ADVERTISEMENT

ಭಾರತಕ್ಕೆ ಸಾಮರ್ಥ್ಯ ವೃದ್ಧಿಯ ಸವಾಲು

ಹಾಕಿ: ಬಲಿಷ್ಠ ಜರ್ಮನಿ ಎದುರು ಪಂದ್ಯ ಇಂದು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ಮೊದಲ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಸೋಮವಾರ ಜರ್ಮನಿಯನ್ನು ಎದುರಿಸಲಿದೆ  ಎಎಫ್‌ಪಿ ಚಿತ್ರ
ಮೊದಲ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಸೋಮವಾರ ಜರ್ಮನಿಯನ್ನು ಎದುರಿಸಲಿದೆ ಎಎಫ್‌ಪಿ ಚಿತ್ರ   

ರಿಯೊ ಡಿ ಜನೈರೊ (ಪಿಟಿಐ): ಹನ್ನೆರೆಡು ವರ್ಷಗಳ ಬಳಿಕ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಗೆಲುವು ಪಡೆದು ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಇಲ್ಲಿನ ಒಲಿಂಪಿಕ್ಸ್‌ ಹಾಕಿ ಸೆಂಟರ್‌ನಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ಎದುರು ಪೈಪೋಟಿ ನಡೆಸಲಿದೆ.

ಗೋಲ್ ಕೀಪರ್ ಪಿ.ಆರ್‌. ಶ್ರೀಜೇಶ್‌ ನಾಯಕತ್ವದ ಭಾರತ ತಂಡ ಶನಿವಾರ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ 3–2ರಲ್ಲಿ ಗೆಲುವು ಪಡೆದಿತ್ತು.
ವಿಶ್ವ ರ್‍ಯಾಂಕ್‌ನಲ್ಲಿ ಐದನೇ ಸ್ಥಾನ ಹೊಂದಿರುವ ಭಾರತ ಅಷ್ಟೇನು ಬಲಿಷ್ಠವಲ್ಲದ ಐರ್ಲೆಂಡ್ ಎದುರು ರಕ್ಷಣಾ ವಿಭಾಗದಲ್ಲಿ ಪದೇ ಪದೇ ತಪ್ಪುಗಳನ್ನು ಮಾಡಿತ್ತಲ್ಲದೇ, ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವಿತ್ತು. ಆದ್ದರಿಂದ ಜರ್ಮನಿ  ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯುವ ಜೊತೆಗೆ ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳಬೇಕಾದ ಸವಾಲಿದೆ.

ಐರ್ಲೆಂಡ್ ತಂಡ ವಿಶ್ವ ರ್‍ಯಾಂಕ್‌ನಲ್ಲಿ 12ನೇ ಸ್ಥಾನದಲ್ಲಿದೆ. ಆದರೆ ಜರ್ಮನಿ ಮೂರನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ 2008 ಮತ್ತು 2012ರ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಜಯಿಸಿರುವ ಜರ್ಮನಿ ‘ಹ್ಯಾಟ್ರಿಕ್‌ ಚಿನ್ನ’ದ ಸಾಧನೆ ಮಾಡುವ ಗುರಿ ಹೊಂದಿದೆ. ಆದ್ದದಿಂದ ಈ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ಇಲ್ಲಿ ಇನ್ನು ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಗುಂಪಿನಲ್ಲಿ ರುವ ಆರು ತಂಡಗಳ ಪೈಕಿ  ಮೊದಲ ನಾಲ್ಕರಲ್ಲಿ ಸ್ಥಾನ ಪಡೆದರೆ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಲಭಿಸುತ್ತದೆ.

ಡ್ರ್ಯಾಗ್‌ಫ್ಲಿಕ್‌ ಪರಿಣಿತರಾದ ರೂಪಿಂದರ್‌ ಪಾಲ್‌ ಸಿಂಗ್ ಮತ್ತು ಕರ್ನಾಟಕದ ವಿ. ಆರ್‌. ರಘುನಾಥ್ ಅವರು ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಗೋಲು ಹೊಡೆದಿದ್ದರು. ಆದ್ದರಿಂದ ಇವರ ಮೇಲೆ ಹೆಚ್ಚು ನಿರೀಕ್ಷೆಯಿದೆ.

