ADVERTISEMENT

ಫೈನಲ್ ಪ್ರವೇಶಿಸಿದ ಕುಕ್ ಬಳಗ

ಅ್ಯಂಡರ್‌ಸನ್, ಟ್ರೆಡ್‌ವೆಲ್ ಪ್ರಭಾವಿ ಬೌಲಿಂಗ್; ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ದಕ್ಷಿಣ ಆಫ್ರಿಕಾ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಲಂಡನ್: ದಕ್ಷಿಣ ಆಫ್ರಿಕಾ ತಂಡ `ಚೋಕರ್ಸ್‌' ಹಣೆಪಟ್ಟಿಯನ್ನು ಕಳಚಿಕೊಳ್ಳಲು ವಿಫಲವಾಗಿದೆ. ಐಸಿಸಿಯ ಪ್ರಮುಖ ಟೂರ್ನಿಯ ಸೆಮಿಫೈನಲ್‌ನಲ್ಲಿ ಈ ತಂಡ ಮತ್ತೆ ಮುಗ್ಗರಿಸಿದೆ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕರಘಟ್ಟದ ಹೋರಾಟದಲ್ಲಿ ಇಂಗ್ಲೆಂಡ್ ಕೈಯಲ್ಲಿ ಏಳು ವಿಕೆಟ್‌ಗಳ ಸೋಲು ಅನುಭವಿಸಿದ ಎಬಿ ಡಿವಿಲಿಯರ್ಸ್ ಬಳಗ `ಚೋಕರ್ಸ್‌' ಎನಿಸಿಕೊಂಡಿತು.

ಆಲ್‌ರೌಂಡ್ ಪ್ರದರ್ಶನ ನೀಡಿದ ಅಲಸ್ಟೇರ್ ಕುಕ್ ಸಾರಥ್ಯದ ತಂಡ ಫೈನಲ್‌ಗೆ ಮುನ್ನಡೆಯಿತು. ಆತಿಥೇಯರು ಭಾನುವಾರ ನಡೆಯುವ ಫೈನಲ್‌ನಲ್ಲಿ ಭಾರತ ಅಥವಾ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ. ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 38.4 ಓವರ್‌ಗಳಲ್ಲಿ ಕೇವಲ 175 ರನ್‌ಗಳಿಗೆ ಆಲೌಟಾಯಿತು.

ಇಂಗ್ಲೆಂಡ್ ಇನ್ನೂ 75 ಎಸೆತಗಳು ಇರುವಂತೆಯೇ ಮೂರು ವಿಕೆಟ್‌ಗೆ 179 ರನ್ ಗಳಿಸಿ ಜಯ ಸಾಧಿಸಿತು. ಶಿಸ್ತಿನ ಬೌಲಿಂಗ್ ಪ್ರದರ್ಶನ ನೀಡಿದ ಜೇಮ್ಸ ಆ್ಯಂಡರ್‌ಸನ್ (14ಕ್ಕೆ 2), ಜೇಮ್ಸ ಟ್ರೆಡ್‌ವೆಲ್ (19ಕ್ಕೆ 3) ಹಾಗೂ ಅಜೇಯ 82 ರನ್ ಗಳಿಸಿದ ಜೊನಾಥನ್ ಟ್ರಾಟ್ ಇಂಗ್ಲೆಂಡ್‌ನ ಗೆಲುವಿನ ರೂವಾರಿ ಎನಿಸಿಕೊಂಡರು.

ADVERTISEMENT

ಆರಂಭದಲ್ಲೇ ಆಘಾತ: ಟಾಸ್ ಗೆದ್ದ ಕುಕ್ ಮೊದಲು ಫೀಲ್ಡಿಂಗ್ ನಡೆಸಲು ನಿರ್ಧರಿಸಿದರು. ಮೋಡ ಕವಿದ ವಾತಾವರಣವಿದ್ದ ಕಾರಣ ಅವರು ಈ ತೀರ್ಮಾನ ಕೈಗೊಂಡರು. ನಾಯಕನ ನಿರ್ಧಾರ ಸರಿಯಾಗಿಯೇ ಇದೆ ಎಂಬುದನ್ನು ಜೇಮ್ಸ ಆ್ಯಂಡರ್‌ಸನ್ ಒಳಗೊಂಡಂತೆ ಇಂಗ್ಲೆಂಡ್‌ನ ವೇಗಿಗಳು ತೋರಿಸಿಕೊಟ್ಟರು.

