ಪ್ಯಾರಿಸ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಳ್ಳುವ ಮೂಲಕ ನಿರೀಕ್ಷೆ ಹೆಚ್ಚಿಸಿಕೊಂಡಿರುವ ಪಿ.ವಿ ಸಿಂಧು ಹಿಂದಿನ ಟೂರ್ನಿಯ ನಿರಾಸೆ ಮರೆತು ಮುಂಬರುವ ಫ್ರೆಂಚ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.
ಆರನೇ ಶ್ರೇಯಾಂಕದ ಸಿಂಧು ಡೆನ್ಮಾರ್ಕ್ ಓಪನ್‌ನ ಎರಡನೇ ಸುತ್ತಿನಲ್ಲಿಯೇ ಜಪಾನ್‌ನ ಸಯಾಕಾ ಸಾಟೊ ಎದುರು ಸೋಲು ಕಂಡಿದ್ದರು.
ಫ್ರೆಂಚ್ ಓಪನ್‌ನ ಆರಂಭಿಕ ಸುತ್ತಿನಲ್ಲಿ ಅವರು ಹಾಂಕಾಂಗ್‌ನ ಯಿಪ್ ಪಿ ಯಿನ್‌ಗೆ ಸವಾಲು ಒಡ್ಡಲಿದ್ದಾರೆ. ಎರಡನೇ ಸುತ್ತಿನಲ್ಲಿ ಚೀನಾದ ಹೆ ಬಿಂಗ್ಜಿಯಾವೊ ಅವರೊಂದಿಗೆ ಆಡುವ ಸಾಧ್ಯತೆ ಇದೆ. ಹಿಂದಿನ ಟೂರ್ನಿಯಲ್ಲಿ ಸಿಂಧು ಚೀನಾದ ಹೆ ಎದುರು ಸುಲಭ ಗೆಲುವು ದಾಖಲಿಸಿದ್ದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಡಚ್ ಓಪನ್ ಫೈನಲ್ ತಲುಪಿದ್ದ ಅಜಯ್ ಜಯರಾಮ್ ಹಾಗೂ ಸ್ವಿಸ್ ಓಪನ್ ಚಾಂಪಿಯನ್ ಎಚ್.ಎಸ್ ಪ್ರಣಯ್ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಕೆನಡಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಕೊರಿಯಾದ ಲೀ ಹುಯಾನ್ ಎದುರು ಆಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.