ADVERTISEMENT

ಭಾರತ ಮಹಿಳೆಯರಿಗೆ ಮತ್ತೆ ಸೋಲು

ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3 ಟೂರ್ನಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ರೋಟರ್‌ಡಮ್ (ಪಿಟಿಐ): ಭಾರತ ಮಹಿಳಾ ತಂಡಕ್ಕೆ ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3 ಟೂರ್ನಿಯ ಪಂದ್ಯದಲ್ಲಿ ಮತ್ತೊಂದು ಹೀನಾಯ ಸೋಲು ಎದುರಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ರಿತು ರಾಣಿ ನೇತೃತ್ವದ ಭಾರತ ಪ್ರಬಲ ಜರ್ಮನಿ ಎದುರು 1-7 ಗೋಲುಗಳ ಮುಖಭಂಗ ಅನುಭವಿಸಿತು.
ಜರ್ಮನಿ ತಂಡದ ವೇಗ ಹಾಗೂ ಆಕ್ರಮಣಕಾರಿ ಆಟಕ್ಕೆ ಸರಿಸಾಟಿಯಾಗಿ ನಿಲ್ಲುವಲ್ಲಿ ಭಾರತ ವಿಫಲವಾಯಿತು. ಜೇನ್ ಮುಲ್ಲರ್ ವೀಲಂಡ್ (14ನೇ ನಿಮಿಷ), ಮೇಕ್ ಸ್ಟಕೆಲ್ (22 ಮತ್ತು 44), ಮೇರಿ ಮೇವರ್ಸ್‌ (35), ಜೆನಿಫರ್ ಪ್ಲಾಸ್ (49), ಲಿಡಿಯಾ ಹಾಸ್ (54) ಮತ್ತು ಹನ್ನಾ ಕ್ರುಗೆರ್ (67) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. ಭಾರತ ತಂಡದ ಏಕೈಕ ಗೋಲನ್ನು ವಂದನಾ ಕಟಾರಿಯಾ ಪಂದ್ಯದ 43ನೇ ನಿಮಿಷದಲ್ಲಿ ತಂದಿತ್ತರು.

ಜರ್ಮನಿ ತಂಡಕ್ಕೆ ಐದು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಅದರಲ್ಲಿ ಎರಡನ್ನು ಮಾತ್ರ ಸದುಪಯೋಗಪಡಿಸಿಕೊಂಡಿತು. ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ, ಗೋಲು ಗಳಿಸುವಲ್ಲಿ ವಿಫಲವಾಯಿತು. ಭಾರತಕ್ಕೆ ಟೂರ್ನಿಯಲ್ಲಿ ಎದುರಾದ ಎರಡನೇ ಸೋಲು ಇದು. ಈ ಮೂಲಕ ಒಂದು ಪಾಯಿಂಟ್‌ನೊಂದಿಗೆ ಲೀಗ್ ವ್ಯವಹಾರ ಕೊನೆಗೊಳಿಸಿದೆ. ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿದ್ದರಿಂದ ಈ ಪಾಯಿಂಟ್ ಲಭಿಸಿತ್ತು.
ಈ ಗೆಲುವಿನ ಮೂಲಕ ಜರ್ಮನಿ ಒಂಬತ್ತು ಪಾಯಿಂಟ್‌ಗಳೊಂದಿಗೆ `ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಎರಡೂ ಗುಂಪುಗಳಲ್ಲಿರುವ ಎಲ್ಲ ಎಂಟು ತಂಡಗಳು ಇನ್ನು ನಾಕೌಟ್ ಹಂತದಲ್ಲಿ ಆಡಲಿವೆ. ನಾಕೌಟ್ ಹಂತದಲ್ಲಿ ಎದುರಾಳಿಗಳು ಯಾರು ಎಂಬುದನ್ನು ನಿರ್ಧರಿಸಲು ಲೀಗ್ ಪಂದ್ಯಗಳನ್ನು ನಡೆಸಲಾಗಿದೆ.

ನಾಕೌಟ್ ಪಂದ್ಯಗಳು ಮಂಗಳವಾರದಿಂದ ನಡೆಯಲಿದ್ದು, ಭಾರತ ತಂಡ `ಎ' ಗುಂಪಿನಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಪಡೆಯುವ ತಂಡದ ಜೊತೆ ಆಡಲಿದೆ. ಒಂದು ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯುವ ತಂಡ ಇನ್ನೊಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡದ ಜೊತೆ ಆಡಲಿದೆ.
ನ್ಯೂಜಿಲೆಂಡ್ ವಿರುದ್ಧ ಪೈಪೋಟಿ: ಭಾರತದ ಪುರುಷರ ತಂಡದವರು ಸೋಮವಾರ ನಡೆಯುವ ತಮ್ಮ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಡ್ರಾ ಸಾಧಿಸಿದ್ದ ಸರ್ದಾರ್ ಸಿಂಗ್ ಬಳಗ ಶುಕ್ರವಾರ ನಡೆದ ಪಂದ್ಯದಲ್ಲಿ ಹಾಲೆಂಡ್ ಕೈಯಲ್ಲಿ 0-2 ಗೋಲುಗಳ ಸೋಲು ಅನುಭವಿಸಿತ್ತು. ಆದ್ದರಿಂದ ಭಾರತ ತಂಡ ಕಿವೀಸ್ ವಿರುದ್ಧ ಗೆಲುವು ಪಡೆಯಲೇಬೇಕಿದೆ. ಐರ್ಲೆಂಡ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿರುವ ನ್ಯೂಜಿಲೆಂಡ್ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಭಾರತದ ಆಟಗಾರರು ಈ ಹಿಂದಿನ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.