ADVERTISEMENT

ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಡೆಲ್ಲಿ ಡೇರ್‌ಡೆವಿಲ್ಸ್‌ ನಡುವಣ ಪಂದ್ಯ ಇಂದು

ಗಿರೀಶದೊಡ್ಡಮನಿ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಅನಿಕೇತ್‌ ಚೌಧರಿ, ಟಿಮ್‌ ಸೌಥಿ ಹಾಗೂ ಕಾಲಿನ್‌ ಡಿ ಗ್ರಾಂಡ್‌ಹೋಮ್‌ ಅಭ್ಯಾಸ ನಡೆಸಿದರು - ಪ್ರಜಾವಾಣಿ ಚಿತ್ರಗಳು/ಕೃಷ್ಣಕುಮಾರ್‌ ಪಿ.ಎಸ್‌.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಅನಿಕೇತ್‌ ಚೌಧರಿ, ಟಿಮ್‌ ಸೌಥಿ ಹಾಗೂ ಕಾಲಿನ್‌ ಡಿ ಗ್ರಾಂಡ್‌ಹೋಮ್‌ ಅಭ್ಯಾಸ ನಡೆಸಿದರು - ಪ್ರಜಾವಾಣಿ ಚಿತ್ರಗಳು/ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು: ದೆಹಲಿ ಅಂಗಳಗಳಲ್ಲಿ ಆಡಿ ಬೆಳೆದ ಇಬ್ಬರು ಕ್ರಿಕೆಟಿಗರ ನಡುವಣ ಹಣಾಹಣಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಗೌತಮ್ ಗಂಭೀರ್ ಮುಂದಾಳತ್ವದ ಡೆಲ್ಲಿ ಡೇರ್‌ಡೆವಿಲ್ಸ್‌ (ಡಿಡಿ) ತಂಡಗಳು ಶನಿವಾರ ನಡೆಯಲಿರುವಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ವಿರಾಟ್ ಮತ್ತು ಗೌತಮ್ ಇಬ್ಬರೂ ದೆಹಲಿಯವರೇ. ಆದರೆ ಕಳೆದ ಹತ್ತು ವರ್ಷಗಳಿಂದ ವಿರಾಟ್ ಆರ್‌ಸಿಬಿ ನಾಯಕರಾಗಿದ್ದಾರೆ. ಬೆಂಗಳೂರಿನ ಕ್ರಿಕೆಟ್‌ಪ್ರಿಯರ ಕಣ್ಮಣಿಯಾಗಿದ್ದಾರೆ. ಗೌತಮ್ ಕೂಡ ಇದೇ ಮೊದಲ ಬಾರಿಗೆ ತಮ್ಮ ತವರಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್) ತಂಡದಲ್ಲಿದ್ದರು. ಅವರ ನಾಯಕತ್ವದಲ್ಲಿ ಕೆಕೆಆರ್ ತಂಡವು 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿತ್ತು. ಇದೀಗ ಯುವ ಮತ್ತು ಅನುಭವಿ ಆಟಗಾರರು ಇರುವ ಡೆಲ್ಲಿ ತಂಡವನ್ನೂ ಜಯದತ್ತ ಮುನ್ನಡೆಸುವ ಗುರಿಯೊಂದಿಗೆ ಡೆಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ  ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಒಲಿದಿದೆ. ಗೌತಮ್, ರಿಷಭ್ ಪಂತ್, ಜೇಸನ್ ರಾಯ್, ಶ್ರೇಯಸ್ ಅಯ್ಯರ್, ಗ್ಲೆನ್‌ ಮ್ಯಾಕ್ಸ್‌ವೆಲ್ ತಂಡದ ಬ್ಯಾಟಿಂಗ್‌ನ ಪ್ರಮುಖ ಶಕ್ತಿಯಾಗಿದ್ದಾರೆ.

ವಿರಾಟ್ ಬಳಗವೂ ಕೂಡ ಇದುವರೆಗೆ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಮೂರರಲ್ಲಿ ಸೋತಿದೆ. ಮೊದಲೆರಡು ಪಂದ್ಯಗಳಲ್ಲಿ ಹೆಚ್ಚು ರನ್‌ ಗಳಿಸಲು ವಿರಾಟ್ ಪರದಾಡಿದ್ದರು. ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ಅವರು ಅರ್ಧಶತಕಗಳನ್ನು ದಾಖಲಿಸಿದ್ದರು. ಅಲ್ಲದೇ ಒಟ್ಟು 201 ರನ್‌ ಗಳಿಸಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.  ಆದರೂ ಅವರು ಆರೆಂಜ್ ಕ್ಯಾಪ್ ಧರಿಸಲು ಒಪ್ಪಿಲ್ಲ.

