ADVERTISEMENT

ಮಹಿಳೆಯರ ತಂಡ ಬಲಪಡಿಸುವತ್ತ ಬಿಸಿಸಿಐ ಚಿತ್ತ

ಪಿಟಿಐ
Published 20 ಮಾರ್ಚ್ 2018, 19:39 IST
Last Updated 20 ಮಾರ್ಚ್ 2018, 19:39 IST
ಡಯಾನಾ
ಡಯಾನಾ   

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ಭಾರತ ಮಹಿಳೆಯರ ತಂಡದ ಬಲ ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುವುದಾಗಿ ಬಿಸಿಸಿಐ ತಿಳಿಸಿದೆ.

ಆದಕ್ಕಾಗಿ ಕಾಯ್ದಿಟ್ಟ ಆಟಗಾರ್ತಿಯರ (ಬೆಂಚ್‌ ಸ್ಟ್ರೆಂಥ್) ವಿಭಾಗವನ್ನು ಬಲಪಡಿಸುವತ್ತ ಮಂಡಳಿ ಚಿತ್ತ ಹರಿಸಿದೆ. ಭಾರತ ‘‌ಎ’ ತಂಡಕ್ಕೆ ಪ್ರವಾಸ ಆಯೋಜಿಸುವ ಬಗ್ಗೆ ಇತ್ತೀಚೆಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈಗ ವೇಗಿಗಳು, ಸ್ಪಿನ್ನರ್‌ ಹಾಗೂ ವಿಕೆಟ್‌ ಕೀಪರ್‌ ಆಯ್ಕೆಗಾಗಿ ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಯಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ತರಬೇತಿ ಶಿಬಿರ ಆಯೋಜಿಸುವುದಾಗಿ ಬಿಸಿಸಿಐ ಹೇಳಿದೆ.

ಅನುಭವಿ ಮಿಥಾಲಿ ರಾಜ್‌ ಹಾಗೂ ಜೂಲನ್ ಗೋಸ್ವಾಮಿ ಅವರನ್ನೇ ಹೆಚ್ಚು ದಿನ ಅವಲಂಬಿಸಲು ಸಾಧ್ಯವಿಲ್ಲ. ಜೂಲನ್ ಗಾಯಗೊಂಡ ಕಾರಣ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಭಾರತ ಉತ್ತಮವಾಗಿ ಆಡಲು ಸಾಧ್ಯವಾಗಿಲ್ಲ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.  ಬಿಸಿಸಿಐ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸದಸ್ಯೆ ಡಯಾನಾ ಎಡುಲ್ಜಿ, ಆಟಗಾರ್ತಿಯರಾದ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್ ಕೌರ್‌, ಆಯ್ಕೆ ಸಮಿತಿ ಮುಖ್ಯಸ್ಥರಾದ ಹೇಮಲತಾ ಕೌಲಾ, ಸಂಚಾಲಕ ರತ್ನಾಕರ್ ಶೆಟ್ಟಿ ಅವರು ಇರುವ ಸಮಿತಿಯು ಮಾರ್ಚ್‌ 28ರಂದು ಸಭೆ ನಡೆಸಲಿದೆ. ಇಲ್ಲಿ ಮಹಿಳೆಯರ ತಂಡದ ಸೋಲಿನ ಬಗ್ಗೆ ಪರಾಮರ್ಶೆ ಹಾಗೂ ಮುಂದಿನ ಯೋಜನೆಗಳ ರೂಪುರೇಷೆ ಕುರಿತು ಚರ್ಚೆ ನಡೆಯಲಿದೆ.

ADVERTISEMENT

‘ಭಾರತ ಮಹಿಳೆಯರ ತಂಡಕ್ಕೆ ಪ್ರತಿಭಾನ್ವಿತ ಸ್ಪಿನ್ನರ್‌ಗಳು ಹಾಗೂ ಮಧ್ಯಮವೇಗದ ಬೌಲರ್‌ಗಳ ಅಗತ್ಯವಿದೆ. ಆಸ್ಟ್ರೇಲಿಯಾ ಸರಣಿ ನಮಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಬ್ಯಾಟಿಂಗ್ ವಿಭಾಗಕ್ಕೂ ಬಲ ತುಂಬುವ ಅಗತ್ಯವಿದೆ’ ಎಂದು ಡಯನಾ ಎಡುಲ್ಜಿ ಹೇಳಿದ್ದಾರೆ.

‘ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್ ಕೌರ್ ಕೂಡ ನಿರಂತರ ಉತ್ತಮ ಫಾರ್ಮ್‌ನಲ್ಲಿ ಇಲ್ಲ. 16 ವರ್ಷದೊಳಗಿನವರ ಕ್ರಿಕೆಟ್ ತಂಡದಲ್ಲಿ ಆಡುವ ಆಟಗಾರ್ತಿಯರನ್ನು ಗುರುತಿಸುವ ಅಗತ್ಯವಿದೆ. ಈಶಾನ್ಯ ಭಾಗದಲ್ಲಿ ಇರುವ ಪ್ರತಿಭಾನ್ವಿತ ಆಟಗಾರ್ತಿಯರಿಗೆ ಅವಕಾಶ ಸಿಗಬೇಕು’ ಎಂದು ಅವರು ಹೇಳಿದ್ದಾರೆ.

‘ವಿಶ್ವಕಪ್ ಆಡಿದ ಬಳಿಕ ಮಹಿಳೆಯರ ಕ್ರಿಕೆಟ್ ತಂಡದ ಜನಪ್ರಿಯತೆ ಹೆಚ್ಚಿದೆ. ಹಲವು ವರ್ಷಗಳ ನಂತರ ಹಣ ಹಾಗೂ ಮಾನ್ಯತೆ ಕೂಡ ಸಿಕ್ಕಿದೆ. ಉತ್ತಮ ಮೂಲಭೂತ ಸೌಲಭ್ಯಗಳು ಇದ್ದಾಗ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಮಹಿಳೆಯರ ಕ್ರಿಕೆಟ್ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.