ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಪ್ರೀ ಕ್ವಾರ್ಟರ್‌ಗೆ ನಡಾಲ್

ಏಜೆನ್ಸೀಸ್
Published 2 ಜೂನ್ 2017, 19:35 IST
Last Updated 2 ಜೂನ್ 2017, 19:35 IST
ರಾಫೆಲ್‌ ನಡಾಲ್ ಆಟದ ಭಂಗಿ
ರಾಫೆಲ್‌ ನಡಾಲ್ ಆಟದ ಭಂಗಿ   

ಪ್ಯಾರಿಸ್: ಒಂಬತ್ತು ಬಾರಿ ಇಲ್ಲಿ ಚಾಂಪಿಯನ್ ಆಗಿರುವ ರಫೆಲ್ ನಡಾಲ್ ಹಾಗೂ ಗಾರ್ಬಿನ್ ಮುಗುರುಜಾ ಶುಕ್ರವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಸ್ಪೇನ್‌ನ ಆಟಗಾರ ಮೂರನೇ ಸುತ್ತಿನ ಪಂದ್ಯದಲ್ಲಿ 6–0, 6–1, 6–0ರಲ್ಲಿ ಜಾರ್ಜಿಯಾದ ನಿಕೊಲೊಜ್ ಬಸಿಲಶಿವಿಲಿ ಅವರನ್ನು ಮಣಿಸಿದರು.

ಮೂರು ಸೆಟ್‌ಗಳಲ್ಲಿ ನಡಾಲ್ ಕೇವಲ ಒಂದು ಗೇಮ್‌ನಲ್ಲಿ ಮಾತ್ರ ಸೋಲು ಕಂಡರು. ಪಂದ್ಯದ ಎಲ್ಲಾ ಹಂತದಲ್ಲೂ ಪ್ರಾಬಲ್ಯ ಮೆರೆದ ಅವರು ಮತ್ತೊಂದು ಪ್ರಶಸ್ತಿ ಗೆದ್ದುಕೊಳ್ಳುವ ವಿಶ್ವಾಸ ಮೂಡಿಸಿದರು.

ADVERTISEMENT

‘ಇಂದಿನ ಪಂದ್ಯದಲ್ಲಿ ನಾನು ಅತ್ಯುತ್ತಮವಾಗಿ ಆಡಿದೆ’ ಎಂದು ನಡಾಲ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ನಡಾಲ್ ರಾಬರ್ಟೊ ಬೂಸ್ಟಿನಾ ವಿರುದ್ಧ ಆಡಲಿದ್ದಾರೆ.

ಕೆನಡಾದ ಐದನೇ ಶ್ರೇಯಾಂಕದ ಆಟಗಾರ ಮಿಲೋಸ್ ರಾನಿಕ್‌ ಅವರಿಗೆ ವಾಕ್‌ಓವರ್ ಲಭಿಸಿತು. ಗ್ರೇಸಿಯಾ ಲೊಪೆಜ್‌ 1–6, 0–1ರಲ್ಲಿ ಹಿಂದೆ ಉಳಿದಿದ್ದ ವೇಳೆ ತೊಡೆಯ ಗಾಯಕ್ಕೆ ಒಳಗಾದ ಕಾರಣ ಪಂದ್ಯದಿಂದ ಹಿಂದೆಸರಿದರು.

ಪ್ರೀ ಕ್ವಾರ್ಟರ್‌ನಲ್ಲಿ ರಾನಿಕ್ ಸ್ಪೇನ್‌ನ 20ನೇ ಶ್ರೇಯಾಂಕದ ಆಟಗಾರ ಪ್ಯಾಬ್ಲೊ ಕರೆನೊ ಬೂಸ್ಟಾ ಎದುರು ಆಡಲಿದ್ದಾರೆ. ಬೂಸ್ಟಾ ತಮ್ಮ ಮೂರನೇ ಸುತ್ತಿನ ಪಂದ್ಯದಲ್ಲಿ 7–5, 6–3, 6–4ರಲ್ಲಿ ಬಲ್ಗೇರಿಯಾದ ಗ್ರಿಗೊರ್ ದಿಮಿಸ್ತೊವ್ ವಿರುದ್ಧ ಜಯದಾಖಲಿದ್ದಾರೆ.

