ADVERTISEMENT

ವೇಗಕ್ಕೆ ಮತ್ತೆ ಬೆದರಿದ ಭಾರತ ತಂಡ

ಕ್ರಿಕೆಟ್‌: 146 ರನ್‌ಗಳಿಗೆ ಸರ್ವಪತನ; ದಕ್ಷಿಣ ಆಫ್ರಿಕಾಕ್ಕೆ ಸರಣಿ ಗೆಲುವಿನ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಡರ್ಬನ್‌: ದಕ್ಷಿಣ ಆಫ್ರಿಕಾ ತಂಡದ ಮೊದಲ ವಿಕೆಟ್‌ ಪತನಗೊಂಡಿದ್ದು 35.1ನೇ ಓವರ್‌ನಲ್ಲಿ. ಭಾರತ ತಂಡದ ಹತ್ತನೇ ವಿಕೆಟ್‌ ಬಿದ್ದಿದ್ದು 35.1ನೇ ಓವರ್‌ನಲ್ಲಿ! ಇದು ಈ ಪಂದ್ಯದ ಪೂರ್ಣ ಕಥೆಯನ್ನು ಬಿಚ್ಚಿಡುತ್ತದೆ. ಸ್ವದೇಶದಲ್ಲಿ ಅಬ್ಬರಿಸುವ ಭಾರತದ ಬ್ಯಾಟ್ಸ್‌ಮನ್‌ಗಳ ‘ಸಾಮರ್ಥ್ಯ’ ವಿದೇಶದ ವೇಗದ ಪಿಚ್‌ಗಳಲ್ಲಿ ಬಹಿರಂಗಗೊಂಡಿದೆ.

ಆತಿಥೇಯ ದೇಶದ ವೇಗಿಗಳ ಎದುರು ಮತ್ತೊಮ್ಮೆ ಬೆಚ್ಚಿಬಿದ್ದ ದೋನಿ ಬಳಗ 134 ರನ್‌ಗಳ ಭಾರಿ ಸೋಲು ಕಂಡಿದೆ. ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 49  ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 280 ರನ್‌ ಗಳಿಸಿತು. ಈ ಸವಾಲಿನ ಗುರಿಗೆ ಉತ್ತರವಾಗಿ ಭಾರತ 35.1 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನಗೊಂಡಿತು.
ಈ ಮೂಲಕ ಎಬಿ ಡಿವಿಲಿಯರ್ಸ್‌ ಬಳಗ 2–0ರಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಹರಿಣಗಳ ನಾಡಿನಲ್ಲಿ ಚೊಚ್ಚಲ ಏಕದಿನ ಸರಣಿ ಜಯಿಸುವ ದೋನಿ ಬಳಗದ ಕನಸು ಕಮರಿ ಹೋಯಿತು.

ಕ್ವಿಂಟಾನ್, ಆಮ್ಲಾ ಆಸರೆ: ಟಾಸ್‌ ಗೆದ್ದ ನಾಯಕ ದೋನಿ  ಮತ್ತೊಮ್ಮೆ ಎದುರಾಳಿ ತಂಡವನ್ನು ಮೊದಲು ಬ್ಯಾಟ್‌ ಮಾಡಲು ಆಹ್ವಾನಿಸಿದರು. ಮಳೆಯಿಂದ ಕ್ರೀಡಾಂಗಣ ಒದ್ದೆಯಾಗಿದ್ದ ಕಾರಣ ಪಂದ್ಯ ತಂಡವಾಗಿ ಆರಂಭವಾಯಿತು. ಅಷ್ಟು ಮಾತ್ರವಲ್ಲದೇ, 49 ಓವರ್‌ಗಳಿಗೆ ನಿಗದಿಪಡಿಸಲಾಗಿತ್ತು.
ಮೊದಲು ಬ್ಯಾಟ್‌ ಮಾಡಲು ಲಭಿಸಿದ ಅವಕಾಶವನ್ನು ಐದನೇ ರ್‍್ಯಾಂಕ್‌ನ ದಕ್ಷಿಣ ಆಫ್ರಿಕಾ ಚೆನ್ನಾಗಿಯೇ ಬಳಸಿಕೊಂಡಿತು. ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟಾನ್‌ ಡಿ ಕಾಕ್‌ (106; 118 ಎ., 9 ಬೌಂ,) ಹಾಗೂ ಹಾಶೀಮ್‌ ಆಮ್ಲಾ (100; 117 ಎ., 8 ಬೌಂ.) ಸುಭದ್ರ ಅಡಿಪಾಯ ಕಟ್ಟಿಕೊಟ್ಟರು.

