ADVERTISEMENT

ಯಂಗ್‌ಸ್ಟರ್‌, ಕೊಲ್ಲಾಪುರ ತಂಡಗಳಿಗೆ ಜಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 19:30 IST
Last Updated 10 ಜನವರಿ 2014, 19:30 IST

ಹುಬ್ಬಳ್ಳಿ: ಸಂಘಟಿತ ಪ್ರದರ್ಶನ ತೋರಿದ ಕೊಲ್ಲಾಪುರ ಎಂಕೆಎಂ ತಂಡ 8–0 ಗೋಲುಗಳಿಂದ ಸ್ಥಳೀಯ ಕಿಶೋರ್‌ಕುಮಾರ್ ಸ್ಪೋರ್ಟ್ಸ್‌ ತಂಡವನ್ನು ಪರಾಭವಗೊಳಿಸುವ ಮೂಲಕ ಇಲ್ಲಿ ನಡೆದಿರುವ ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದೆ.

ಹುಬ್ಬಳ್ಳಿ ಹಾಕಿ ಅಕಾಡೆಮಿ ಆಶ್ರಯದಲ್ಲಿ ಯಂಗ್‌ಸ್ಟರ್ ಕ್ಲಬ್‌ ಹಾಕಿ ಮೈದಾನದಲ್ಲಿ ನಡೆದ ಪಂದ್ಯದ ಉದ್ದಕ್ಕೂ ಎಂಕೆಎಂ ಹಿಡಿತ ಸಾಧಿಸಿತು. ಆರ್. ಓಂಕಾರ್ 13 ಹಾಗೂ 22ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಸಿದ್ದೇಶ್‌ 35ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಓಂಕಾರ್‌ 37ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆವ ಮೂಲಕ ಅಂತರ ಹೆಚ್ಚಿಸಿದರು. ಆಶೀಶ್‌ ಪಾಟೀಲ್‌ (39ನೇ ನಿ.), ರಾಮಚಂದ್ರ ಪಾಟೀಲ್‌ (42), ಸಾಗರ್‌ ಪಾವಳ್‌ಕರ್‌ (43), ಪ್ರತಾಪ್‌ ಪಾಟೀಲ್‌ (44) ತಲಾ ಒಂದೊಂದು ಗೋಲು ಸಿಡಿಸಿ ಎಂಕೆಎಂ ಅಧಿಕಾರಯುತ ಗೆಲುವು ಸಾಧಿಸಲು ನೆರವಾದರು.

ಯಂಗ್‌ಸ್ಟರ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡ 1–0 ಗೋಲಿನಿಂದ ಗದಗದ ಎಚ್‌ಬಿಎಸ್‌ಸಿ ತಂಡವನ್ನು ಮಣಿಸಿತು. ಯಂಗ್‌ಸ್ಟರ್‌ ಪರ ರಾಘವೇಂದ್ರ ಕೊರ ವರ 30ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಗಳಿಸುವ ಮೂಲಕ ಗೆಲುವಿನ ರೂವಾರಿಯಾದರು.

ಗದುಗಿನ ಎಚ್‌ಎಸ್‌ಬಿಸಿ ತಂಡ 1–0ರಿಂದ ಇಸ್ಲಾಂಪುರದ ಸುಭದ್ರಾ ಡಾಂಗೆ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಅನಂತ ಬಾಗಲಕೋಟಿ 47ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಆತಿಥೇಯ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ 1–5ರಿಂದ ಇಸ್ಲಾಂಪುರದ ವಿ.ಡಿ. ಪಾಟೀಲ ಕ್ಲಬ್‌ಗೆ ಮಣಿಯಿತು. ಹುಬ್ಬಳ್ಳಿ ತಂಡದ ಪರ ಬಿ. ವಿನಾಯಕ್‌ ಆರಂಭದಲ್ಲಿಯೇ (7ನೇ ನಿಮಿಷ) ಗೋಲಿನ ಖಾತೆ ತೆರೆದರಾದರೂ ತಂಡ ಯಶಸ್ಸು ಕಾಣಲಿಲ್ಲ. ಇಸ್ಲಾಂಪುರ ತಂಡದ ಪರ  ಉದಯ್ (12), ಅಲ್ಲುದೀನ್‌ (14), ಡಿ. ಅಮರ್‌ (16), ಎಸ್‌. ಸಚಿನ್‌ (47), ವೈಭವ (48) ಗೋಲು ಗಳಿಸಿದರು. 

ಕೊಲ್ಲಾಪುರ ಚಾವಾ ಹಾಗೂ ಇಸ್ಲಾಂಪುರ ವಿ.ಡಿ. ಪಾಟೀಲ್‌ ಕ್ಲಬ್‌ ನಡುವಿನ ಪಂದ್ಯ 2–2ರಲ್ಲಿ ಡ್ರಾಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.