
ನವದೆಹಲಿ (ಪಿಟಿಐ): ಫಾರ್ಮುಲಾ ಒನ್ ಚಾಲಕರಾದ ಭಾರತ ನಾರಾಯಣ ಕಾರ್ತಿಕೇಯನ್ ಹಾಗೂ ಕರುಣ್ ಚಾಂದೋಕ್ ಅವರು ಮುಂದಿನ ತಿಂಗಳು ಬ್ಯಾಂಕಾಕ್‌ನಲ್ಲಿ ನಡೆಯಲಿರುವ `ರೇಸ್ ಆಫ್ ಚಾಂಪಿಯನ್ಸ್~ನಲ್ಲಿ ಪಾಲ್ಗೊಳ್ಳಲಿದ್ದಾರೆ.
2004ರ ಬಳಿಕ ಮೊದಲ ಬಾರಿಗೆ ಕಾರ್ತಿಕೇಯನ್ ಹಾಗೂ ಚಾಂದೋಕ್ ಒಟ್ಟಿಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 1988ರಲ್ಲಿ `ರೇಸ್ ಆಫ್ ಚಾಂಪಿಯನ್ಸ್~ ಸ್ಪರ್ಧೆಯನ್ನು ಅಳವಡಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಭಾರತದ ಚಾಲಕರನ್ನು ಆಹ್ವಾನಿಸಲಾಗುತ್ತಿದೆ. ಈ ಸ್ಪರ್ಧೆ ಡಿಸೆಂಬರ್ 14ರಿಂದ 16ರವರೆಗೆ ನಡೆಯಲಿದೆ.
ಇದರಲ್ಲಿ ಫಾರ್ಮುಲಾ ಒನ್ ಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್, ಏಳು ಬಾರಿಯ ಚಾಂಪಿಯನ್ ಮೈಕಲ್ ಶುಮೇಕರ್ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಇವರು ಜರ್ಮನಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
`ಇದೊಂದು ಸ್ಮರಣೀಯ ಕ್ಷಣ. ಇದೊಂದು ವಿಭಿನ್ನ ಪ್ರಕಾರದ ರೇಸ್. ಇದರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಹ್ವಾನ ನೀಡಿರುವುದು ಹೆಮ್ಮೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಭಾರತದ ಪ್ರಮುಖ ಪಾತ್ರ ವಹಿಸುತ್ತಿದೆ. ಎಫ್-1 ತಂಡವಿದೆ, ಚಾಲಕರಿದ್ದಾರೆ, ರೇಸ್ ಕೂಡ ನಡೆಯುತ್ತಿದೆ~ ಎಂದು ಚಾಂದೋಕ್ ಮಂಗಳವಾರ ನುಡಿದಿದ್ದಾರೆ.
`ಇದೊಂದು ಅತ್ಯುತ್ತಮ ಅವಕಾಶ. ಇಲ್ಲಿ ಚಾಲಕರು ಬಳಸುವ ತಂತ್ರಜ್ಞಾನ ಎಲ್ಲರಿಗೂ ಸಮಾನವಾಗಿರಲಿದೆ~ ಎಂದು ಕಾರ್ತಿಕೇಯನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.