ADVERTISEMENT

ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಚೇತೇಶ್ವರ ಪೂಜಾರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಅಹಮದಾಬಾದ್: `ಎಲ್ಲರಂತೆ ನನಗೂ ಕನಸುಗಳಿವೆ. ಆದರೆ ಭವಿಷ್ಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅಂದಿನ ದಿನದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನ~ ಎಂದು ಚೇತೇಶ್ವರ ಪೂಜಾರ ನುಡಿದಿದ್ದಾರೆ.

ಇಂಗ್ಲೆಂಡ್ ಎದುರು ದ್ವಿಶತಕ ಗಳಿಸಿದ ಬಳಿಕ ತಮ್ಮ ನೆಚ್ಚಿನ ಹೀರೊ ರಾಹುಲ್ ದ್ರಾವಿಡ್ ಅಭಿನಂದನೆಯ ಸಂದೇಶ ಕಳುಹಿಸಿದರು ಎಂದೂ ಅವರು ಹೇಳಿದರು. ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ದ್ರಾವಿಡ್ ಅಹಮದಾಬಾದ್‌ನಲ್ಲಿದ್ದಾರೆ.

`ಈಗ ಇಂಗ್ಲೆಂಡ್ ತುಂಬಾ ಒತ್ತಡದಲ್ಲಿರುವಂತೆ ಕಾಣುತ್ತಿದೆ. ಈ ಪಂದ್ಯದಲ್ಲಿ ತಿರುಗೇಟು ನೀಡಲು ಅವರಿಗೆ ತುಂಬಾ ಕಷ್ಟವಿದೆ. ಪಿಚ್ ಕೂಡ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದೆ. ಐದನೇ ದಿನಕ್ಕೆ ಕಾಲಿಡುವ ಮುನ್ನವೇ ಪಂದ್ಯ ಮುಗಿಯಬಹುದು~ ಎಂದು ಪೂಜಾರ ತಿಳಿಸಿದರು.

`ದೇಶಿ ಕ್ರಿಕೆಟ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡ್ದ್ದಿದೇನೆ. ದೇಶಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ತುಂಬಾ ವ್ಯತ್ಯಾಸವಿದೆ. ಆದರೆ ಯಾವುದೇ ಪ್ರಕಾರದ ಆಟದಲ್ಲಿ ಸುಮ್ಮನೇ ವಿಕೆಟ್ ಒಪ್ಪಿಸಲು ನನಗೆ ಮನಸ್ಸಾಗುವುದಿಲ್ಲ. ದ್ವಿಶತಕ ಗಳಿಸಿದ ಮೇಲೂ ವಿಕೆಟ್ ರಕ್ಷಿಸಿಕೊಳ್ಳುವುದರತ್ತ ನಾನು ಒತ್ತು ನೀಡಿದ್ದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.