ಇವರಿಬ್ಬರು ಮೊದಲ ವಿಕೆಟ್‌ಗೆ 206 ಎಸೆತಗಳಲ್ಲಿ 194 ರನ್‌ ಸೇರಿಸಿದರು. ಕ್ವಿಂಟಾನ್‌ ಸತತ ಎರಡನೇ ಶತಕ ದಾಖಲಿಸಿದರು. ವೇಗವಾಗಿ ನಾಲ್ಕು ಸಾವಿರ ರನ್‌ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಆಮ್ಲಾ ಪಾತ್ರರಾದರು. 81ನೇ ಇನಿಂಗ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದರು. ವಿವಿಯನ್‌ ರಿಚರ್ಡ್ಸ್‌ ಅವರ ದಾಖಲೆಯನ್ನು ಮೀರಿ ನಿಂತರು.

ಕ್ವಿಂಟಾನ್‌ ಹಾಗೂ ಆಮ್ಲಾ ಪತನದ ಬಳಿಕ ಆತಿಥೇಯರ ರನ್‌ವೇಗಕ್ಕೆ ಕಡಿವಾಣ ಬಿತ್ತು. ಹಾಗಾಗಿ ಈ ತಂಡದ ಮೊತ್ತ 280 ರನ್‌ಗಳಿಗೆ ಸೀಮಿತಗೊಂಡಿತು. ಏಕದಿನ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಪಂದ್ಯಕ್ಕೆ ಬೌಲಿಂಗ್‌ ವಿಭಾಗದಲ್ಲಿ ಕೆಲ ಬದಲಾವಣೆ ಮಾಡಿತ್ತು. ಆದರೆ ವೇಗಿ ಮೊಹಮ್ಮದ್‌ ಶಮಿ (48ಕ್ಕೆ3) ಹೊರತುಪಡಿಸಿದರೆ ಉಳಿದವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬರಲಿಲ್ಲ.

ಸೊಸೊಬೆ ಮಾರಕ ದಾಳಿ: ಮೂರನೇ ಓವರ್‌ನಲ್ಲಿಯೇ ಭಾರತದ ಪೆರೇಡ್‌ ಶುರುವಾಯಿತು. ಸೊಸೊಬೆ ಎಸೆತದಲ್ಲಿ ಶಿಖರ್‌ ಧವನ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ‘ವೇಗದ ಬೌಲಿಂಗ್‌ ದಾಳಿಯನ್ನು  ಹೇಗೆ ಎದುರಿಸಬೇಕು ಎಂಬುದು ನಮಗೂ ಗೊತ್ತು’ ಎಂದು ಸ್ಟೇನ್‌ಗೆ ತಿರುಗೇಟು ನೀಡಿದ್ದ ವಿರಾಟ್‌ ಕೊಹ್ಲಿ ಅವರ ಮಾತನ್ನು ಸಮರ್ಥಿಸಿಕೊಳ್ಳಲು ಭಾರತ ತಂಡದವರು ವಿಫಲರಾದರು. ಸ್ವತಃ ವಿರಾಟ್‌ ಸೊನ್ನೆ ಸುತ್ತಿದರು.

ಶಾರ್ಟ್‌ ಪಿಚ್‌ ಎಸೆತಗಳ ಎದುರು ಮತ್ತೆ ರೋಹಿತ್‌ ಪರದಾಡಿದರು. ಯುವರಾಜ್‌ ಸಿಂಗ್‌ ಬದಲಿಗೆ ಸ್ಥಾನ ಪಡೆದಿದ್ದ ರಹಾನೆ ಕೂಡ ಕ್ರೀಸ್‌ಗೆ ಬಂದಷ್ಟೇ ವೇಗವಾಗಿ ಹಿಂದಿರುಗಿದರು. ರೈನಾ, ದೋನಿ ಹಾಗೂ ಜಡೇಜ ಕೊಂಚ ಪ್ರತಿರೋಧ ತೋರಿದರು. ಆದರೆ ಮಾರ್ನ್‌ ಮಾರ್ಕೆಲ್‌ ಹಾಗೂ ವೆರ್ನಾನ್‌ ಫಿಲ್ಯಾಂಡರ್‌ ಅವರ ಪ್ರಭಾವಿ ಬೌಲಿಂಗ್‌ಗೆ ಎದೆಕೊಡಲು ಅವರಿಗೆ ಸಾಧ್ಯವಾಗಲಿಲ್ಲ.