ಆರಂಭಿಕ ಆಟಗಾರರಾದ ಕಾಲಿನ್ ಇನ್‌ಗ್ರಾಮ್ (0) ಮತ್ತು ಹಾಶಿಮ್ ಆಮ್ಲಾ (1) ಕ್ರಮವಾಗಿ ಆ್ಯಂಡರ್‌ಸನ್ ಮತ್ತು ಸ್ಟೀವನ್ ಫಿನ್‌ಗೆ ವಿಕೆಟ್ ಒಪ್ಪಿಸಿದರು. ಅತ್ಯುತ್ತಮ     ಫಾರ್ಮ್‌ನಲ್ಲಿರುವ ಆಮ್ಲಾ ಬೇಗನೇ ಔಟಾದದ್ದು ದಕ್ಷಿಣ ಆಫ್ರಿಕಾ ತಂಡಕ್ಕೆ ಬಲುದೊಡ್ಡ ಆಘಾತ ಉಂಟುಮಾಡಿತು. ರಾಬಿನ್ ಪೀಟರ್‌ಸನ್ (30) ಮತ್ತು ಫಾಫ್ ಡು ಪ್ಲೆಸಿಸ್ (26) ಮೂರನೇ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು.

ಪೀಟರ್‌ಸನ್ ಅವರನ್ನು ಎಲ್‌ಬಿ ಬಲೆಯಲ್ಲಿ ಕೆಡವಿದ ಆ್ಯಂಡರ್‌ಸನ್ ಮತ್ತೆ ಇಂಗ್ಲೆಂಡ್‌ಗೆ ಮೇಲುಗೈ ತಂದಿತ್ತರು. ಆ  ಬಳಿಕ ವಿಕೆಟ್‌ಗಳು ಪಟಪಟನೆ ಬಿದ್ದವು. ಮಾರಕ ದಾಳಿ ಸಂಘಟಿಸಿದ ಟ್ರೆಡ್‌ವಿಲ್ ಎದುರಾಳಿ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದರು. ಪ್ಲೆಸಿಸ್, ಜೆಪಿ ಡುಮಿನಿ ಮತ್ತು ಕ್ರಿಸ್ ಮೊರಿಸ್ ಅವರನ್ನು ಟ್ರೆಡ್‌ವೆಲ್ ಪೆವಿಲಿಯನ್‌ಗಟ್ಟಿದರೆ, ಎಬಿ ಡಿವಿಲಿಯರ್ಸ್ ಅವರ ಮಹತ್ವದ ವಿಕೆಟ್ ಸ್ಟುವರ್ಟ್ ಬ್ರಾಡ್ ಪಾಲಾಯಿತು. ದಕ್ಷಿಣ ಆಫ್ರಿಕಾ 80 ರನ್ ಗಳಿಸುಷ್ಟರಲ್ಲಿ ಎಂಟು ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಯಾದ ಡೇವಿಡ್ ಮಿಲ್ಲರ್ (ಔಟಾಗದೆ 56, 51 ಎಸೆತ, 5 ಬೌಂ, 2 ಸಿಕ್ಸರ್) ಮತ್ತು ರೋರಿ ಕ್ಲೀನ್‌ವೆಲ್ಟ್ (43) ಒಂಬತ್ತನೇ ವಿಕೆಟ್‌ಗೆ 16 ಓವರ್‌ಗಳಲ್ಲಿ 95 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ತಂಡದ ಮೊತ್ತ 150ರ ಗಡಿ ದಾಟಿತು. ಆ್ಯಂಡರ್‌ಸನ್ ಮತ್ತು ಟ್ರೆಡ್‌ವೆಲ್‌ಗೆ ತಕ್ಕ ಸಾಥ್ ನೀಡಿದ ಬ್ರಾಡ್ 50 ರನ್‌ಗಳಿಗೆ ಮೂರು ವಿಕೆಟ್ ಪಡೆದರು.

