ADVERTISEMENT

ಮುಂಬೈ ತಂಡಕ್ಕೆ ಪಂಜಾಬ್ ಸವಾಲು

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಮುಂಬೈ (ಪಿಟಿಐ): ಒಂದು ಮಹತ್ವ ಪೂರ್ಣ ಸೋಲಿನ ನಿರಾಸೆ ಮುಂಬೈ ಇಂಡಿಯನ್ಸ್ ತಂಡವನ್ನು  ಕಾಡುತ್ತಿದೆ. ಆ ನಿರಾಸೆಯಿಂದ ಹೊರ ಬಂದು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಎದುರು ಮತ್ತೆ ಗೆಲುವಿನ ಹಾದಿಗೆ ಮರಳುವ ವಿಶ್ವಾಸವನ್ನು ಸಚಿನ್ ಪಡೆ ಹೊಂದಿದೆ.

ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್ ಒಂದು ಸೋಲಿನ ನಿರಾಸೆ ಹೊತ್ತುಕೊಂಡು ಕಣಕ್ಕಿಳಿಬೇಕಿದೆ.

ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ ಶೇನ್ ವಾರ್ನ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ತಂಡದ ಎದುರು ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಮುಂಬೈನ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ನೆಲಕ್ಕಚ್ಚಿದ್ದರು. ಸಚಿನ್, ಡೇವಿ ಜೇಕಬ್ಸ್, ಅಂಬಟಿ ರಾಯಡು, ರೋಹಿತ್ ಶರ್ಮ ಅವರಂಥಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಶಕ್ತಿಯನ್ನು ಹೊಂದ್ದಿದ್ದರೂ ಸಹ ಮುಂಬೈ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 94 ರನ್ ಗಳಿಸಿತ್ತು.

ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಪಡೆದಿದೆ. ಆದರೆ ರನ್ ಸರಾಸರಿ ಆಧಾರದ ಮೇಲೆ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಲೀಗ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ವಿಜಯ ಸಾಧಿಸುವ ಮೂಲಕ ಮತ್ತೆ ಅಗ್ರಸ್ಥಾನಕ್ಕೆ ಮರಳಬೇಕು ಎನ್ನುವುದು ಸಚಿನ್ ಪಡೆಯ ಲೆಕ್ಕಾಚಾರ!

ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಮುಂಬೈ ಆಟಗಾರರು ಮತ್ತೆ ಫಾರ್ಮ್‌ಗೆ ಮರಳಬೇಕಿದೆ. ಕಳೆದ ಪಂದ್ಯದಲ್ಲಿ ಬೌಲಿಂಗ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಮತ್ತೆ ಬೌಲಿಂಗ್‌ನಲ್ಲಿಯೂ ಉತ್ತಮ ಲಯ ಕಂಡುಕೊಳ್ಳಬೇಕಿರುವುದು ಅಗತ್ಯವಿದೆ. ಇದರ ಜೊತೆಗೆ ಫೀಲ್ಡಿಂಗ್‌ನಲ್ಲಾದ ದೋಷಗಳನ್ನು ಸರಿಪಡಿಸಿಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.

ಈ ಟೂರ್ನಿಯಲ್ಲಿ ವೈಯಕ್ತಿಕ ಹೆಚ್ಚು ಮೊತ್ತ ಗಳಿಸಿ ಆರೇಂಜ್ ಕ್ಯಾಪ್ ಪಡೆದಿದ್ದ ಸಚಿನ್ ತಮ್ಮ ಬ್ಯಾಟಿಂಗ್ ವೈಫಲ್ಯದಿಂದ ಅದನ್ನು ಕಳೆದುಕೊಳ್ಳಬೇಕಾಯಿತು. ಈಗ ಅದು ಒಟ್ಟು 294 ರನ್ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಅವರ ಪಾಲಾಗಿದೆ. ಇದುವರೆಗಿನ ಪಂದ್ಯಗಳಲ್ಲಿ ಸಚಿನ್ (276), ಅಂಬಟಿ ರಾಯುಡು (212) ಹಾಗೂ ರೋಹಿತ್ ಶರ್ಮ (203) ರನ್‌ಗಳನ್ನು ಗಳಿಸಿದ್ದಾರೆ.

ಆದರೆ ಹಿಂದಿನ ಎರಡೂ ಪಂದ್ಯಗಳಲ್ಲಿ ಸೋಲಿನ ನಿರಾಸೆ ಅನುಭವಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ತವಕಿಸುತ್ತಿದೆ. ಹಿಂದಿನ ಪಂದ್ಯಗಳಲ್ಲಿ ಪಂಜಾಬ್ ತಂಡ ದೆಹಲಿ ಡೇರ್‌ಡೆವಿಲ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ಎದುರು ಸೋಲು ಕಂಡಿದೆ.

