ಲಾಹೋರ್ (ಪಿಟಿಐ): ಮೂರು ರಾಷ್ಟ್ರಗಳ ಹಾಕಿ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲು ನಿರಾಕರಿಸಿದ್ದರಿಂದ, ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್) ಈ ಟೂರ್ನಿಯನ್ನೇ ರದ್ದು ಮಾಡಿದೆ.
ನಿಗದಿಯಂತೆ ಏಪ್ರಿಲ್ 9ರಿಂದ 13ರ ವರೆಗೆ ಈ ಹಾಕಿ ಟೂರ್ನಿ ನಡೆಯಬೇಕಿತ್ತು. ಇದರಲ್ಲಿ ಆತಿಥೇಯ ಪಾಕಿಸ್ತಾನ, ಭಾರತ ಹಾಗೂ ಮಲೇಷ್ಯಾ ತಂಡಗಳು ಪಾಲ್ಗೊಳ್ಳಬೇಕಿತ್ತು.
`ಭಾರತ ಹಾಕಿ ತಂಡವನ್ನು ಪಾಕ್ ಪ್ರವಾಸಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಭಾರತ ಹಾಕಿ ಫೆಡರೇಷನ್ ಎರಡು ದಿನಗಳ ಹಿಂದೆ ತಿಳಿಸಿದ್ದರಿಂದ ಟೂರ್ನಿ ರದ್ದು ಮಾಡಬೇಕಾಯಿತು~ ಎಂದು ಪಿಎಚ್‌ಎಫ್ ಕಾರ್ಯದರ್ಶಿ ಆಸಿಫ್ ಬಿಜ್ವಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಪಾಕಿಸ್ತಾನಕ್ಕೆ ಆಗಮಿಸುವಂತೆ ಎರಡು ವರ್ಷಗಳಿಂದ ಭಾರತಕ್ಕೆ ಆಹ್ವಾನ ನೀಡುತ್ತಲೇ ಬಂದಿದ್ದೇವೆ. ಆದರೆ ಅದು ನಿರಾಕರಿಸುತ್ತಲೇ ಬಂದಿದೆ. ಇಲ್ಲಿಗೆ ಬಂದರೆ ಬಿಗಿ ಭದ್ರತೆ ನೀಡುತ್ತೇವೆ. ಯಾವುದೇ ದುರಂತ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ. ಇದಕ್ಕೆ ಪಿಎಚ್‌ಎಫ್ ಹಾಗೂ ಪಾಕ್ ಸರ್ಕಾರ ಹೊಣೆಯಾಗಿರುತ್ತದೆ ಎಂದು ಭರವಸೆ ನೀಡಿದ್ದೆವು. ಆದರೂ, ಭಾರತ ಇಲ್ಲಿಗೆ ಬರಲು ಒಪ್ಪುತ್ತಿಲ್ಲ~ ಎಂದು ಬಿಜ್ವಾ ಹೇಳಿದರು.
`ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ಮಲೇಷ್ಯಾ ಮೊದಲೇ ಖಚಿತಪಡಿಸಿತ್ತು. ಆದರೆ, ಭಾರತದ ಈ ತೀರ್ಮಾನದಿಂದ ಬೇಸರವಾಗಿದೆ~ ಎಂದು ತಿಳಿಸಿದರು.
ಭದ್ರತೆಯ ಕಾರಣದಿಂದ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುವುದು ಬೇಡ ಎಂದು ವಿದೇಶಾಂಗ ಸಚಿವಾಲಯ ಭಾರತ ಹಾಕಿ ಫೆಡರೇಷನ್‌ಗೆ ತಿಳಿಸಿತ್ತು. ಆದ್ದರಿಂದ ಫೆಡರೇಷನ್ ಈ ನಿರ್ಧಾರಕ್ಕೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.