ADVERTISEMENT

ಶ್ರೀನಿವಾಸ ರಾವ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST
ಶ್ರೀನಿವಾಸ ರಾವ್‌ಗೆ ಚಿನ್ನ
ಶ್ರೀನಿವಾಸ ರಾವ್‌ಗೆ ಚಿನ್ನ   

ಬೆಂಗಳೂರು: ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಸರ್ವಿಸಸ್‌ನ ವಿ. ಶ್ರೀನಿವಾಸ ರಾವ್ ಅವರು ಇಲ್ಲಿ ಆರಂಭವಾದ 63ನೇ ರಾಷ್ಟ್ರೀಯ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 56 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಶ್ರೀನಿವಾಸ ಅವರು ಒಟ್ಟು 236 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು. ಸ್ನ್ಯಾಚ್‌ನಲ್ಲಿ 100 ಕೆ.ಜಿ. ಎತ್ತಿದ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 136 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು.

ಒಟ್ಟು 235 ಕೆ.ಜಿ. ಭಾರ ಎತ್ತಿದ ಮಧ್ಯಪ್ರದೇಶದ ರಾಮಣ್ಣ ಅವರು ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ತಮಿಳುನಾಡಿನ ಜಿ. ವೀರಮಣಿ (228 ಕೆ.ಜಿ.) ