ADVERTISEMENT

ಬಾಳೆಹಣ್ಣು ತಿಂದಷ್ಟು ಸುಲಭವೇ...?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:50 IST
Last Updated 18 ಫೆಬ್ರುವರಿ 2011, 18:50 IST

ಬಾಂಗ್ಲಾದೇಶ ತಂಡವು ತನ್ನದೇ ನಾಡಿನಲ್ಲಿಯೇ ಆಡುವುದರಿಂದ ಗೆಲುವು ಎನ್ನುವುದು ಬಾಳೆಹಣ್ಣು ಸುಲಿದು ತಿಂದಷ್ಟೇ ಸುಲಭ ಆಗಬಹುದೆಂದು ನಿರೀಕ್ಷಿಸುತ್ತಿರುವುದು ಸಹಜ. ಭಾರತದಂಥ ಎದುರಾಳಿಗೆ ಕೂಡ ಬಾಂಗ್ಲಾದವರು ಆಘಾತ ನೀಡುವಂಥ ಅನುಮಾನವನ್ನು ಅಲ್ಲಗಳೆಯಲಾಗದು. ಭಾರತ ಮಾತ್ರವೇಕೆ, ತನ್ನ ಗುಂಪಿನಲ್ಲಿನ ಬಾಕಿ ಪ್ರಬಲ ಪಡೆಗಳ ವಿರುದ್ಧವೂ ಅಚ್ಚರಿಯ ಫಲಿತಾಂಶವನ್ನು ಪಡೆಯುವುದು ಸಾಧ್ಯವಾಗಬಹುದು. ತಮ್ಮ ನೆಲದಲ್ಲಿ ಬಾಂಗ್ಲಾ ಆಟಗಾರರಿಗೆ ಆಡುವುದ ಕಷ್ಟವಾಗುವುದಿಲ್ಲ. ಅದಕ್ಕೆ ಇತ್ತೀಚೆಗೆ ಆ ತಂಡವು ಆಡಿದ ಪಂದ್ಯಗಳ ಫಲಿತಾಂಶಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ಆದರೂ ಶಕ್ತಿವಂತ ತಂಡಗಳಿಗೆ ಭಾರಿ ಸವಾಲಾಗಿ ನಿಲ್ಲಲು ಕಷ್ಟದ ಹಾದಿಯಲ್ಲಿ ಬಾಂಗ್ಲಾದವರು ನಡೆಯಬೇಕು. ಏಕೆಂದರೆ ಇದು ವಿಶ್ವಕಪ್; ಇದರಲ್ಲಿ ಯಾವುದೂ ಕಾಗದದ ಮೇಲೆ ಲೆಕ್ಕಾಚಾರ ಮಾಡಿದಷ್ಟು ಸುಲಭವಾಗಿರುವುದಿಲ್ಲ.

ಭಾರತಕ್ಕೆ ಸ್ವಲ್ಪ ಆತಂಕ ಇದೆ ಎಂದು ಹೇಳಬಹುದು. ಏಕೆಂದರೆ ಅದು ತನ್ನ ಯುವ ಆಟಗಾರರನ್ನು ಇನ್ನೂ ಸರಿಯಾಗಿ ಹೊಂದಿಸಿಕೊಂಡಿಲ್ಲ. ಅವರನ್ನು ಹೇಗೆ ಪ್ರಯೋಗಿಸಬೇಕು ಎನ್ನುವುದನ್ನು ಪಂದ್ಯಗಳಲ್ಲಿಯೇ ನಿರ್ಧರಿಸಿಕೊಳ್ಳಬೇಕು. ಆದರೆ ಪ್ರಭಾವಿ ಯುವ ಆಟಗಾರರು ಇರುವುದು ಭಾರತಕ್ಕೆ ಇನ್ನೊಂದು ರೀತಿಯಲ್ಲಿ ಅನುಕೂಲವೂ ಆಗಿದೆ. ಅವರು ಉತ್ಸಾಹವನ್ನು ಯಶಸ್ಸಿನ ಹಾದಿಯಲ್ಲಿ ಹೂವು ಹಾಸಲು ಬಳಸಿಕೊಳ್ಳಬಹುದು. ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಅವರಂಥ ಆಟಗಾರರ ಬಗ್ಗೆ ನಾನು ಮೆಚ್ಚುಗೆ ಹೊಂದಿದ್ದೇನೆ. ಅವರು ಬ್ಯಾಟಿಂಗ್‌ಗೆ ಬಲ ನೀಡುವ ಜೊತೆಗೆ ಕ್ಷೇತ್ರರಕ್ಷಣೆಯಲ್ಲಿಯೂ ಪರಿಣಾಮಕಾರಿ ಆಗಿದ್ದಾರೆ.
ಯುವರಾಜ್ ಸಿಂಗ್ ವಿಷಯದಲ್ಲಿ ಭಾರತಕ್ಕೆ ಆತಂಕ ಇರುವುದಂತೂ ನಿಜ. ಏಕೆಂದರೆ ಅವರು ಇತ್ತೀಚೆಗೆ ಪ್ರದರ್ಶನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾರತ ತಂಡದಲ್ಲಿ ಆಡಿದಾಗ ಮಾತ್ರವಲ್ಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಅವರ ಆಟವೂ ಗಮನ ಸೆಳೆಯುವಂಥದಾಗಿಲ್ಲ. ಎರಡು ಮೂರು ವರ್ಷಗಳಲ್ಲಿ ‘ಯುವಿ’ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ದು ತೀರ ಕಡಿಮೆ. ಆದರೂ ಅವರು ತಂಡದಲ್ಲಿ ಇದ್ದಾರೆ. ಆದ್ದರಿಂದ ಈಗ ಯುವರಾಜ್ ಎಲ್ಲ ಕೊರತೆಗಳನ್ನು ಮೀರಿ ಬೆಳೆದು ನಿಲ್ಲಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.