ಹಿಂದಿನ ಮುಖಾಮುಖಿ: ಲಂಡನ್‌ನಲ್ಲಿ ನಡೆದ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಲೀಗ್ ಪಂದ್ಯ 3–3 ಗೋಲುಗಳಿಂದ ಡ್ರಾ ಆಗಿತ್ತು.

ಈ ಪಂದ್ಯದಲ್ಲಿ ಭಾರತ ಮೊದಲು 3–1ರಲ್ಲಿ ಮುನ್ನಡೆ ಹೊಂದಿತ್ತು. ಕೊನೆಯ ಕ್ವಾರ್ಟರ್‌ನಲ್ಲಿ ರಕ್ಷಣಾ ವಿಭಾಗದಲ್ಲಿ ಪದೇ ಪದೇ ತಪ್ಪುಗಳನ್ನು ಮಾಡಿದ್ದರಿಂದ ಭಾರತ ಗೆಲ್ಲುವ ಅವಕಾಶವನ್ನು ಹಾಳು ಮಾಡಿಕೊಂಡಿತ್ತು. ಇನ್ನೊಂದು ಲೀಗ್ ಹಣಾಹಣಿಯಲ್ಲಿ ಜರ್ಮನಿ ಎದುರೇ ಸೋತಿತ್ತು. ಆದ್ದರಿಂದ ಭಾರತ ರಕ್ಷಣಾ ವಿಭಾಗಕ್ಕೆ ಒತ್ತು ಕೊಡಬೇಕಿದೆ.

ಮೊದಲ ಸ್ಥಾನ: ರಿಯೊ ಒಲಿಂಪಿಕ್ಸ್‌ ಆರಂಭದ ಪಂದ್ಯಗಳಲ್ಲಿ ತಲಾ ಒಂದು ಗೆಲುವು ಪಡೆದಿರುವ ಜರ್ಮನಿ ಮತ್ತು ಭಾರತ ತಂಡಗಳು ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಹೊಂದಿವೆ. ಎರಡೂ ತಂಡಗಳು ಸಮ ಪಾಯಿಂಟ್ಸ್‌ ಹೊಂದಿವೆಯಾದರೂ ಜರ್ಮನಿ ಗೋಲು ಗಳಿಕೆಯಲ್ಲಿ ಮುಂದಿದೆ.

20 ವರ್ಷಗಳಿಂದ ಗೆದ್ದಿಲ್ಲ!
ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಜರ್ಮನಿ ವಿರುದ್ಧ ಗೆಲುವು ಪಡೆಯದೇ 20 ವರ್ಷಗಳು ಉರುಳಿವೆ. 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ  ಭಾರತ 3–0ರಲ್ಲಿ ಗೆಲುವು ಪಡೆದಿತ್ತು. ಸಿಡ್ನಿ ಮತ್ತು ಅಥೆನ್ಸ್‌ ಒಲಿಂಪಿಕ್ಸ್‌ಗಳಲ್ಲಿ ಉಭಯ ತಂಡಗಳು ಬೇರೆ ಬೇರೆ ಗುಂಪುಗಳಲ್ಲಿದ್ದ ಕಾರಣ ಪಂದ್ಯವಾಡಲು ಅವಕಾಶವೇ ಸಿಕ್ಕಿರಲಿಲ್ಲ. 

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಜರ್ಮನಿ 5–2ಗೋಲುಗಳಿಂದ ಭಾರತವನ್ನು ಸೋಲಿಸಿತ್ತು. ಆದ್ದರಿಂದ ಹಿಂದಿನ ಸೋಲಿಗೆ ತಿರುಗೇಟು ನೀಡಲು ಶ್ರೀಜೇಶ್ ನಾಯಕತ್ವದ ತಂಡಕ್ಕೆ ಈಗ ಅವಕಾಶ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT