ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ ಡೇನಿಯಲ್ ಎಸ್. ಫರೀದ್ `ಹೊಂಡಾ~ ಪ್ರಾಯೋಜಿತ ಫೈವ್‌ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಹದಿನೈದು ಮತ್ತು ಹದಿನೇಳು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡು `ಪ್ರಶಸ್ತಿ ಡಬಲ್~ ಪಡೆದ ಕೀರ್ತಿಗೆ ಪಾತ್ರರಾದರು.
ರಾಹುಲ್ ಭಾರದ್ವಾಜ್ ಹಾಗೂ ಅಪೇಕ್ಷಾ ನಾಯಕ್ 13 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ , ಹದಿನೈದು ವರ್ಷ ವಯಸ್ಸಿನೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗದಲ್ಲಿ ಮಹಿಮಾ ಅಗರ್‌ವಾಲ್, 17 ವರ್ಷ ವಯಸ್ಸಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ವೈಷ್ಣವಿ ಕೆ. ಅಯ್ಯರ್ ಪ್ರಶಸ್ತಿ ಪಡೆದುಕೊಂಡರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ರಹೇಜಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹದಿಮೂರು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರಾಹುಲ್ ಭಾರದ್ವಾಜ್ 21-14, 21-6 ರಲ್ಲಿ ಎರಡನೇ ಶ್ರೇಯಾಂಕದ ಎಸ್. ವಿಘ್ನೇಶ್ ಮೇಲೂ, ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ ನಾಯಕ್ 11-21, 21-18, 21-11 ರಲ್ಲಿ ಅರ್ಚನಾ ಪೈ ವಿರುದ್ಧವೂ ಗೆದ್ದರು.
ಇದೇ ವಿಭಾಗದ ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಕೆ.ಆರ್. ಅಭಿಷೇಕ್ ಮತ್ತು ಎಸ್. ವಿಘ್ನೇಶ್ ಜೋಡಿ 21-19, 21-18 ರಲ್ಲಿ ಅಬಿ ಅನುಧನ್ ಮತ್ತು ಬಿ.ಎಂ. ರಾಹುಲ್ ಭಾರದ್ವಾಜ್ ಮೇಲೆ ಜಯ ಸಾಧಿಸಿತು.
ಹದಿನೈದು ವರ್ಷ ವಯಸ್ಸಿನ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಡೇನಿಯಲ್ ಎಸ್. ಫರೀದ್ 21-13, 21-11 ರಲ್ಲಿ ಎರಡನೇ ಶ್ರೇಯಾಂಕದ ಸುದೀಪ್ ಸುರೇಶ್ ಮೇಲೂ, ಬಾಲಕಿಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಮಹಿಮಾ ಅಗರ್‌ವಾಲ್ 21-10, 21-7 ರಲ್ಲಿ ಅಶ್ವಿನಿ ಭಟ್ ವಿರುದ್ಧವೂ, ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಮಿಥುನ್ ಮಂಜುನಾಥ್ ಮತ್ತು ಸುದೀಪ್ ಸುರೇಶ್ 21-12, 17-21, 21-19 ರಲ್ಲಿ ಆಕಾಶ್‌ರಾಜ್ ಮೂರ್ತಿ ಮತ್ತು ಬಿ.ಆರ್. ಸಂಕೀರ್ತ್ ಮೇಲೂ, ಬಾಲಕಿಯರ ವಿಭಾಗದಲ್ಲಿ ಅಶ್ವಿನಿ ಭಟ್ ಮತ್ತು ಯು.ಕೆ. ಮಿಥುಲಾ 21-13, 21-15 ರಲ್ಲಿ ಎಂ.ಎಸ್. ಚಿನ್ಮಯಿ ಮತ್ತು ಎಸ್. ಕೆ. ತನ್ವೀ ವಿರುದ್ಧವೂ ಜಯ ಪಡೆದು ಪ್ರಶಸ್ತಿ ಗೆದ್ದುಕೊಂಡರು.
ಹದಿನೇಳು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಡೇನಿಯಲ್ ಎಸ್. ಫರೀದ್ 21-10, 21-12 ರಲ್ಲಿ ರೋಹಿತ್ ಮೇಲೂ, ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಕೆ. ಅಯ್ಯರ್ 18-21, 21-12, 21-13 ರಲ್ಲಿ ಸಯೆದಾ ಸಾದತ್ ಅಶ್ರೀನ್ ವಿರುದ್ಧವೂ, ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಆಕಾಶ್‌ರಾಜ್ ಮೂರ್ತಿ ಮತ್ತು ಬಿ.ಆರ್. ಸಂಕೀರ್ತ್ 25-27, 21-19, 21-17 ರಲ್ಲಿ ಜಸ್ವಂತ್ ಗೌಡ ಮತ್ತು ಕೆ.ವಿ. ರಕ್ಷಿತ್ ಮೇಲೂ ಗೆಲುವು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.