ADVERTISEMENT

ಲಂಕಾಕ್ಕೆ ಕೆನಡಾ ಸುಲಭದ ತುತ್ತಲ್ಲ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಹಂಬಂಟೋಟಾ (ಪಿಟಿಐ):ನಾಲ್ಕು ವರ್ಷಗಳ ಹಿಂದೆ ಶ್ರೀಲಂಕಾ ತಂಡದವರು ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದರು.ಆದ್ದರಿಂದ ಬಲವುಳ್ಳ ತಂಡವೆಂದು ಸಹಜವಾಗಿಯೇ ನಿರ್ಧರಿಸಬಹುದು. ಈ ಲೆಕ್ಕಾಚಾರ ಏನೇ ಇರಲಿ; ಭಾರತೀಯ ಮೂಲದ ಆಟಗಾರರನ್ನು ಹೊಂದಿರುವ ಕೆನಡಾ ಎದುರು ಭಾನುವಾರ ನಡೆಯುವ ಪಂದ್ಯವು ಸಿಂಹಳೀಯರಿಗೆ ಸುಲಭದ ತುತ್ತಾಗುವ ನಿರೀಕ್ಷೆಯಂತೂ ಇಲ್ಲ.

ಸ್ವಂತ ನೆಲದಲ್ಲಿ ಆಡುವ ಪಂದ್ಯವಾದರೂ ಎದುರಾಳಿಯನ್ನು ಲಂಕಾದವರು ಗಂಭೀರವಾಗಿ ಪರಿಗಣಿಸಲೇಬೇಕು.ಏಕೆಂದರೆ ಕೆನಡಾದವರು ಕ್ರಿಕೆಟ್ ಶಕ್ತಿಯಾಗಿ ಬಲವನ್ನು ಹೆಚ್ಚಿಸಿಕೊಂಡಿದ್ದಾರೆ.ಈ ತಂಡದಲ್ಲಿ ಭಾರತೀಯ ಮೂಲದ ಆಟಗಾರರ ಸಂಖ್ಯೆಯೂ ಅಧಿಕವಾಗಿದೆ.ಕೆನಡಾ ತಂಡದ ಪಟ್ಟಿಯನ್ನು ನೋಡಿದರೆ ಈ ಅಂಶವು ಸ್ಪಷ್ಟವಾಗುತ್ತದೆ.

ವಿಶ್ವಕಪ್‌ಗೆ ಎರಡು ವಾರ ಮುನ್ನವೇ ಕೆನಡಾ ತಂಡದ ನಾಯಕ ಆಶಿಶ್ ಬಾಗೈ ಅವರು ‘ನಮ್ಮನ್ನು ದುರ್ಬಲರೆಂದು ಪರಿಗಣಿಸಬೇಡಿ’ ಎಂದು ಬಲಾಢ್ಯ ತಂಡಗಳು ಎನಿಸಿಕೊಂಡ ಟೆಸ್ಟ್ ಮಾನ್ಯತೆ ಹೊಂದಿರುವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಲಂಕಾ ಪಡೆಯ ನಾಯಕ ಕುಮಾರ ಸಂಗಕ್ಕಾರ ಅವರೂ ಹೇಳಿದ್ದಾರೆ.

