ADVERTISEMENT

ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಪಿ. ಕಶ್ಯಪ್ ಮತ್ತು ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಭಾರತ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಸೈನಾ ನೆಹ್ವಾಲ್, ಅಜಯ್ ಜಯರಾಮ್ ಹಾಗೂ ನೇಹಾ ಪಂಡಿತ್ ಸೋತು ಹೊರಬಿದ್ದರು.

ಸಿರಿ ಪೋರ್ಟ್ ಕ್ರೀಡಾ ಸಮುಚ್ಛಯದ ಕೋರ್ಟ್‌ನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ  ಸೈನಾ 19-21, 10-21 ರಲ್ಲಿ ಕೊರಿಯದ ಯೂನ್ ಜೂ ಬೆ ಎದುರು ಆಘಾತ ಅನುಭವಿಸಿದರು. ಮೂರನೇ ಶ್ರೇಯಾಂಕ ಹೊಂದಿದ್ದ ಸೈನಾ 39 ನಿಮಿಷಗಳ ಹೋರಾಟದ ಬಳಿಕ ಸೋಲೊಪ್ಪಿಕೊಂಡರು.

ತವರು ನೆಲದಲ್ಲಿ ಸೂಪರ್ ಸರಣಿ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಕಂಡಿದ್ದ ಪ್ರತಿಭಾವಂತ ಆಟಗಾರ್ತಿಗೆ ಭಾರಿ ನಿರಾಸೆ ಕಾಡಿತು. ಆದರೆ ಸಿಂಧು ಅಚ್ಚರಿಯ ಗೆಲುವು ಪಡೆಯುವಲ್ಲಿ ಯಶಸ್ವಿಯಾದರು. ಅವರು 21-17, 22-20 ರಲ್ಲಿ ಎಂಟನೇ ಶ್ರೇಯಾಂಕದ ಆಟಗಾರ್ತಿ ಕೊರಿಯಾದ ಜಿ ಹ್ಯೂನ್ ಸುಂಗ್‌ಗೆ ಆಘಾತ ನೀಡಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕನಸಿನಲ್ಲಿರುವ ಪಿ. ಕಶ್ಯಪ್ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ 15-21, 21-14, 22-20 ರಲ್ಲಿ ಥಾಯ್ಲೆಂಡ್‌ನ ಬೂನ್ಸಾಕ್ ಪೊನ್ಸಾನಾ ಎದುರು ಪ್ರಯಾಸದ ಗೆಲುವು ಸಾಧಿಸಿದರು. ಈ ಹೋರಾಟ ಒಂದು ಗಂಟೆಗೂ ಅಧಿಕ ಕಾಲ ನಡೆಯಿತು.

ಕಶ್ಯಪ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ ಚೀನಾದ ಚೆನ್ ಜಿನ್ ಅವರನ್ನು ಎದುರಿಸುವರು. ಈ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ ಅವರು ಲಂಡನ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸುವರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿದ್ದ ಅಜಯ್ ಜಯರಾಮ್‌ಗೆ ನಿರಾಸೆ ಉಂಟಾಯಿತು. ವಿಶ್ವದ ಅಗ್ರ ರ‌್ಯಾಂಕ್‌ನ ಆಟಗಾರ ಮಲೇಷ್ಯದ ಲೀ ಚೊಂಗ್ ವೀ 21-16, 15-21, 21-5 ರಲ್ಲಿ ಅಜಯ್ ವಿರುದ್ಧ ಜಯ ಪಡೆದರು.

ನೇಹಾಗೆ ನಿರಾಸೆ: ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ನೇಹಾ ಪಂಡಿತ್ ನಿರಾಸೆ ಅನುಭವಿಸಿದರು. ಅವರು 13-21, 10-21 ರಲ್ಲಿ ಸಿಂಗಪುರದ ಜುವಾನ್ ಗು ಎದುರು ಸೋತರು. 

 ಜ್ವಾಲಾ ಗುಟ್ಟಾ- ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ ವಿಭಾಗದ ಪಂದ್ಯದಲ್ಲಿ 16-21, 21-15, 21-17 ರಲ್ಲಿ ಇಂಡೊನೇಷ್ಯದ ವಿಟಾ ಮರಿಸ್ಸಾ- ನದ್ಯಾ ಮೆಲಾಟಿ ವಿರುದ್ಧ ಗೆದ್ದರು. ಈ ಪಂದ್ಯ 50 ನಿಮಿಷಗಳ ಕಾಲ ನಡೆಯಿತು.

ಪುರುಷರ ಡಬಲ್ಸ್ ವಿಭಾಗದಲ್ಲಿ ರೂಪೇಶ್ ಕುಮಾರ್ ಮತ್ತು ಸನಾವೆ ಥಾಮಸ್ 21-18, 18-21, 21-19 ರಲ್ಲಿ ಕೊರಿಯಾದ ಕಿ ಜುಂಗ್ ಕಿಮ್ ಹಾಗೂ ಸಾ ರಂಗ್ ಕಿಮ್ ಅವರನ್ನು ಮಣಿಸಿದರು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಕೊರಿಯಾದ ಸುಂಗ್ ಹ್ಯುನ್- ಯೊನ್ ಸೊಂಗ್ ಯೂ ಜೋಡಿ 21-10, 21-9 ರಲ್ಲಿ ಭಾರತದ ಮನೀಷ್ ಗುಪ್ತಾ- ಗೌರವ್ ವೆಂಕಟ್ ಜೋಡಿಯ ವಿರುದ್ಧ ಸುಲಭ ಜಯ ಸಾಧಿಸಿತು.

ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ- ತರುಣ್ ಜೋಡಿ 12-21, 14-21 ರಲ್ಲಿ ಜಪಾನ್‌ನ ಶೋಜಿ ಸಾಟೊ- ಶಿಜುಕಾ ಮತ್ಸುವ ಕೈಯಲ್ಲಿ ಪರಾಭವಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.