10ನೇ ಶ್ರೇಯಾಂಕದ ಆಟಗಾರ ಡೇವಿಡ್ ಗೊಫಿನ್ ಮೊದಲ ಸೆಟ್‌ನಲ್ಲಿ 5–4ರಲ್ಲಿ ಮುನ್ನಡೆ ಹೊಂದಿದ್ದ ವೇಳೆ ಗಾಯಗೊಂಡು ಪಂದ್ಯದಿಂದ ಹಿಂದೆ ಸರಿದರು. ಅರ್ಜೆಂಟೀನಾದ ಹೊರಾ ಸಿಯ ಜೆಬಲ್ಲಾಸ್ ಅವರಿಗೆ ವಾಕ್‌ಓವರ್ ಲಭಿಸಿತು. ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ 5–7, 6–3, 3–6, 6–1, 6–1ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 41ನೇ ಸ್ಥಾನದಲ್ಲಿರುವ ಡೀಗೊ ಸಚ್‌ವರ್ತ್‌ಮನ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿದರು

ಐದು ಸೆಟ್‌ಗಳ ದೀರ್ಘ ಸಮಯದ ಪಂದ್ಯ ಇದಾಗಿತ್ತು. ಜೊಕೊವಿಚ್ ಮೊದಲ ಸೆಟ್‌ನಲ್ಲಿಯೇ ಸೋಲು ಕಂಡು ಒತ್ತಡಕ್ಕೆ ಒಳಗಾಗಿದ್ದರು. ಮೂರನೇ ಸೆಟ್‌ನಲ್ಲಿ ಕೂಡ ಅವರು ಹಿಂದೆ ಉಳಿದರು. ಆದರೆ ನಿರ್ಣಾಯಕವಾದ ಕೊನೆಯ ಎರಡು ಸೆಟ್‌ಗಳಲ್ಲಿ ಅವರು ಎಂದಿನ ಆಟದ ಮೂಲಕ ಗೆಲುವು ದಾಖಲಿಸಿದರು.

‘ಡೀಗೊ ಅತ್ಯುತ್ತಮವಾಗಿ ಆಡಿದರು. ಇದರಿಂದ ಪಂದ್ಯ ಗೆಲ್ಲುವಲ್ಲಿ ನಾನು ಸಾಕಷ್ಟು ಬೆವರು ಹರಿಸಬೇ ಕಾಯಿತು.

ಉತ್ತಮ ಪೈಪೋಟಿಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಎರಡನೇ ಶ್ರೇಯಾಂಕದ ಜೊಕೊವಿಚ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಡೊಮಿನಿಕ್ ಥೀಮ್‌ 6–1, 7–6, 6–3ರಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್‌ಗೆ ಸೋಲುಣಿಸಿದರು.

(ಮಾಲ್ಡನವಿಕ್ ಆಟದ ಭಂಗಿ)

ಮುಗುರುಜಾಗೆ ಜಯ: ಮಹಿಳೆಯರ ವಿಭಾಗದಲ್ಲಿ ಗಾರ್ಬಿನ್ ಮುಗುರುಜಾ 7–5, 6–2ರಲ್ಲಿ 27ನೇ ಶ್ರೇಯಾಂಕದ ಯುಲಿಯಾ ಪುಟಿ ನ್ಸ್‌ಟೆವಾ ವಿರುದ್ಧ ಗೆದ್ದರು.

ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ 6–1, 6–4ರಲ್ಲಿ ಲೆಸಿ ಸುರೆಂಕೊ ವಿರುದ್ಧ ಗೆದ್ದರು. ಆಸ್ಟ್ರೇಲಿಯಾದ ಸಮಂತಾ ಸಾಸರ್‌ 6–2, 6–2ರಲ್ಲಿ ಅಮೆರಿಕದ ಬೆಥನಿ ಮಾಟೆಕ್‌ ಸಾಂಡ್ಸ್ ಎದುರು ಜಯದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.