ಮಿಂಚಿದ ಟ್ರಾಟ್: ಸುಲಭ ಗುರಿ ಬೆನ್ನಟ್ಟಿದ ಆತಿಥೇಯರು ಆರಂಭದಲ್ಲಿ ಅಲ್ಪ ಒತ್ತಡಕ್ಕೆ ಒಳಗಾದರು. ತಂಡದ ಮೊತ್ತ 41 ಆಗುವಷ್ಟರಲ್ಲಿ ಕುಕ್ (6) ಹಾಗೂ ಇಯಾನ್ ಬೆಲ್ ( 20) ಪೆವಿಲಿಯನ್‌ಗೆ ಮರಳಿದರು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಮೇಲುಗೈ ಸಾಧಿಸುವ ಸೂಚನೆ ನೀಡಿದರು. ಆದರೆ ಟ್ರಾಟ್ ಮತ್ತು ಜೋ ರೂಟ್ (48, 71 ಎಸೆತ) ಅದಕ್ಕೆ ಅವಕಾಶ ನೀಡಲಿಲ್ಲ. ಇವರಿಬ್ಬರು ಮೂರನೇ ವಿಕೆಟ್‌ಗೆ 21 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿದರಲ್ಲದೆ, ಎದುರಾಳಿ ತಂಡದ ಮರುಹೋರಾಟದ ಕನಸನ್ನು ಪುಡಿಗಟ್ಟಿದರು.

ಗೆಲುವಿನ ಹಾದಿಯಲ್ಲಿ ತಂಡ ರೂಟ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಎಯೊನ್ ಮಾರ್ಗನ್ (ಅಜೇಯ 15) ಅವರನ್ನು ಕೂಡಿಕೊಂಡ ಟ್ರಾಟ್ ತಂಡವನ್ನು ಜಯದತ್ತ ಮುನ್ನಡೆಸಿದರು. 84 ಎಸೆತಗಳನ್ನು ಎದುರಿಸಿದ ಟ್ರಾಟ್ 11 ಬೌಂಡರಿ ಸಿಡಿಸಿದರು. ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪ್ರವೇಶಿಸಿದ್ದು ಇದು ಎರಡನೇ ಸಲ. 2004 ರಲ್ಲಿ ತನ್ನದೇ ನೆಲದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಈ ಸಾಧನೆ ಮಾಡಿತ್ತು. ಆದರೆ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ಸೋಲು ಅನುಭವಿಸಿ `ರನ್ನರ್ ಅಪ್' ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ:
38.4 ಓವರ್‌ಗಳಲ್ಲಿ 175
ಕಾಲಿನ್ ಇನ್‌ಗ್ರಾಮ್ ಎಲ್‌ಬಿಡಬ್ಲ್ಯು ಬಿ ಜೇಮ್ಸ ಆ್ಯಂಡರ್‌ಸನ್  00
ಹಾಶಿಮ್ ಆಮ್ಲಾ ಸಿ ಬಟ್ಲರ್ ಬಿ ಸ್ಟೀವನ್ ಫಿನ್ 01
ರಾಬಿನ್ ಪೀಟರ್‌ಸನ್ ಎಲ್‌ಬಿಡಬ್ಲ್ಯು ಬಿ ಜೇಮ್ಸ ಆ್ಯಂಡರ್‌ಸನ್  30
ಫಾಫ್ ಡು ಪ್ಲೆಸಿಸ್ ಸಿ ಬಟ್ಲರ್ ಬಿ ಜೇಮ್ಸ ಟ್ರೆಡ್‌ವೆಲ್  26
ಎಬಿ ಡಿವಿಲಿಯರ್ಸ್ ಸಿ ಬಟ್ಲರ್ ಬಿ ಸ್ಟುವರ್ಟ್ ಬ್ರಾಡ್  00
ಜೆಪಿ ಡುಮಿನಿ ಬಿ ಜೇಮ್ಸ ಟ್ರೆಡ್‌ವೆಲ್  03
ಡೇವಿಡ್ ಮಿಲ್ಲರ್ ಔಟಾಗದೆ  56
ರ‍್ಯಾನ್ ಮೆಕ್‌ಲಾರೆನ್  ರನೌಟ್  01
ಕ್ರಿಸ್ ಮೊರಿಸ್ ಸಿ ಬಟ್ಲರ್ ಬಿ ಜೇಮ್ಸ ಟ್ರೆಡ್‌ವೆಲ್  03
ರೋರಿ ಕ್ಲೀನ್‌ವೆಲ್ಟ್ ಸಿ ಬಟ್ಲರ್ ಬಿ ಸ್ಟುವರ್ಟ್ ಬ್ರಾಡ್  43
ಲೊನ್ವಾಬೊ ಸೊಸೊಬೆ ಸಿ ಬಟ್ಲರ್ ಬಿ ಸ್ಟುವರ್ಟ್ ಬ್ರಾಡ್  00
ಇತರೆ (ಲೆಗ್‌ಬೈ-6, ವೈಡ್-6)  12
ವಿಕೆಟ್ ಪತನ: 1-1 (ಇನ್‌ಗ್ರಾಮ್; 0.5), 2-4 (ಆಮ್ಲಾ; 1.4), 3-45 (ಪೀಟರ್‌ಸನ್; 10.5), 4-50 (ಡಿವಿಲಿಯರ್ಸ್; 13.4), 5-63 (ಡುಮಿನಿ; 16.5), 6-70 (ಪ್ಲೆಸಿಸ್; 18.4), 7-76 (ಮೆಕ್‌ಲಾರೆನ್; 20.2), 8-80 (ಮೊರಿಸ್; 22.3), 9-175 (ಕ್ಲೀನ್‌ವೆಲ್ಟ್; 38.3), 10-175 (ಸೊಸೊಬೆ; 38.4)
ಬೌಲಿಂಗ್: ಜೇಮ್ಸ ಆ್ಯಂಡರ್‌ಸನ್ 8-1-14-2, ಸ್ಟೀವನ್ ಫಿನ್ 8-1-45-1, ಸ್ಟುವರ್ಟ್ ಬ್ರಾಡ್ 8.4-0-50-3, ಜೇಮ್ಸ ಟ್ರೆಡ್‌ವೆಲ್ 7-1-19-3, ಜೋ ರೂಟ್ 3-0-22-0, ರವಿ ಬೋಪಾರ 4-0-19-0

