ADVERTISEMENT

ಮದ್ದು ತಡೆಘಟಕ ವರದಿಯಲ್ಲಿ ಬಹಿರಂಗ:ಎಲ್ಲರನ್ನೂ ವಂಚಿಸಿದ್ದ ಆರ್ಮ್‌ಸ್ಟ್ರಾಂಗ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ನ್ಯೂಯಾರ್ಕ್ (ರಾಯಿಟರ್ಸ್‌): ಏಳು ಬಾರಿಯ ಟೂರ್ ಡಿ ಫ್ರಾನ್ಸ್ ವಿಜೇತ ಸೈಕ್ಲಿಂಗ್ ಸ್ಪರ್ಧಿ ಲ್ಯಾನ್ಸ್           ಆರ್ಮ್‌ಸ್ಟ್ರಾಂಗ್ ಯೋಜನಾಬದ್ಧ ರೀತಿಯಲ್ಲಿ ಉದ್ದೀಪನ ಮದ್ದು ಸೇವಿಸಿ ಎಲ್ಲರನ್ನೂ ವಂಚಿಸಿದ್ದಾರೆ ಎಂದು ಅಮೆರಿಕದ ಉದ್ದೀಪನ ಮದ್ದು ತಡೆ ಘಟಕ (ಯುಎಸ್‌ಎಡಿಎ) ತಿಳಿಸಿದೆ.

ಆರ್ಮ್‌ಸ್ಟ್ರಾಂಗ್ ಉದ್ದೀಪನ ಮದ್ದು ವಿವಾದದ ಬಗ್ಗೆ ತನಿಖೆ ನಡೆಸುತ್ತಿರುವ ಯುಎಸ್‌ಎಡಿಎ ಸಾವಿರಕ್ಕೂ ಅಧಿಕ ಪುಟಗಳ ವರದಿ ಸಿದ್ಧಪಡಿಸಿದೆ. ಅಚ್ಚರಿ ಉಂಟುಮಾಡುವ ಹಲವು ಅಂಶಗಳನ್ನು ಇದು ಒಳಗೊಂಡಿದೆ.
16 ಮಂದಿ ವೃತ್ತಿಪರ ಸೈಕ್ಲಿಸ್ಟ್‌ಗಳು ಇದರಲ್ಲಿ ಒಳಗೊಂಡಿದ್ದಾರೆ.

ಅದೇ ರೀತಿ ಇವರಲ್ಲಿ 11 ಮಂದಿ ಈ ಹಿಂದೆ ಆರ್ಮ್‌ಸ್ಟ್ರಾಂಗ್ ಅವರ ತಂಡದ ಸದಸ್ಯರೂ ಆಗಿದ್ದರು. ಯುಎಸ್‌ಎಡಿಎ ತನ್ನ ವರದಿಯನ್ನು ಅಂತರರಾಷ್ಟ್ರೀಯ ಸೈಕ್ಲಿಂಗ್ ಯೂನಿಯನ್, ವಿಶ್ವ ಉದ್ದೀಪನ ಮದ್ದು ತಡೆ ಘಟಕ ಮತ್ತು ವಿಶ್ವ ಟ್ರಯಥ್ಲಾನ್ ಕಾರ್ಪೊರೇಷನ್‌ಗೆ ಕಳುಹಿಸಿಕೊಟ್ಟಿದೆ. 

ಯುಎಸ್ ಪೋಸ್ಟಲ್ ಸರ್ವಿಸ್ ಸೈಕ್ಲಿಂಗ್ ತಂಡದ ವೈದ್ಯರೇ         ಆರ್ಮ್‌ಸ್ಟ್ರಾಂಗ್‌ಗೆ ಉದ್ದೀಪನ ಮದ್ದು ನೀಡಿದ್ದರು ಎಂದು ನಾಲ್ಕು ಋತುಗಳ ಕಾಲ ಅವರ ಜೊತೆಗಿದ್ದ ಸ್ಪರ್ಧಿ ಮೈಕಲ್ ಬಾರ‌್ರಿ ನುಡಿದಿದ್ದಾರೆ.
`ಯುಎಸ್ ಪೋಸ್ಟಲ್ ಸರ್ವಿಸ್ ಸೈಕ್ಲಿಂಗ್ ತಂಡ ಅತ್ಯಂತ ವೈಜ್ಞಾನಿಕ ಮತ್ತು ವೃತ್ತಿಪರ ರೀತಿಯಲ್ಲಿ ಉದ್ದೀಪನ ಮದ್ದು ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು.

ಕ್ರೀಡೆಯ ಇತಿಹಾಸದಲ್ಲಿ ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ನಿಷೇಧಿತ ಮದ್ದು ಸೇವನೆ ಎಲ್ಲೂ ನಡೆದಿಲ್ಲ~ ಎಂದು ವರದಿಯಲ್ಲಿ ತಿಳಿಸಲಾಗಿದೆ. `ಯುಎಸ್ ಪೋಸ್ಟಲ್ ಸರ್ವಿಸ್ ಸೈಕ್ಲಿಂಗ್ ತಂಡದ ಸ್ಪರ್ಧಿಗಳು ಹಾಗೂ ಇತರರು ಧೈರ್ಯದಿಂದ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ತಪ್ಪು ಒಪ್ಪಿಕೊಂಡು ಶಿಕ್ಷೆ ಅನುಭವಿಸುವುದು ಸುಲಭವಲ್ಲ~ ಎಂದು ಯುಎಸ್‌ಎಡಿಎ ಹೇಳಿದೆ. ಆದರೆ ಆರ್ಮ್‌ಸ್ಟ್ರಾಂಗ್ ಅವರ ವಕೀಲರು ಈ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.