ಗುಂಪು ಹಂತದಲ್ಲಿ ಆಡುವಾಗ ಪ್ರತಿಯೊಂದು ಪಂದ್ಯದಲ್ಲಿ ವಿಜಯ ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎನ್ನುವುದನ್ನು ಸಂಗಾ ಸ್ಪಷ್ಟವಾಗಿ ಅರಿತಿದ್ದಾರೆ.ಆದ್ದರಿಂದಲೇ ವಿಶ್ವಕಪ್‌ನ ‘ಎ’ ಗುಂಪಿನ ಮೊದಲ ಹಣಾಹಣಿಯಲ್ಲಿ ಆಘಾತಕ್ಕೆ ಅವಕಾಶ ಸಿಗದಂತೆ ಎಚ್ಚರಿಕೆಯಿಂದ ಹೋರಾಡಲು ಸಜ್ಜಾ ಗಿದ್ದಾರೆ.ಸ್ವಂತ ನೆಲದಲ್ಲಿ ಗೆಲುವಿ ನೊಂದಿಗೆ ಶುಭಾರಂಭ ಮಾಡುವ ಉದ್ದೇಶವನ್ನು ‘ಸಂಗಾ’ ಹೊಂದಿದ್ದಾರೆ.ಆದರೆ ಎದುರಾಳಿ ಪಡೆಯ ನಾಯಕ ಆಶಿಶ್ ಅವರು ಸಿಂಹಳೀಯರ ಎದುರು ಅಚ್ಚರಿ ಸಾಧ್ಯವಾಗುವಂತೆ ಮಾಡಲು ಯೋಜನೆಯ ಬಲೆಯನ್ನು ಹೆಣೆದುಕೊಂಡಿದ್ದಾರೆ.ಅದು ಅಂಗಳದಲ್ಲಿ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆಂದು ಕಾಯ್ದು ನೋಡಬೇಕು.

ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆನಡಾ ಸುಲಭವಾಗಿ ಶರಣಾಗಿರಲಿಲ್ಲ ಎನ್ನುವುದನ್ನು ಸಂಗಕ್ಕಾರ ಮರೆತಿಲ್ಲ. ಆದ್ದರಿಂದಲೇ ಅವರ ಕೆನಡಾವನ್ನು ‘ಗುಣಮಟ್ಟದ ತಂಡ’ ಎಂದು ಬಣ್ಣಿಸಿದ್ದಾರೆ.ಅಚ್ಚರಿಯ ಫಲಿತಾಂಶ ಪಡೆಯುವಂಥ ಸಾಮರ್ಥ್ಯವೂ ಕೆನಡಾದವರಿಗೆ ಇದೆ ಎನ್ನುವುದು ಅವರ ಅಭಿಪ್ರಾಯ.

ಆತಿಥೇಯ ಲಂಕಾ ತನ್ನ ಪೂರ್ಣ ಬಲದೊಂದಿಗೆ ಆಡಲು ಸಜ್ಜಾಗಿದೆ.ಆದರೆ ಚಾಮರ ಸಿಲ್ವಾ ಅವರು ಮಾತ್ರ ಈ ಪಂದ್ಯಕ್ಕೆ ಲಭ್ಯವಾಗುತ್ತಿಲ್ಲ. ಅವರ ಹಿರಿಯ ಸಹೋದರಿ ಮೃತಪಟ್ಟಿರುವ ಕಾರಣ ಒಂದು ಪಂದ್ಯದ ಮಟ್ಟಿಗೆ ಅವರು ಬಿಡುವ ಪಡೆದುಕೊಂಡು ತಮ್ಮ ಊರಿಗೆ ಹೋಗಿದ್ದಾರೆ. 1996ರಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ಲಂಕಾ ತಂಡವು ಮೊದಲ ಹಣಾಹಣಿಯಲ್ಲಿ ಯಶಸ್ಸಿನ ಗುರಿ ಹೊಂದಿದೆ.

ಅದನ್ನು ಸಾಧಿಸಲು ಚಾಮರ ಸಿಲ್ವಾ ಅನುಪಸ್ಥಿತಿ ದೊಡ್ಡ ಸಮಸ್ಯೆಯಾಗಿ ಕಾಡದು.ಲಂಕಾಕ್ಕೆ ಈಗ ಮ್ಯಾನೇಜರ್ ಕೂಡ ಲಭ್ಯವಿಲ್ಲ.ಏಕೆಂದರೆ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಅರುಣಾ ತೆನ್ನೆಕೂನ್ ಅವರು ಪಿತೃವಿಯೋಗದ ಶೋಕದಲ್ಲಿದ್ದಾರೆ.

