ADVERTISEMENT

ವಿರಾಟ್ ಕೊಹ್ಲಿ, ಕಾರ್ತಿಕ್ ಶತಕದಾಟ

ಕ್ರಿಕೆಟ್: ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದ ದೋನಿ ಬಳಗ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಬರ್ಮಿಂಗ್‌ಹ್ಯಾಂ (ಪಿಟಿಐ):  ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾದ ಎದುರು ಐದು ವಿಕೆಟ್‌ಗಳ ಗೆಲುವು ಸಾಧಿಸಿತು.

ಎಜ್‌ಬಾಸ್ಟನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 333 ರನ್ ಪೇರಿಸಿತು. ಈ ಗುರಿಯನ್ನು ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ 49 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ಕುಸಾಲ್ ಪೆರೇರಾ (82, 94 ಎಸೆತ) ಮತ್ತು ತಿಲಕರತ್ನೆ ದಿಲ್ಶಾನ್ (84, 78 ಎಸೆತ) ಉತ್ತಮ ಆಟದ ನೆರವಿನಿಂದ ಮೊದಲ ವಿಕೆಟ್‌ಗೆ 209 ರನ್ ಪೇರಿಸಿತು. ಇತರರಿಗೆ ಅವಕಾಶ ನೀಡಲು ಇಬ್ಬರೂ `ನಿವೃತ್ತಿ'ಯಾಗಿ    ಪೆವಿಲಿಯನ್‌ಗೆ ಮರಳಿದರು.

ಆ ಬಳಿಕ ಮಾಹೇಲ ಜಯವರ್ಧನೆ (30), ಕುಮಾರ ಸಂಗಕ್ಕಾರ (45) ಮತ್ತು ದಿನೇಶ್ ಚಂಡಿಮಾಲ್ (46) ಭಾರತದ ಯುವ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. ಗೆಲುವಿಗಿದ್ದ ಕಠಿಣ ಗುರಿಯನ್ನು ಬೆನ್ನು ಹತ್ತಿದ ಭಾರತ ಶಿಖರ್ ಧವನ್ ಅವರನ್ನು ಎರಡನೇ ಓವರ್‌ನಲ್ಲಿಯೇ ಕಳೆದುಕೊಂಡು ಆಘಾತ ಅನುಭವಿಸಿತು. ಆದರೂ, ಭಾರತ ಆರಂಭಿಕ ಆಘಾತದಿಂದ ಬೇಗನೇ ಚೇತರಿಸಿಕೊಂಡಿತು. ಇದಕ್ಕೆ ಕಾರಣವಾಗಿದ್ದು ಬಲಗೈ ಬ್ಯಾಟ್ಸ್‌ಮನ್ ಕೊಹ್ಲಿ (144, 120ಎಸೆತ, 11ಬೌಂಡರಿ, 3 ಸಿಕ್ಸರ್) ಅವರ ಅಮೋಘ ಶತಕ.

ಕೊಹ್ಲಿಗೆ ಸೂಕ್ತ ಬೆಂಬಲ ನೀಡಿದ ದಿನೇಶ್ ಕಾರ್ತಿಕ್ ಸಹ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಬ್ಯಾಟ್ಸ್‌ಮನ್ ಕೇವಲ 81 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್ ಒಳಗೊಂಡಂತೆ ಅಜೇಯ 106 ರನ್ ಗಳಿಸಿ ಭಾರತ ವನ್ನು ಗೆಲುವಿನ      ದಡ ಸೇರಿಸಿದರು. ಅಭ್ಯಾಸ      ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿರುವ ಭಾರತಕ್ಕೆ ಈ ಗೆಲುವು ಹೆಚ್ಚಿನ ಆತ್ಮ ವಿಶ್ವಾಸ ತಂದುಕೊಟ್ಟಿದೆ.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 333 (ಕುಸಾಲ್ ಪೆರೇರಾ 82, ತಿಲಕರತ್ನೆ ದಿಲ್ಶಾನ್ 84, ಮಾಹೇಲ ಜಯವರ್ಧನೆ 30, ಕುಮಾರ ಸಂಗಕ್ಕಾರ 45, ದಿನೇಶ್ ಚಂಡಿಮಾಲ್ 46, ತಿಸಾರ ಪೆರೇರಾ ಔಟಾಗದೆ 26, ಭುವನೇಶ್ವರ್ ಕುಮಾರ್ 58ಕ್ಕೆ 1, ಇಶಾಂತ್ ಶರ್ಮ 41ಕ್ಕೆ 1, ಅಮಿತ್ ಮಿಶ್ರಾ 53ಕ್ಕೆ 1)

ಭಾರತ 49 ಓವರ್‌ಗಳಲ್ಲಿ 337ಕ್ಕೆ5. (ಮುರಳಿ ವಿಜಯ್ 18, ವಿರಾಟ್ ಕೊಹ್ಲಿ 144, ಸುರೇಶ್ ರೈನಾ 34, ದಿನೇಶ್ ಕಾರ್ತಿಕ್ ಔಟಾಗದೆ 106, ಮಹೇಂದ್ರ ಸಿಂಗ್ ದೋನಿ ಔಟಾಗದೆ 18; ಶಮಿಂದಾ ಎರಂಗಾ 60ಕ್ಕೆ2, ಸಚಿತ್ರಾ ಸೇನಾನಾಯಕೆ 42ಕ್ಕೆ1).
ಫಲಿತಾಂಶ: ಭಾರತಕ್ಕೆ ಐದು    
ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.