ADVERTISEMENT

ವಿಕಾಸ್ ಗೌಡಗೆ ಸಿಎಂ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಲಂಡನ್ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಡಿಸ್ಕಸ್ ಥ್ರೋ ಪಟು ಕರ್ನಾಟಕದ ವಿಕಾಸ್ ಗೌಡ ಅವರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದ್ದಾರೆ.

ಚೀನಾದಲ್ಲಿ ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ವಿಕಾಸ್‌ಗೆ ಗುರುವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಸನ್ಮಾನಿಸಿದರು. ಆ ಸಾಧನೆಗಾಗಿ ಐದು ಲಕ್ಷ ರೂ. ಬಹುಮಾನ ನೀಡಿದರು. ಅಷ್ಟು ಮಾತ್ರವಲ್ಲದೇ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಜೊತೆಗೆ ಒಂದು ಲಕ್ಷ ರೂ. ಹಾಗೂ ಚಿನ್ನದ ಪದಕ ನೀಡಲಾಯಿತು.

ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ನವೆಂಬರ್ ಒಂದರಂದು ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕಾಸ್ ಪಾಲ್ಗೊಂಡಿರಲಿಲ್ಲ.

`2012ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ರಾಜ್ಯದ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ನೀಡಲು ನೀಡಲು ನಾವು ಸಿದ್ಧರಿದ್ದೇವೆ. ಅದಕ್ಕಾಗಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಐದು ಕೋಟಿ ರೂ. ಮೀಸಲಿಟ್ಟಿದೆ~ ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ ತಿಳಿಸಿದರು.
ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಸಾಧನೆಗಾಗಿ ವಿಕಾಸ್‌ಗೆ ಇದೇ ಸಂದರ್ಭದಲ್ಲಿ ಏಳು ಲಕ್ಷ ರೂ. ಬಹುಮಾನ ನೀಡಲಾಯಿತು.

`ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಸಹಾಯ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಅದಕ್ಕಾಗಿ ಮೊದಲ ಹಂತದಲ್ಲಿ 50 ಲಕ್ಷ ರೂಪಾಯಿ ಮಂಜೂರು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮತ್ತಷ್ಟು ಹಣ ನೀಡುವುದಾಗಿ ಅವರು ಹೇಳಿದ್ದಾರೆ~ ಎಂದು ವಿಕಾಸ್ ಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ನನ್ನ ಸಾಧನೆಯನ್ನು ಸರ್ಕಾರ ಗುರುತಿಸಿದೆ. ನನ್ನ ಸಾಧನೆಗೆ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿಯ ನೆರವು ಹಾಗೂ ಮೆಚ್ಚುಗೆ ಖಂಡಿತ ಮುಂದಿನ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸ್ಫೂರ್ತಿ ಆಗಲಿದೆ~ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿಕಾಸ್ ಅವರ ತಂದೆ ಶಿವೇಗೌಡ ಉಪಸ್ಥಿತರಿದ್ದರು.

ವಿಕಾಸ್ ದಕ್ಷಿಣ ಕೊರಿಯಾದ ಡೇಗುವಿನಲ್ಲಿ ಇತ್ತೀಚೆಗೆ ನಡೆದ 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದ್ದರು. ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್. ವಿಕಾಸ್ ನವದೆಹಲಿಯಲ್ಲಿ ಮಂಗಳವಾರ ಪ್ರತಿಷ್ಠಿತ `ಅರ್ಜುನ~ ಪ್ರಶಸ್ತಿ ಸ್ವೀಕರಿಸಿದ್ದರು. 2012ರ ಒಲಿಂಪಿ ಕ್ಸ್‌ನಲ್ಲಿ ಸ್ಪರ್ಧಿಸಲು ಅವರು ಅರ್ಹತೆ ಪಡೆದಿದ್ದಾರೆ.

ನಿವೇಶನ ಕೇಳಿದ ಜ್ಯೋತಿ
ಬೆಂಗಳೂರು:
ನಿವೇಶನ ನೀಡುವಂತೆ ಏಕಲವ್ಯ ಪುರಸ್ಕೃತ ಅಥ್ಲೀಟ್ ಎಚ್.ಎಂ.ಜ್ಯೋತಿ ಗುರುವಾರ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಸಲ್ಲಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡ, `ಮುಖ್ಯಮಂತ್ರಿಗಳ ವಿವೇಚನಾ ಕೋಟದಡಿ ನಾನೀಗ ನಿವೇಶನ ನೀಡುವಂತಿಲ್ಲ. ಈ ವಿಷಯ ಈಗ ನ್ಯಾಯಾಲಯದಲ್ಲಿದೆ. ತೀರ್ಪು ಬಂದ ಮೇಲೆ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT