ADVERTISEMENT

ಶಮಿ ಐಪಿಎಲ್‌ನಲ್ಲಿ ಆಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ: ಖನ್ನಾ

ಪಿಟಿಐ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಶಮಿ ಐಪಿಎಲ್‌ನಲ್ಲಿ ಆಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ: ಖನ್ನಾ
ಶಮಿ ಐಪಿಎಲ್‌ನಲ್ಲಿ ಆಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ: ಖನ್ನಾ   

ನವದೆಹಲಿ (ಪಿಟಿಐ): ‘ಕ್ರಿಕೆಟಿಗ ಮಹಮ್ಮದ್‌ ಶಮಿ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ನಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಹೇಳಿದ್ದಾರೆ.

‘ಬಿಸಿಸಿಐನ ಭ್ರಷ್ಟಾಚಾರ ತಡೆ ಸಮಿತಿ (ಎಸಿಯು) ಮುಖ್ಯಸ್ಥ ನೀರಜ್‌ ಕುಮಾರ್ ಅವರು ವರದಿ ಸಲ್ಲಿಸಿದ ಬಳಿಕ ಶಮಿ ಭವಿಷ್ಯ ನಿರ್ಧಾರವಾಗಲಿದೆ. ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಅವರ ಆದೇಶದ ಮೇರೆಗೆ ಹಸೀನಾ ಜಹಾನ್ ಅವರು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ’ ಎಂದು ಖನ್ನಾ ಮಾಹಿತಿ ನೀಡಿದ್ದಾರೆ.

‘ವರದಿ ಸಲ್ಲಿಸಲು ಏಳು ದಿನ ಕಾಲಾವಕಾಶ ನೀಡಲಾಗಿದೆ. ಆನಂತರ ಸಿಒಎ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ. ‘ಐಪಿಎಲ್‌ ಉದ್ಘಾಟನೆಗೆ ₹ 18 ಕೋಟಿ ಖರ್ಚು ಮಾಡುವ ಕುರಿತು ಸಭೆಯಲ್ಲಿ ನಿರ್ಧಾರವಾಗಿದೆ’ ಎಂದರು.

ADVERTISEMENT

ಆಟಗಾರರ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಶಮಿ ಅವರಿಗೆ ₹3 ಕೋಟಿ ನೀಡಿದೆ.

ಆರೋಪ ಮುಕ್ತರಾದರೆ ಅವಕಾಶ: ‘ಎಸಿಯು ಸಲ್ಲಿಸಿದ ವರದಿಯ ಪ್ರಕಾರ ಶಮಿ ಆರೋಪಮುಕ್ತರಾದರೆ ಕೇದ್ರಿಯ ಗುತ್ತಿಗೆ ಪಟ್ಟಿಯಲ್ಲಿ ಅವರ ಹೆಸರು ಸೇರಿಕೊಳ್ಳಲಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದ್ದಾರೆ.

‘ಶಮಿ ಕ್ರಿಕೆಟ್‌ನಲ್ಲಿ ಯಾವುದೇ ಮೋಸದ ಆಟದಲ್ಲಿ ತೊಡಗಿಲ್ಲದಿದ್ದರೆ ಅವರ ಹೆಸರನ್ನು ಗುತ್ತಿಗೆ ಪಟ್ಟಿಯಲ್ಲಿ ಸೇರಿಸಬಹುದು. ಬಿಸಿಸಿಐ ನೀತಿ ಸಂಹಿತೆ ಪ್ರಕಾರ ಯಾವುದೇ ವೈಯಕ್ತಿಕ ಪ್ರಕರಣಗಳನ್ನು ಇಲ್ಲಿ ಪರಿಗಣಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಶಮಿ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಾಗಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಬಿಸಿಸಿಐಗೆ ಇಲ್ಲ. ಕೋಲ್ಕತ್ತ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಐಪಿಎಲ್‌ ಅಂತರ ಕ್ಲಬ್‌ಗಳ ಟೂರ್ನಿ. ಇಲ್ಲಿ ಆಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಆಯಾ ಫ್ರಾಂಚೈಸ್‌ಗಳಿಗೆ ಬಿಟ್ಟದ್ದು. ಈ ವಿಷಯದಲ್ಲಿ ಬಿಸಿಸಿಐ ಮೂಗು ತೂರಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.