ಕೆನಡಾ ವಿರುದ್ಧದ ಕಾರ್ಯಾಚರಣೆಯ ನಂತರವೂ ದೊಡ್ಡ ಸವಾಲಿನ ಪಂದ್ಯಗಳು ಲಂಕಾ ಮುಂದಿವೆ.ಏಕೆಂದರೆ ಇದೇ ಗುಂಪಿನಲ್ಲಿ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ,ಪಾಕಿಸ್ತಾನ, ನ್ಯೂಜಿಲೆಂಡ್, ಜಿಂಬಾಬ್ವೆ ಹಾಗೂ ಕೀನ್ಯಾ ತಂಡಗಳು ಇವೆ.ಕೆನಡಾ ಕೂಡ ಸವಾಲಿನ ಹಾದಿಯಲ್ಲಿ ಸಾಗಬೇಕು.

ಈ ತಂಡದ ಜಾನ್ ಡೇವಿಸನ್ ಮಟ್ಟಿಗೆ ಇದು ಕೊನೆಯ ವಿಶ್ವಕಪ್.40 ವರ್ಷ ವಯಸ್ಸಿನ ಡೇವಿಸನ್ ಅವರು ವಿಶ್ವಕಪ್‌ನಲ್ಲಿ ತಮ್ಮ ತಂಡವು ಕೆಲವು ಪಂದ್ಯಗಳಲ್ಲಿ ಗೆಲ್ಲುವಂತೆ ಮಾಡಿ, ಆನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಉದ್ದೇಶ ಹೊಂದಿದ್ದಾರೆ.

ಶ್ರೀಲಂಕಾ
ಕುಮಾರ ಸಂಗಕ್ಕಾರ (ನಾಯಕ), ಮಾಹೇಲ ಜಯವರ್ಧನೆ, ತಿಲಕರತ್ನೆ ದಿಲ್ಶಾನ್, ಉಪುಲ್ ತರಂಗ, ತಿಲಾನ್ ಸಮರವೀರ, ಚಾಮರ ಸಿಲ್ವಾ, ಚಾಮರ ಕಪುಗೆಡೆರಾ, ಆ್ಯಂಗೆಲೊ ಮ್ಯಾಥ್ಯೂಸ್, ತಿಸಾರಾ ಪೆರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್ ಹಾಗೂ ರಂಗನ ಹೆರಾತ್.

ಕೆನಡಾ
ಆಶಿಶ್ ಬಾಗೈ (ನಾಯಕ), ರಿಜ್ವಾನ್ ಚೀಮಾ, ಹರ್ವಿರ್ ಬೈಡ್ವಾನ್, ನಿತೀಶ್ ಕುಮಾರ್, ಹೀರಲ್
ಪಟೇಲ್, ಟೈಸನ್ ಗೊರ್ಡಾನ್, ಹೇನ್ರಿ ಒಸಿಂಡೆ, ಜಾನ್ ಡೇವಿಸನ್, ರವಿಂದು ಗುಣಶೇಕರ, ಪಾರ್ಥ್ ದೇಸಾಯಿ, ಖುರ್ರಮ್ ಚೋಹಾನ್, ಜಿಮ್ಮಿ ಹಂಸ್ರಾ, ಜುಬಿನ್ ಸುಕಾರಿಯಾ ಮತ್ತು ಬಾಲಾಜಿ ರಾವ್.

ಅಂಪೈರ್‌ಗಳು: ಇಯಾನ್ ಗೌಲ್ಡ್ (ಇಂಗ್ಲೆಂಡ್) ಮತ್ತು ಶಾವೀರ್ ತಾರಾಪುರ (ಭಾರತ);
ಮೂರನೇ ಅಂಪೈರ್: ಟೋನಿ ಹಿಲ್ (ನ್ಯೂಜಿಲೆಂಡ್).
ಮ್ಯಾಚ್ ರೆಫರಿ: ಕ್ರಿಸ್ ಬ್ರಾಡ್ (ಇಂಗ್ಲೆಂಡ್).
ಆಟದ ಅವಧಿ (ಭಾರತೀಯ ಕಾಲಮಾನ): ಮಧ್ಯಾಹ್ನ 2.30ರಿಂದ ಸಂಜೆ 6.00 ಹಾಗೂ 6.40ರಿಂದ
ಪಂದ್ಯ ಮುಗಿಯುವವರೆಗೆ.
ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.