ADVERTISEMENT

ಬ್ಯಾಟಿಂಗ್ ವಿಭಾಗವು ತಕ್ಕಮಟ್ಟಿಗೆ ಚೆನ್ನಾಗಿಯೇ ಆಡುತ್ತಿದೆ. ಆದರೆ ಗೆಲುವಿನಂಚಿನಲ್ಲಿ ಎಡವುತ್ತಿದೆ. ಬೌಲರ್‌ಗಳು ಕೂಡ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡಗಳು 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಆರ್‌ಸಿಬಿಗೆ ನೀಡಿದ್ದು ಇದಕ್ಕೆ ಸಾಕ್ಷಿ.

ಬದಲಾವಣೆಯತ್ತ ಚಿತ್ತ: ಕಳೆದ ನಾಲ್ಕು ಪಂದ್ಯಗಳಲ್ಲಿಯೂ ವೈಫಲ್ಯ ಅನುಭವಿಸಿರುವ ಸರ್ಫರಾಜ್ ಖಾನ್ ಅವರಿಗೆ ಈ ಪಂದ್ಯದಲ್ಲಿ ಕೈಬಿಡುವ ಸಾಧ್ಯತೆ ಇದೆ. ಅವರ ಬದಲಿಗೆ ಮನನ್ ವೊಹ್ರಾ ಅವರಿಗೆ ಅವಕಾಶ ಲಭಿಸಬಹುದು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಬ್ಯಾಟ್ಸ್‌ಮನ್ ಬ್ರೆಂಡನ್
ಮೆಕ್ಲಮ್  ನಂತರ ಮೂರು ಪಂದ್ಯಗಳಲ್ಲಿಯೂ ಹೆಚ್ಚು ರನ್‌ ಗಳಿಸಿರಲಿಲ್ಲ. ಅವರ ಬದಲಿಗೆ ಅನುಭವಿ ವಿಕೆಟ್‌ ಕೀಪರ್–ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಅವರನ್ನೂ ಕಣಕ್ಕಿಳಿಸಬಹುದು. ಬೌಲಿಂಗ್‌ ವಿಭಾಗದಲ್ಲಿ ಕುಲವಂತ ಖೆಜ್ರೋಲಿಯಾ ಅವರಿಗೆ ವಿಶ್ರಾಂತಿ ನೀಡಿ, ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರು ಆವಕಾಶ ಗಿಟ್ಟಿಸಬಹುದು.

ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ಎಬಿ ಡಿವಿಲಿಯರ್ಸ್‌ ಅವರು ಲಯ ಕಂಡುಕೊಂಡರೆ ಡೆಲ್ಲಿ ತಂಡದ ವೇಗಿಗಳಾದ ಕ್ರಿಸ್ ಮೊರಿಸ್, ಟ್ರೆಂಟ್ ಬೌಲ್ಟ್‌ ಅವರು ಪರದಾಡುವುದು ಖಚಿತ.

ತಂಡಗಳು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಕ್ವಿಂಟನ್ ಡಿ ಕಾಕ್, ಬ್ರೆಂಡನ್ ಮೆಕ್ಲಮ್, ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಉಮೇಶ್ ಯಾದವ್, ಕುಲವಂತ ಖೆಜ್ರೋಲಿಯಾ, ಯಜುವೇಂದ್ರ ಚಾಹಲ್, ಮೋಯಿನ್ ಅಲಿ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮನದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪವನ್ ನೇಗಿ, ಪಾರ್ಥಿವ್ ಪಟೇಲ್, ಟಿಮ್ ಸೌಥಿ, ಮನನ್ ವೊಹ್ರಾ, ವಾಷಿಂಗ್ಟನ್ ಸುಂದರ್, ಕ್ರಿಸ್ ವೋಕ್ಸ್, ಅನಿರುದ್ಧ ಜೋಶಿ, ಪವನ್ ದೇಶಪಾಂಡೆ, ಡೇನಿಯಲ್ ವೆಟೋರಿ (ಮುಖ್ಯ ಕೋಚ್).

