ನವದೆಹಲಿ (ಪಿಟಿಐ): ಭಾರತದ ರಶೀದ್ ಖಾನ್ ಇಲ್ಲಿ ಕೊನೆಗೊಂಡ ಎಸ್ಎಐಎಲ್- ಎಸ್‌ಬಿಐ ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ದೆಹಲಿ ಗಾಲ್ಫ್ ಕ್ಲಬ್ ಕೋರ್ಸ್‌ನಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ರಶೀದ್ 71 ಅವಕಾಶಗಳನ್ನು ಬಳಸಿಕೊಂಡರು.
ಅವರಿಗೆ ಪ್ರಬಲ ಪೈಪೋಟಿ ನೀಡಿದ ಬಾಂಗ್ಲಾದೇಶದ ಸಿದ್ದೀಕುರ್ ರಹಮಾನ್ 69 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ನಾಲ್ಕು ಸುತ್ತುಗಳ ಬಳಿಕ ಇಬ್ಬರು ಸ್ಪರ್ಧಿಗಳು ತಲಾ 270 ಸ್ಕೋರ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು. ಇದರಿಂದ ವಿಜೇತರನ್ನು ನಿರ್ಣಯಿಸಲು ‘ಪ್ಲೇ ಆಫ್’ ಮೊರೆಹೋಗಲಾಯಿತು.
ದೆಹಲಿಯ ರಶೀದ್ ‘ಪ್ಲೇ ಆಫ್’ ನಲ್ಲಿ ಗೆಲುವು ಪಡೆದರಲ್ಲದೆ, ₨ 33 ಲಕ್ಷ ನಗದು ಬಹುಮಾನ ತಮ್ಮದಾ ಗಿಸಿಕೊಂಡರು. 23ರ ಹರೆಯದ ಸ್ಪರ್ಧಿಗೆ ಏಷ್ಯನ್ ಟೂರ್‌ನಲ್ಲಿ ದೊರೆತ ಚೊಚ್ಚಲ ಪ್ರಶಸ್ತಿ ಇದು.
ಹೋದ ವರ್ಷ ನಡೆದ ಟೂರ್ನಿ ಯಲ್ಲಿ ರಶೀದ್ ‘ಪ್ಲೇ ಆಫ್’ನಲ್ಲಿ ಅನಿರ್ಬನ್ ಲಾಹಿರಿ ಎದುರು ಸೋಲು ಅನುಭವಿಸಿ ‘ರನ್ನರ್ ಅಪ್’ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.