ಚಿತ್ತಗಾಂಗ್: ಮೊದಲ ಪಂದ್ಯದಲ್ಲಿ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾದೇಶ ತಂಡ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ನೇಪಾಳದ ಸವಾಲನ್ನು ಎದುರಿಸಲಿದೆ.
ಮುಷ್ಫಿಕರ್ ರಹೀಮ್ ಬಳಗ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲಿ ಗೆಲುವು ಪಡೆದು ಪ್ರಧಾನ ಹಂತದಲ್ಲಿ ಸ್ಥಾನ ಖಚಿತಪಡಿಸಿ ಕೊಳ್ಳುವುದು ಬಾಂಗ್ಲಾ ತಂಡದ ಲೆಕ್ಕಾಚಾರ.
ನೇಪಾಳ ತಂಡ ಕೂಡಾ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದು, ಬಾಂಗ್ಲಾಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಈ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 80 ರನ್‌ಗಳ ಗೆಲುವು ಪಡೆದಿತ್ತು.
ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಆತಿಥೇಯರು ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಈ ತಂಡ ಬೌಲಿಂಗ್‌ನಲ್ಲಿ ಶಕೀಬ್ ಅಲ್ ಹಸನ್ ಅವರನ್ನು ನೆಚ್ಚಿಕೊಂಡಿದೆ. ಬಾಂಗ್ಲಾ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಇಂದು ಕಣಕ್ಕಿಳಿಸಲಿದೆ ಎಂಬ ಸೂಚನೆಯನ್ನು ನಾಯಕ ಮುಷ್ಫಿಕರ್ ರಹೀಮ್ ನೀಡಿದ್ದಾರೆ.
ನೇಪಾಳ ತಂಡವನ್ನು ಲಘುವಾಗಿ ಪರಿಗಣಿಸಲು ಬಾಂಗ್ಲಾ ಸಿದ್ಧವಿಲ್ಲ. ಕೆಲವೊಂದು ಪ್ರತಿಭಾನ್ವಿತ ಆಟಗಾರರನ್ನು ಈ ತಂಡ ಒಳಗೊಂಡಿದೆ. ನಾಯಕ ಪಾರಸ್ ಖಡ್ಕ ಹಾಗೂ ಗ್ಯಾನೇಂದ್ರ ಮಲ್ಲ ಅವರು ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.
ಶಕ್ತಿ ಗೌಚಾನ್ ಈ ತಂಡದ ಬೌಲಿಂಗ್ ವಿಭಾಗದ ‘ಶಕ್ತಿ’ ಎನಿಸಿಕೊಂಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಅವರು ನಾಲ್ಕು ಓವರ್‌ಗಳಲ್ಲಿ ಕೇವಲ 9 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.
ಮಂಗಳವಾರ ನಡೆಯುವ ಇನ್ನೊಂದು ಪಂದ್ಯದಲ್ಲಿ ಆಫ್ಘಾನಿಸ್ತಾನ ಮತ್ತು ಹಾಂಕಾಂಗ್ ತಂಡಗಳು ಎದುರಾಗಲಿವೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಾರಣ ಇಂದಿನ ಪೈಪೋಟಿ ಉಭಯ ತಂಡಗಳಿಗೂ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.