ADVERTISEMENT

ಬಾಂಗ್ಲಾದೇಶ ದಿಟ್ಟ ಉತ್ತರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 19:30 IST
Last Updated 15 ನವೆಂಬರ್ 2012, 19:30 IST

ಢಾಕಾ (ಎಎಫ್‌ಪಿ): ನಯೀಮ್ ಇಸ್ಲಾಮ್ (108) ಗಳಿಸಿದ ಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉಪಯುಕ್ತ ಆಟದ ನೆರವಿನಿಂದ ಬಾಂಗ್ಲಾದೇಶ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ಗೆ ದಿಟ್ಟ ಉತ್ತರ ನೀಡಿದೆ.

ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ 126 ಓವರ್‌ಗಳಲ್ಲಿ 6 ವಿಕೆಟ್‌ಗೆ 455 ರನ್ ಗಳಿಸಿತ್ತು. ಇನಿಂಗ್ಸ್ ಹಿನ್ನಡೆಯಿಂದ ಪಾರಾಗಲು ಬಾಂಗ್ಲಾ ಇನ್ನೂ 72 ರನ್ ಗಳಿಸಬೇಕಿದೆ.

3 ವಿಕೆಟ್‌ಗೆ 164 ರನ್‌ಗಳಿಂದ ಗುರುವಾರ ಆಟ ಮುಂದುವರಿಸಿದ್ದ ಬಾಂಗ್ಲಾ ತಂಡ ವಿಂಡೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಕ್ರಮವಾಗಿ 27 ಹಾಗೂ 16 ರನ್ ಗಳಿಸಿ ಅಜೇಯರಾಗುಳಿದಿದ್ದ ನಯೀಮ್ ಇಸ್ಲಾಮ್ ಮತ್ತು ಶಕೀಬ್ ಅಲ್ ಹಸನ್ ನಾಲ್ಕನೇ ವಿಕೆಟ್‌ಗೆ ದಾಖಲೆಯ 167 ರನ್‌ಗಳನ್ನು ಸೇರಿಸಿದರು.

ಶಕೀಬ್ (89, 143 ಎಸೆತ, 10 ಬೌಂ, 1 ಸಿಕ್ಸರ್) ಶತಕಕ್ಕೆ ಹನ್ನೊಂದು ರನ್‌ಗಳ ಅವಶ್ಯಕತೆಯಿದ್ದಾಗ ರವಿ ರಾಂಪಾಲ್‌ಗೆ ವಿಕೆಟ್ ಒಪ್ಪಿಸಿದರು. ನಯೀಮ್ ಆ ಬಳಿಕ ನಾಯಕ ಮುಷ್ಫಿಕುರ್ ರಹೀಮ್ (43) ಅವರೊಂದಿಗೆ ಐದನೇ ವಿಕೆಟ್‌ಗೆ 76 ರನ್‌ಗಳನ್ನು ಸೇರಿಸಿ ತಂಡವನ್ನು ಫಾಲೋಆನ್ ಅಪಾಯದಿಂದ ಪಾರುಮಾಡಿದರು. 255 ಎಸೆತಗಳನ್ನು ಎದುರಿಸಿದ ನಯೀಮ್ 17 ಬೌಂಡರಿಗಳ ನೆರವಿನಿಂದ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದರು. 

ನಯೀಮ್ ಮತ್ತು ರಹೀಮ್ ಆರು ರನ್‌ಗಳ ಅಂತರದಲ್ಲಿ ಔಟಾದರು. ಈ ವೇಳೆ ವಿಂಡೀಸ್ ಬೌಲರ್‌ಗಳಿಗೆ ಪ್ರಭುತ್ವ ಸಾಧಿಸಲು ಉತ್ತಮ ಅವಕಾಶ ಲಭಿಸಿತ್ತು. ಆದರೆ ಮಹಮೂದುಲ್ಲಾ (42) ಮತ್ತು ನಾಸಿರ್ ಹೊಸೇನ್ (33) ಮುರಿಯದ ಏಳನೇ ವಿಕೆಟ್‌ಗೆ 87 ರನ್‌ಗಳನ್ನು ಸೇರಿಸಿದ್ದು, ಪ್ರವಾಸಿ ತಂಡಕ್ಕೆ ಮುಳ್ಳಾಗಿ ಪರಿಣಮಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 144 ಓವರ್‌ಗಳಲ್ಲಿ 4 ವಿಕೆಟ್‌ಗೆ 527 ಡಿಕ್ಲೇರ್ಡ್‌ ಬಾಂಗ್ಲಾದೇಶ: ಮೊದಲ ಇನಿಂಗ್ಸ್ 126 ಓವರ್‌ಗಳಲ್ಲಿ 6 ವಿಕೆಟ್‌ಗೆ 455 (ನಯೀಮ್ ಇಸ್ಲಾಮ್ 108, ಶಕೀಬ್ ಅಲ್ ಹಸನ್ 89, ಮುಷ್ಫಿಕುರ್ ರಹೀಮ್ 43, ನಾಸಿರ್ ಹೊಸೇನ್ ಬ್ಯಾಟಿಂಗ್ 33, ಮಹಮೂದುಲ್ಲಾ ಬ್ಯಾಟಿಂಗ್ 42, ರವಿ ರಾಂಪಾಲ್ ಬ್ಯಾಟಿಂಗ್ 101ಕ್ಕೆ 3, ಡರೆನ್ ಸಮಿ 83ಕ್ಕೆ 2)
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.