ಡೆಲ್ಲಿ ಡೇರ್‌ಡೆವಿಲ್ಸ್‌: ಗೌತಮ್ ಗಂಭೀರ್ (ನಾಯಕ), ಜೇಸನ್ ರಾಯ್, ಗ್ಲೆನ್ ಮ್ಯಾಕ್ಸ್‌ವೆಲ್, ರಿಷಭ್ ಪಂತ್, ಮನ್ಜೋತ್ ಕಾಲ್ರಾ, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ, ಅಮಿತ್ ಮಿಶ್ರಾ, ಆವೇಶ್ ಖಾನ್, ಹರ್ಷಲ್ ಪಟೇಲ್, ಲಿಯಾಮ್ ಪ್ಲಂಕೆಟ್, ಮೊಹಮ್ಮದ್ ಶಮಿ, ಸಂದೀಪ್ ಲಾಮಿಚಾನೆ, ಸಯಾನ್ ಘೋಷ್, ಶಹಬಾಜ್ ನದೀಂ, ಟ್ರೆಂಟ್ ಬೌಲ್ಟ್, ಕ್ರಿಸ್ ಮೋರಿಸ್, ಕಾಲಿನ್ ಮನ್ರೊ, ಡೇನಿಯಲ್ ಕ್ರಿಶ್ಚಿಯನ್, ಗುರುಕೀರತ್ ಸಿಂಗ್ ಮಾನ್, ಜಯಂತ್ ಯಾದವ್, ರಾಹುಲ್ ತೆವಾತಿಯಾ, ವಿಜಯಶಂಕರ್, ನಮನ್ ಓಜಾ, ರಿಕಿ ಪಾಂಟಿಂಗ್ (ಮುಖ್ಯ ಕೋಚ್).

ಪಂದ್ಯ ಆರಂಭ: ರಾತ್ರಿ 8, ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ಸಂಜೆ ಮಳೆ: ಅಭ್ಯಾಸಕ್ಕಿಳಿಯದ ಆರ್‌ಸಿಬಿ

ಶುಕ್ರವಾರ ಸಂಜೆ ನಗರದಲ್ಲಿ ರಭಸದ ಮಳೆ ಸುರಿಯಿತು. ಇದರಿಂದಾಗಿ ಆರ್‌ಸಿಬಿ ತಂಡವು ಅಭ್ಯಾಸ ಮಾಡಲಿಲ್ಲ. ಸಂಜೆ 4.30ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಬಳಗವು ಆಭ್ಯಾಸ ನಡೆಸಬೇಕಿತ್ತು. ಆದರೆ ಸುಮಾರು 5 ಗಂಟೆಯಿಂದ 6.45ರವರೆಗೆ ಮಳೆ ಸುರಿದ ಕಾರಣ ಆರ್‌ಸಿಬಿ ಅಭ್ಯಾಸ ಮಾಡಲಿಲ್ಲ. ಜಿಮ್ನಾಷಿಯಂನಲ್ಲಿ ಕಸರತ್ತು ಮಾಡಿತು.

ಮಳೆ ನಿಂತ ಮೇಲೆ ಕ್ರೀಡಾಂಗಣಕ್ಕೆ ಬಂದ ಡೆಲ್ಲಿ ಡೇರ್‌ಡೆವಿಲ್ಸ್‌  ಆಟಗಾರರು ಸುಮಾರು ಒಂದೂವರೆ ತಾಸು ಅಭ್ಯಾಸ ನಡೆಸಿದರು. ನಾಯಕ ಗೌತಮ್ ಗಂಭೀರ್, ರಿಷಭ್ ಪಂತ್ ಮತ್ತಿತರರು ಹಾಜರಿದ್ದರು.

ನೆಟ್ಸ್‌ನಲ್ಲಿ ಶಮಿ ಬೌಲಿಂಗ್: ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮಧ್ಯಮವೇಗಿ ಮೊಹಮ್ಮದ್ ಶಮಿ ಅವರು ಶುಕ್ರವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು ತಮ್ಮ ಪತ್ನಿಗೆ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಅವರು ಬುಧವಾರ ಕೋಲ್ಕತ್ತದಲ್ಲಿ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು. ಗುರುವಾರ ರಾತ್ರಿ ಬೆಂಗಳೂರಿಗೆ ಬಂದ ಅವರು ತಂಡವನ್ನು ಸೇರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಿಂಗ್ಸ್‌, ಕೋಲ್ಕತ್ತಗೆ ಹ್ಯಾಟ್ರಿಕ್ ಗುರಿ

ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಕಿಂಗ್ಸ್ ಇಲೆವನ್‌ ಪಂಜಾಬ್ ತಂಡಗಳು ಸೆಣಸಲಿವೆ. ಕೋಲ್ಕತ್ತ ತಂಡ ಐದು ಪಂದ್ಯಗಳಿಂದ ಆರು ಪಾಯಿಂಟ್ ಗಳಿಸಿದ್ದರೆ ಕಿಂಗ್ಸ್ ಇಲೆವನ್‌ ತಂಡ ನಾಲ್ಕು ಪಂದ್ಯಗಳಿಂದ ಆರು ಪಾಯಿಂಟ್ ಗಳಿಸಿದೆ. ಎರಡೂ ತಂಡಗಳು ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆಯ ಗುರಿ ಹೊಂದಿವೆ.

ಪಂದ್ಯ ಆರಂಭ: ಸಂಜೆ 4.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.