ADVERTISEMENT

ಶೂಟಿಂಗ್‌: ಭಾರತದ ಮುಸ್ಕಾನ್‌ಗೆ ಚಿನ್ನ

ಪದಕ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಪಿಟಿಐ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಪದಕ ಗೆದ್ದವರು (ಎಡದಿಂದ) ಚೀನಾದ ಕ್ವಿನ್‌ ಸಿಹಾಂಗ್‌ (ಬೆಳ್ಳಿ), ಭಾರತದ ಮುಸ್ಕಾನ್‌ (ಚಿನ್ನ) ಮತ್ತು ಥಾಯ್ಲೆಂಡ್‌ನ ಕಾನ್ಯಕೊರ್ನ್‌ ಹಿರನ್‌ಫೊಯೆಮ್‌ ಅವರ ಸಂಭ್ರಮ
ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಪದಕ ಗೆದ್ದವರು (ಎಡದಿಂದ) ಚೀನಾದ ಕ್ವಿನ್‌ ಸಿಹಾಂಗ್‌ (ಬೆಳ್ಳಿ), ಭಾರತದ ಮುಸ್ಕಾನ್‌ (ಚಿನ್ನ) ಮತ್ತು ಥಾಯ್ಲೆಂಡ್‌ನ ಕಾನ್ಯಕೊರ್ನ್‌ ಹಿರನ್‌ಫೊಯೆಮ್‌ ಅವರ ಸಂಭ್ರಮ   

ಸಿಡ್ನಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಮುಸ್ಕಾನ್‌, ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರು. ಬುಧವಾರ ನಡೆದ ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಮುಸ್ಕಾನ್ ಈ ಸಾಧನೆ ಮಾಡಿದ್ದಾರೆ.

ಹೋದ ವರ್ಷ ಜರ್ಮನಿಯಲ್ಲಿ ನಡೆದಿದ್ದ ಐಎಸ್‌ಎಸ್ಎಫ್‌ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌
ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಮುಸ್ಕಾನ್‌, ಇಲ್ಲಿ ನಿಖರ ಗುರಿ ಹಿಡಿದು ಗಮನ ಸೆಳೆದರು. ಫೈನಲ್‌ ಹೋರಾಟದ ಆರನೇ ಸುತ್ತಿನಲ್ಲಿ ಭಾರತದ ಶೂಟರ್‌  ಮುನ್ನಡೆ ಗಳಿಸಿದರು.  ಅದರೊಂದಿಗೆ ಚಿನ್ನದ ಪದಕ ಗಳಿಸಿದರು.  ಅಂತರರಾಷ್ಟ್ರೀ ಯ ಕೂಟದಲ್ಲಿ ಮುಸ್ಕಾನ್‌ ಗೆದ್ದ ಮೊದಲ ಪದಕ ಇದಾಗಿದೆ.

ಚೀನಾದ ಕ್ವಿನ್‌ ಸಿಹಾಂಗ್‌ ಮತ್ತು ಥಾಯ್ಲೆಂಡ್‌ನ ಕಾನ್ಯಕೊರ್ನ್‌ ಹಿರನ್‌ಫೊಯೆಮ್‌ ಕ್ರಮವಾಗಿ ಈ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚು ಪಡೆದರು. 16ರ ಹರೆಯದ ಕಾನ್ಯಕೊರ್ನ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದಿದ್ದ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಅವರು ಬೆಳ್ಳಿ ಗೆದ್ದಿದ್ದರು.

