ADVERTISEMENT

ಯುಡಿಆರ್‌ಎಸ್ ನಿಯಮ: ಗ್ರೇಮ್ ಸ್ಮಿತ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಚೆನ್ನೈ: ಅಂಪೈರ್ ತೀರ್ಪು ಮರು ಪರಿಶೀಲನೆ (ಯುಡಿಆರ್‌ಎಸ್) ನಿಯಮದ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸ್ಮಿತ್ ಔಟ್ ಆಗಿದ್ದನ್ನು ನಿರ್ಧರಿಸಲು ಮೂರನೇ ಅಂಪೈರ್ ಅಶೋಕ ಡಿ ಸಿಲ್ವಾ ಐದು ನಿಮಿಷ ತೆಗೆದುಕೊಂಡರು.

ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಹಾಕಿದ 14.1ನೇ ಓವರ್‌ನಲ್ಲಿ ಸ್ಮಿತ್ ಬ್ಯಾಟ್‌ಗೆ ಸವರಿದ ಚೆಂಡು ವಿಕೆಟ್ ಕೀಪರ್ ಮ್ಯಾಟ್ ಪ್ರಿಯೊರ್ ಕೈ ಸೇರಿತು. ಆಗ ಇಂಗ್ಲೆಂಡ್ ಆಟಗಾರರು ಅಂಪೈರ್‌ಗೆ ಮನವಿ ಮಾಡಿದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ಈ ಕಾರಣ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಯುಡಿಆರ್‌ಎಸ್ ಮೊರೆ ಹೋದರು. ಇದರಲ್ಲಿ ಅವರು ಯಶಸ್ವಿ ಕೂಡ ಆದರು.

ಈ ಬಗ್ಗೆ ಸ್ಮಿತ್ ಹೆಚ್ಚು ಮಾತನಾಡಲು ನಿರಾಕರಿಸಿದರು. ‘ಇಂತಹ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಬಾರದು’ ಎಂದರು. ಒಮ್ಮೆಲೆ ಕುಸಿತ ಕಂಡ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆರು ರನ್‌ಗಳ ಸೋಲು ಕಂಡಿತು. ಈ ನಿರ್ಧಾರ ಸರಿಯಾಗಿದೆ ಎಂದು ಇಂಗ್ಲೆಂಡ್ ನಾಯಕ ಸ್ಟ್ರಾಸ್ ಹೇಳಿದರು. ‘ಅವರ ಗ್ಲೌಸ್‌ಗೆ  ಚೆಂಡು ತಾಗಿರುವುದು ದಿಟ. ಆ ಸಂದರ್ಭದಲ್ಲಿ ನಾನು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದೆ. ಸಣ್ಣ ಶಬ್ದ ಕೂಡ ಕೇಳಿಸಿತು’ ಎಂದರು.

ಇದೇ ಪಂದ್ಯದ 33.2 ಓವರ್‌ನಲ್ಲಿ ಜೀನ್ ಪಾಲ್ ಡುಮಿನಿ ಅವರ ಸಂಬಂಧ ತೀರ್ಪು ನೀಡಲು ಕೂಡ ಅಶೋಕ ಡಿ ಸಿಲ್ವಾ ತುಂಬಾ ಹೊತ್ತು ತೆಗೆದುಕೊಂಡರು. ಬಳಿಕ ಫೀಲ್ಡ್ ಅಂಪೈರ್ ಸೈಮನ್ ಟಫೆಲ್ ನೀಡಿದ್ದ ತೀರ್ಪಿಗೆ ವಿರುದ್ಧ ತೀರ್ಪು ನೀಡಿದರು. ಟಫೆಲ್ ಔಟ್ ನೀಡಿದ್ದರು. ಆಗ ಡುಮಿನಿ ಯುಡಿಆರ್‌ಎಸ್ ನಿಯಮದ ಮೊರೆ ಹೋಗಿ ಅದರಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೂಡ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಯುಡಿಆರ್‌ಎಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಂಡದ ಕುಸಿತದ ಬಗ್ಗೆ ಮಾತನಾಡಿದ ಸ್ಮಿತ್, ಒತ್ತಡದ ಸನ್ನಿವೇಶಗಳಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದವರು ಎಡವಿ ಬೀಳುತ್ತಾರೆ ಎಂಬ ಮಾತನ್ನು ತಳ್ಳಿ ಹಾಕಿದರು.‘ಸೋಲು ಕಂಡಿರುವುದಕ್ಕೆ ನಮಗೆ ಖಂಡಿತ ನಿರಾಶೆಯಾಗಿದೆ. ಆದರೆ ಒತ್ತಡ ಸಹಿಸಿಕೊಳ್ಳಲಾಗದೇ ಸೋಲು ಕಂಡಿದ್ದೇವೆ ಎನ್ನುವುದು ತಪ್ಪು. ಈ ಹಿಂದಿನ ಅನೇಕ ಪಂದ್ಯಗಳಲ್ಲಿ ನಾವು ಕಷ್ಟದ ಸಂದರ್ಭಗಳಲ್ಲಿ ಯಶಸ್ವಿಯಾದ ಉದಾಹರಣೆ ಇದೆ. ಇದೊಂದು ಪಂದ್ಯವನ್ನು ಮುಂದಿಟ್ಟುಕೊಂಡು ವಿಶ್ಲೇಷಿಸಬಾರದು’ ಎಂದು ಅವರು ಹೇಳಿದರು.‘ಈ ಪಂದ್ಯದಲ್ಲಿ ನಮ್ಮ ಬೌಲರ್‌ಗಳು 12 ವೈಡ್ ನೀಡಿದ್ದ ದುಬಾರಿಯಾಯಿತು. ಇಂತಹ ಸಣ್ಣ ವಿಷಯಗಳು ಪಂದ್ಯದ ಗತಿಯನ್ನು ಬದಲಾಯಿಸುತ್ತವೆ. ಅದರಲ್ಲೂ ಇಂತಹ ಕಠಿಣ ಪಂದ್ಯಗಳಲ್ಲಿ ಈ ರೀತಿ ಆಗಬಾರದು’ ಎಂದು ಸ್ಮಿತ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.