ಸಂತಾಪ: ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡುವ  ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲಾ ನಿಧನಕ್ಕೆ ಸಂತಾಪ ಸೂಚಿಸಿದರು.

ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ 49 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 280

ಕ್ವಿಂಟನ್‌ ಡಿ ಕಾಕ್‌ ಸಿ ರೋಹಿತ್‌ ಶರ್ಮ ಬಿ ಆರ್‌.ಅಶ್ವಿನ್‌  106
ಹಾಶೀಮ್‌ ಆಮ್ಲಾ ಸಿ ಎಂ.ಎಸ್‌.ದೋನಿ ಬಿ ಮೊಹಮ್ಮದ್‌ ಶಮಿ  100
ಎಬಿ ಡಿವಿಲಿಯರ್ಸ್‌ ಸ್ಟಂಪ್ಡ್‌ ಎಂ.ಎಸ್‌.ದೋನಿ ಬಿ ರವೀಂದ್ರ ಜಡೇಜ  03
ಜೀನ್‌ ಪಾಲ್‌ ಡುಮಿನಿ ರನ್‌ಔಟ್‌ (ಉಮೇಶ್‌ ಯಾದವ್‌/ದೋನಿ)  26
ಡೇವಿಡ್‌ ಮಿಲ್ಲರ್‌ ಎಲ್‌ಬಿಡಬ್ಲ್ಯು ಮೊಹಮ್ಮದ್ ಶಮಿ  00
ಜಾಕ್‌ ಕಾಲಿಸ್‌ ಬಿ ಮೊಹಮ್ಮದ್‌ ಶಮಿ  10
ರ್‍ಯಾನ್‌ ಮೆಕ್‌ಲಾರೆನ್‌ ಔಟಾಗದೆ  12
ವೆರ್ನಾನ್‌ ಫಿಲ್ಯಾಂಡರ್‌ ಔಟಾಗದೆ  14
ಇತರೆ (ಬೈ–1, ಲೆಗ್‌ಬೈ–2, ವೈಡ್‌–6)  09
ವಿಕೆಟ್‌ ಪತನ: 1–194 (ಡಿ ಕಾಕ್‌; 35.1); 2–199 (ಡಿವಿಲಿಯರ್ಸ್‌; 36.2); 3–233 (ಆಮ್ಲಾ; 43.3); 4–234 ( ಮಿಲ್ಲರ್‌; 43.6); 5–249 (ಡುಮಿನಿ; 46.3); 6–255 (ಕಾಲಿಸ್‌; 47.4).

ಬೌಲಿಂಗ್‌: ಉಮೇಶ್‌ ಯಾದವ್‌ 6–0–45–0, ಮೊಹಮ್ಮದ್‌ ಶಮಿ 8–0–48–3 (ವೈಡ್‌–4), ಇಶಾಂತ್‌ ಶರ್ಮ 7–0–38–0. ಆರ್‌.ಅಶ್ವಿನ್‌ 9–0–48–1 (ವೈಡ್‌–1), ಸುರೇಶ್‌ ರೈನಾ 6–0–32–0, ವಿರಾಟ್‌ ಕೊಹ್ಲಿ 3–0–17–0, ರವೀಂದ್ರ ಜಡೇಜ 10–0–49–1 (ವೈಡ್‌–1)

