ADVERTISEMENT

ಬ್ಯಾಡ್ಮಿಂಟನ್: ಫೈನಲ್‌ಗೆ ಸೈನಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಒಯೆನ್ಸ್, ಡೆನ್ಮಾರ್ಕ್ (ಪಿಟಿಐ): ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಚೀನಾದ ಯಿಹಾನ್ ವಾಂಗ್‌ಗೆ ಆಘಾತ ನೀಡಿದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದಲ್ಲಿ ನಾಲ್ಕನೇ  ರ್‍ಯಾಂಕ್ ನಲ್ಲಿರುವ ಸೈನಾ ಮೊದಲ ಗೇಮ್‌ನಲ್ಲಿ 21-12ರಲ್ಲಿ ಗೆಲುವು ಸಾಧಿಸಿದ್ದರು. ಎರಡನೇ ಗೇಮ್‌ನ ಒಂದು ಹಂತದಲ್ಲಿ 9-2ರಲ್ಲಿ ಮುನ್ನಡೆ ಗಳಿಸಿದ್ದರು. ಈ ವೇಳೆ ದೈಹಿಕವಾಗಿ ಬಳಲಿದ ವಾಂಗ್ ಸ್ಪರ್ಧೆಯಿಂದ ಹಿಂದೆ ಸರಿದರು. ಇದರಿಂದ ಹೈದರಾಬಾದ್‌ನ ಆಟಗಾರ್ತಿಯ ಫೈನಲ್ ಪ್ರವೇಶದ ಹಾದಿ ಸುಗಮವಾಯಿತು.

ಮೊದಲ ಗೇಮ್‌ನ ಆರಂಭದಲ್ಲಿ 0-5ರಲ್ಲಿ ಹಿನ್ನಡೆಯಲ್ಲಿದ್ದ ಹೈದರಾಬಾದ್‌ನ ಆಟಗಾರ್ತಿ ನಂತರ ಚೇತರಿಕೆಯ ಪ್ರದರ್ಶನ ನೀಡಿದರು. ಅಷ್ಟೇ ಅಲ್ಲ, ಈ ಅಂತರವನ್ನು 11-6ಕ್ಕೆ ತಗ್ಗಿಸಿದರು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 33 ನಿಮಿಷ ಹೋರಾಟ ನಡೆಸಿದ ಸೈನಾ 21-10, 21-11ರಲ್ಲಿ ಸ್ಥಳೀಯ ಆಟಗಾರ್ತಿ ಟಿನೆ ಬೌನ್ ಎದುರು ಗೆಲುವು ಸಾಧಿಸಿದ್ದರು.

ಈ ಪಂದ್ಯ ಲಂಡನ್ ಒಲಿಂ   ಪಿಕ್ಸ್‌ನ ಸೆಮಿಫೈನಲ್ ಪಂದ್ಯವನ್ನು ನೆನಪಿಸಿತು. ಏಕೆಂದರೆ, ಸೈನಾ ಹಾಗೂ ವಾಂಗ್ ನಾಲ್ಕರ ಘಟ್ಟದ ಹೋರಾಟದಲ್ಲಿ ಮುಖಾಮುಖಿಯಾಗಿದ್ದರು. ಆಗಲೂ ವಾಂಗ್ ಸ್ನಾಯುಸೆಳೆತ ನೋವಿನ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದರಿಂದ ಸೈನಾಗೆ ಕಂಚಿನ ಪದಕ ಒಲಿದಿತ್ತು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಸೈನಾ ಪಾಲ್ಗೊಂಡಿರುವ ಮೊದಲ ಚಾಂಪಿಯನ್‌ಷಿಪ್ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.