ADVERTISEMENT

ಭಾರತದ ಮತ್ತೊಬ್ಬ ಸ್ಪರ್ಧಿ ಮನು ಭಾಕರ್‌, ನಾಲ್ಕನೆ ಸ್ಥಾನ ಪಡೆದರು. ಚೀನಾದ ಕ್ಸಿಯಾವೊ ಜಿಯಾರುಯಿಕ್ಸುನ್‌ ಐದನೆ ಸ್ಥಾನ ಪಡೆದರೆ, ಜು ಸಿಯಿಂಗ್‌ ಆರನೆ ಸ್ಥಾನಕ್ಕೆ ತೃಪ್ತಿಪಟ್ಟರು. ಭಾರತದ ಅರುಣಿಮಾ ಗೌರ್‌ ಮತ್ತು ಚೀನಾದ ಲಿ ಕ್ಸುಯಿ ಅವರು ಕ್ರಮವಾಗಿ ಏಳು ಮತ್ತು ಎಂಟನೆ ಸ್ಥಾನ ಪಡೆದರು.

ತಂಡ ವಿಭಾಗದಲ್ಲೂ ಮಿಂಚು: 25 ಮೀಟರ್ಸ್‌ ಪಿಸ್ತೂಲ್‌ನ ತಂಡ ವಿಭಾಗದಲ್ಲೂ ಭಾರತ ಪ್ರಾಬಲ್ಯ ಮೆರೆಯಿತು. ಮುಸ್ಕಾನ್‌, ಮನು ಭಾಕರ್‌ ಮತ್ತು ದೇವಾಂಶಿ ರಾಣಾ ಅವರಿದ್ದ ತಂಡ ಚಿನ್ನ ಗೆದ್ದಿತು.

ಅರುಣಿಮಾ ಗೌರ್‌, ಮಹಿಮಾ ಅಗರವಾಲ್‌ ಮತ್ತು ತನು ರಾವಲ್‌ ಅವರನ್ನು ಒಳಗೊಂಡ ತಂಡ ಬೆಳ್ಳಿಗೆ ಕೊರಳೊಡ್ಡಿತು. ಥಾಯ್ಲೆಂಡ್‌ನ ಹಿರನ್‌ಫೊಯೆಮ್‌, ವಿರಾಮನ್‌ ಕಿದಾರ್ನ್‌ ಮತ್ತು ಲಕ್ಸ್‌ಸಿಗಾ ಶ್ರಿನಿಟಿ ವೊರಾವೊಂಗ್‌ ಅವರು ಕಂಚು ಗೆದ್ದರು.

ಪುರುಷರ ತಂಡಕ್ಕೆ ಬೆಳ್ಳಿ: ಜೂನಿಯರ್‌ ಪುರುಷರ ಸ್ಕೀಟ್‌ ವಿಭಾಗದಲ್ಲಿ ಭಾರತ ತಂಡ ಬೆಳ್ಳಿಯ ಸಾಧನೆ ಮಾಡಿತು.

ಅನಂತ್‌ಜೀತ್‌ ಸಿಂಗ್‌ ನರುಕಾ, ಆಯುಷ್‌ ರುದ್ರರಾಜು ಮತ್ತು ಗುರ್ನಿಲಾಲ್‌ ಸಿಂಗ್‌ ಗರ್ಚಾ ಅವರನ್ನು ಹೊಂದಿದ್ದ ತಂಡ ಒಟ್ಟು 348 ಸ್ಕೋರ್‌ ಕಲೆಹಾಕಿತು. ವೈಯಕ್ತಿಕ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ನರುಕಾ ಐದನೇ ಸ್ಥಾನ ಪಡೆದರು.

ಭಾರತಕ್ಕೆ ಎರಡನೇ ಸ್ಥಾನ: ಭಾರತ ತಂಡ ಒಟ್ಟು 22 ಪದಕಗಳನ್ನು ಗೆದ್ದು ಪದಕ ‍ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಚೀನಾ ತಂಡ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

ಭಾರತದ ಖಾತೆಯಲ್ಲಿ ಒಂಬತ್ತು ಚಿನ್ನ, ಐದು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳಿವೆ. ಚೀನಾ ತಂಡ ಕೂಡ ಒಂಬತ್ತು ಚಿನ್ನ ಜಯಿಸಿದೆ. ಈ ತಂಡದ ಖಾತೆಯಲ್ಲಿ 25 ಪದಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.