ಪಂಜಾಬ್ ಈ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆಲುವು ಪಡೆದು ಲೀಗ್‌ನ ಪಾಯಿಂಟ್ ಪಟ್ಟಿಯಲ್ಲಿ ಏಂಟನೇ ಸ್ಥಾನದಲ್ಲಿದೆ. ಬ್ಯಾಟಿಂಗ್ ದೌರ್ಬಲ್ಯ ಪಂಜಾಬ್ ತಂಡವನ್ನು ಕಾಡುತ್ತಿದೆ. ನೈಟ್ ರೈಡರ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಒಬ್ಬರನ್ನು ಹೊರತು ಪಡಿಸಿದರೆ ಮತ್ಯಾವ ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಗಳಿಸಿಲ್ಲ.

ಆ್ಯಡಮ್ ಗಿಲ್‌ಕ್ರಿಸ್ಟ್, ಡೇವಿಡ್ ಹಸ್ಸಿ ಅವರಂಥಹ ಪ್ರಭಾವಿ ಬ್ಯಾಟ್ಸ್‌ಮನ್‌ಗಳು ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಭಾರ್ಗವ್ ಭಟ್ ಎರಡು ವಿಕೆಟ್ ಪಡೆದು ಉತ್ತಮ ಆರಂಭವನ್ನು ನೀಡಿದರೂ, ಕಳಪೆ ಫೀಲ್ಡಿಂಗ್ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾಯಿತು. ಈ ತಪ್ಪುಗಳು ಮತ್ತೆ ಇಂದಿನ ಪಂದ್ಯದಲ್ಲಿ ಮರುಕಳಿಸಬಾರದು ಎನ್ನುವುದು ಗಿಲ್ ಕ್ರಿಸ್ಟ್ ಅವರ ಉದ್ದೇಶ. ಅಂದಾಗ ಮಾತ್ರ ಚಾಂಪಿಯನ್ ಪಟ್ಟ ತಂದುಕೊಡುವ ಆಟಗಾರರನ್ನು ಹೊಂದಿರುವ ಮುಂಬೈಗೆ ಸೆಡ್ಡು ಹೊಡೆಯಲು ಸಾಧ್ಯವಾಗುತ್ತದೆ. ತಂಡದ ಖಾತೆಗೆ ಎರಡು ಪಾಯಿಂಟ್‌ಗಳು ಜಮೆಯಾಗುತ್ತವೆ!.

ತಂಡಗಳು
ಮುಂಬೈ ಇಂಡಿಯನ್ಸ್

ಸಚಿನ್ ತೆಂಡೂಲ್ಕರ್ (ನಾಯಕ), ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಆರ್. ಸತೀಶ್, ರೋಹಿತ್ ಶರ್ಮ, ಟಿ. ಸುಮನ್, ಆಂಡ್ರ್ಯೂ ಸೈಮಂಡ್ಸ್, ದಿಲ್ಹಾರ ಫೆರ್ನಾಂಡೊ, ಜೇಮ್ಸ್ ಫ್ರಾಂಕ್ಲಿನ್, ಹರಭಜನ್ ಸಿಂಗ್,  ಡೇವಿ ಜೇಕಬ್ಸ್, ಧವಳ್ ಕುಲಕರ್ಣಿ, ಲಸಿತ್ ಮಾಲಿಂಗ, ಅಲಿ ಮುರ್ತಜಾ, ಮುನಾಫ್ ಪಟೇಲ್ ಹಾಗೂ ಆದಿತ್ಯ ತಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್
ಆ್ಯಡಮ್ ಗಿಲ್‌ಕ್ರಿಸ್ಟ್ (ನಾಯಕ), ಡೇವಿಡ್ ಹಸ್ಸಿ, ದಿನೇಶ್ ಕಾರ್ತಿಕ್, ಅಭಿಷೇಕ್ ನಾಯರ್, ರ್ಯಾನ್ ಮೆಕ್‌ಲಾರೆನ್, ಪ್ರವೀಣ್ ಕುಮಾರ್, ಪಿಯೂಷ್ ಚಾವ್ಲಾ, ಭಾರ್ಗವ್ ಭಟ್, ಬಿಪುಲ್ ಶರ್ಮ, ಲೊವ್ ಅಬ್ಲಿಶ್, ಮನ್‌ದೀಪ್ ಸಿಂಗ್, ನಿತಿನ್ ಸೈನಿ, ಪಾರಸ್ ದೋಗ್ರಾ, ಪಾಲ್ ವಲ್ತಾಟಿ, ಶಲಭ್ ಶ್ರೀವಾಸ್ತವ, ಸನ್ನಿ ಸಿಂಗ್, ವಿಕ್ರಮ್‌ಜೀತ್ ಮಲಿಕ್, ಅಮಿತ್ ಯಾದವ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ರ್ಯಾನ್ ಹಾರಿಸ್ ಹಾಗೂ ದಿಮಿತ್ರಿ ಮಸ್ಕರೇನಸ್.

ಪಂದ್ಯದ ಆರಂಭ: ಸಂಜೆ 4.00 ಗಂಟೆಗೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.