನ್ನು ಹಿಮ್ಮೆಟ್ಟಿ ನಿಂತು ನಾವು ಗೆದ್ದು ಬಂದಿದ್ದೇವೆ~ ಎಂದು ಆಸ್ಟಿನ್ ಟೌನ್‌ನ ಸ್ಲಮ್‌ನಲ್ಲಿ ಬೆಳೆಯುತ್ತಿರುವ ಮಣಿ ಮಾರನ್ ಹಾಗೂ ಸಂತೋಷ್ ಕುಮಾರ್ ನುಡಿದರು.

`ನಮಗೆ ಇದೇ ಮೊದಲ ಬಾರಿ ವಿಮಾನವೇರುವ ಅವಕಾಶ ಸಿಕ್ಕಿತ್ತು. ಜೊತೆಗೆ ಅರ್ಸೆನಲ್ ಫುಟ್‌ಬಾಲ್ ಕ್ಲಬ್‌ನ ಕೋಚ್‌ಗಳಿಂದ ವಿಶೇಷ ತರಬೇತಿ ಲಭಿಸಿತು. ಅರ್ಸೆನಲ್ ಹಾಗೂ ಬೊಕಾ ಜೂನಿಯರ್ಸ್‌ ನಡುವಿನ ಪಂದ್ಯ ವೀಕ್ಷಿಸಲು ಅವಕಾಶ ನೀಡಿದ್ದರು~ ಎಂದು ಅವರು ತಿಳಿಸಿದರು.

ಅಭಿನಂದನಾ ಸಮಾರಂಭದಲ್ಲಿ ತಂಡದ ಉಪನಾಯಕ ಅಭಿರಾಜ್ ವಿಕ್ರಂ ಸಿಂಗ್, ಕೋಚ್ ಹಾಗೂ ಇರಾನ್‌ನ ಮಾಜಿ ಆಟಗಾರ ಜಮ್‌ಷೆಡ್ ನಸ್ಸಿರಿ, ಹೈ ಲೈಫ್ ಮ್ಯಾನೇಜ್‌ಮೆಂಟ್‌ನ ಸಿಇಒ ಸೌರವ್ ಚಟರ್ಜಿ ಹಾಗೂ ಟಾಟಾ ಟೀನ ವಿಕ್ರಮ್ ಗ್ರೋವರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.