ADVERTISEMENT

ಭಾರತಕ್ಕೆ ಶುಭಾರಂಭ

ಹಾಲಿ ಚಾಂಪಿಯನ್ ತಂಡ ಚೀನಾಗೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:49 IST
Last Updated 22 ಅಕ್ಟೋಬರ್ 2017, 19:49 IST
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಬಾ 16 ವರ್ಷದೊಳಗಿನವರ ಬಾಲಕಿಯರ ಏಷ್ಯಾ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತದ ವೈಷ್ಣವಿ ಯಾದವ್‌ (ಬಿಳಿ ಪೋಷಾಕು) ಪಾಯಿಂಟ್‌ ಗಳಿಸಲು ಮುನ್ನುಗ್ಗಿದ ಕ್ಷಣ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಬಾ 16 ವರ್ಷದೊಳಗಿನವರ ಬಾಲಕಿಯರ ಏಷ್ಯಾ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತದ ವೈಷ್ಣವಿ ಯಾದವ್‌ (ಬಿಳಿ ಪೋಷಾಕು) ಪಾಯಿಂಟ್‌ ಗಳಿಸಲು ಮುನ್ನುಗ್ಗಿದ ಕ್ಷಣ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್   

ಬೆಂಗಳೂರು: ವೈಷ್ಣವಿ ಯಾದವ್‌ ಮತ್ತು ಪುಷ್ಪಾ ಸೆಂಥಿಲ್ ಕುಮಾರ್‌ ಅವರ ಅಮೋಘ ಆಟದ ನೆರವಿನಿಂದ ಭಾರತ ಬಾಲಕಿಯರ ತಂಡ ವಿಜಯದ ನಗೆ ಸೂಸಿತು. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫಿಬಾ 16 ವರ್ಷದೊಳಗಿನವರ ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದವರು ಶುಭಾರಂಭ ಮಾಡಿದರು.

ಬಿ ವಿಭಾಗದ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯರು ನೇಪಾಳ ತಂಡದವರನ್ನು 106–37 ಪಾಯಿಂಟ್‌ಗಳಿಂದ ಮಣಿಸಿದರು.

ವೈಷ್ಣವಿ ಯಾದವ್‌ ಒಟ್ಟು 23 ಪಾಯಿಂಟ್‌ಗಳನ್ನು ಕಲೆ ಹಾಕಿದರೆ ಪುಷ್ಪಾ 18 ಪಾಯಿಂಟ್ ತಂದುಕೊಟ್ಟರು. ಇವರಿಬ್ಬರಿಗೆ ಉತ್ತಮ ಬೆಂಬಲ ನೀಡಿದ ಮೋನಿಕಾ ಜಯಕುಮಾರ್‌ ಮತ್ತು ನೇಹಾ ಕಾರ್ವ ಕೂಡ ಮಿಂಚಿದರು.

ADVERTISEMENT

ಇವರು ಕ್ರಮವಾಗಿ 13 ಮತ್ತು 10 ಪಾಯಿಂಟ್ ಕಲೆ ಹಾಕಿದರು.ಆರಂಭದಲ್ಲೇ ಎದುರಾಳಿ ತಂಡದ ಮೇಲೆ ಆಧಿಪತ್ಯ ಸ್ಥಾಪಿಸಿದ ಭಾರತ ತಂಡದವರು ಮೊದಲ ಕ್ವಾರ್ಟರ್‌ನಲ್ಲಿ 26–8ರಿಂದ ಮುನ್ನಡೆದರು. ಎರಡನೇ ಕ್ವಾರ್ಟರ್ ಮುಗಿಯುವಷ್ಟರಲ್ಲಿ ಭಾರತದ ಮುನ್ನಡೆ 49–16ಕ್ಕೆ ಏರಿತು.

ಮೂರನೇ ಕ್ವಾರ್ಟರ್‌ ಮುಗಿಯುವಾಗ ನೇಪಾಳ ತಂಡ 63 ಪಾಯಿಂಟ್‌ಗಳಿಂದ ಹಿಂದೆ ಉಳಿಯಿತು. ನಂತರ ಗೆಲುವಿನ ಔಪಚಾರಿಕತೆ ಮುಗಿಸಿದ ಭಾರತ ಕೊನೆಯ ಕ್ವಾರ್ಟರ್‌ನಲ್ಲಿ 23 ಪಾಯಿಂಟ್‌ಗಳನ್ನು ಹೆಕ್ಕಿದರು. ಬೆಳಿಗ್ಗೆ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೀನಾ 141–32 ಪಾಯಿಂಟ್‌ಗಳಿಂದ ಹಾಂಕಾಂಗ್ ತಂಡವನ್ನು ಮಣಿಸಿದರು. ಎರಡನೇ ದಿನವಾದ ಸೋಮವಾರ ಭಾರತದ ಬಾಲಕಿಯರು ಇರಾನ್ ತಂಡವನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.