ಇಂಗ್ಲೆಂಡ್: 37.3 ಓವರ್‌ಗಳಲ್ಲಿ 3 ವಿಕೆಟ್‌ಗೆ 179
ಅಲಸ್ಟೇರ್ ಕುಕ್ ಸಿ ಡಿವಿಲಿಯರ್ಸ್ ಬಿ ಕ್ರಿಸ್ ಮೊರಿಸ್  06
ಇಯಾನ್ ಬೆಲ್ ಸಿ ಡಿವಿಲಿಯರ್ಸ್ ಬಿ ರೋರಿ ಕ್ಲೀನ್‌ವೆಲ್ಟ್  20
ಜೊನಾಥನ್ ಟ್ರಾಟ್ ಔಟಾಗದೆ  82
ಜೋ ರೂಟ್ ಬಿ ಜೆಪಿ ಡುಮಿನಿ  48
ಎಯೊನ್ ಮಾರ್ಗನ್ ಔಟಾಗದೆ  15
ಇತರೆ: (ಲೆಗ್‌ಬೈ-4, ವೈಡ್-4)  08
ವಿಕೆಟ್ ಪತನ: 1-22 (ಕುಕ್; 6.2), 2-41 (ಬೆಲ್; 10.6), 3-146 (ರೂಟ್; 31.6)
ಬೌಲಿಂಗ್: ಕ್ರಿಸ್ ಮೊರಿಸ್ 8-1-38-1, ರಾಬಿನ್ ಪೀಟರ್‌ಸನ್ 9.3-1-49-0, ಜೆಪಿ ಡುಮಿನಿ 5-0-27-1, ಲೊನ್ವಾಬೊ ಸೊಸೊಬೆ 5-0-26-0, ರೋರಿ ಕ್ಲೀನ್‌ವೆಲ್ಟ್ 4-0-10-1,ರ‍್ಯಾನ್ ಮೆಕ್‌ಲಾರೆನ್ 6-0-25-0

ಫಲಿತಾಂಶ: ಇಂಗ್ಲೆಂಡ್‌ಗೆ ಏಳು ವಿಕೆಟ್ ಜಯ ಹಾಗೂ ಫೈನಲ್ ಪ್ರವೇಶ
ಪಂದ್ಯಶ್ರೇಷ್ಠ: ಜೇಮ್ಸ ಟ್ರೆಡ್‌ವೆಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.