ಭಾರತ 35.1 ಓವರ್‌ಗಳಲ್ಲಿ 146
ರೋಹಿತ್‌ ಶರ್ಮ ಸಿ ಹಾಶೀಮ್‌ ಆಮ್ಲಾ ಬಿ ಲೊನ್ವಾಬೊ ಸೊಸೊಬೆ  19
ಶಿಖರ್‌ ಧವನ್‌ ಸಿ ಜೀನ್‌ ಪಾಲ್‌ ಡುಮಿನಿ ಬಿ ಡೇಲ್‌ ಸ್ಟೇನ್‌  00
ವಿರಾಟ್‌ ಕೊಹ್ಲಿ ಸಿ ಡಿ ಕಾಕ್‌ ಬಿ ಲೊನ್ವಾಬೊ ಸೊಸೊಬೆ  00
ಅಜಿಂಕ್ಯ ರಹಾನೆ ಸಿ ಡಿ ಕಾಕ್‌ ಬಿ ಮಾರ್ನ್‌ ಮಾರ್ಕೆಲ್‌  08
ಸುರೇಶ್‌ ರೈನಾ ಸಿ ಡೇವಿಡ್‌ ಮಿಲ್ಲರ್‌ ಬಿ ಮಾರ್ನ್‌ ಮಾರ್ಕೆಲ್‌  36
ಎಂ.ಎಸ್‌.ದೋನಿ ಸಿ ಡಿ ಕಾಕ್‌ ಬಿ ವೆರ್ನಾನ್‌ ಫಿಲ್ಯಾಂಡರ್‌  19
ರವೀಂದ್ರ ಜಡೇಜ ಸಿ ಎಬಿ ಡಿವಿಲಿಯರ್ಸ್‌ ಬಿ ಲೊನ್ವಾಬೊ ಸೊಸೊಬೆ   26
ಆರ್‌.ಅಶ್ವಿನ್‌ ಸಿ ಡಿ ಕಾಕ್‌ ಬಿ ಡೇಲ್‌ ಸ್ಟೇನ್‌  15
ಮೊಹಮ್ಮದ್‌ ಶಮಿ ಬಿ ಲೊನ್ವಾಬೊ ಸೊಸೊಬೆ  08
ಉಮೇಶ್‌ ಯಾದವ್‌ ಬಿ ಡೇಲ್‌ ಸ್ಟೇನ್‌  01
ಇಶಾಂತ್‌ ಶರ್ಮ ಔಟಾಗದೆ  00

ಇತರೆ (ಬೈ–4, ಲೆಗ್‌ಬೈ–1, ವೈಡ್‌–8, ನೋಬಾಲ್‌–1)  14
ವಿಕೆಟ್‌ ಪತನ: 1–10 (ಧವನ್‌; 2.2); 2–16 (ಕೊಹ್ಲಿ; 3.5); 3–29 (ರೋಹಿತ್‌; 7.4); 4–34 (ರಹಾನೆ; 8.4); 5–74 (ದೋನಿ; 19.5); 6–95 (ರೈನಾ; 22.6); 7–133 (ಅಶ್ವಿನ್‌; 30.5); 8–145 (ಜಡೇಜ; 33.2); 9–146 (ಯಾದವ್‌; 34.4); 10–146 (ಶಮಿ; 35.1)
ಬೌಲಿಂಗ್‌: ಡೇಲ್‌ ಸ್ಟೇನ್‌ 7–1–17–3 (ವೈಡ್‌–1), ಲೊನ್ವಾಬೊ ಸೊಸೊಬೆ 7.1–0–25–4 (ವೈಡ್‌–2), ಮಾರ್ನ್‌ ಮಾರ್ಕೆಲ್‌ 6–0–34–2 (ನೋಬಾಲ್‌–1, ವೈಡ್‌–2), ವೆರ್ನಾನ್‌ ಫಿಲ್ಯಾಂಡರ್‌ 6–1–20–1, ಡುಮಿನಿ 5–0–20–0, ರ್‍್ಯಾನ್‌ ಮೆಕ್‌ಲಾರೆನ್‌ 4–0–25–0 (ವೈಡ್‌–3)
ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 134 ರನ್‌ಗಳ ಗೆಲುವು ಹಾಗೂ
ಸರಣಿಯಲ್ಲಿ 2–0 ಮುನ್ನಡೆ.
ಪಂದ್ಯ ಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.
ಮೂರನೇ ಏಕದಿನ ಪಂದ್ಯ: ಡಿಸೆಂಬರ್‌ 11 (ಸೆಂಚೂರಿಯನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT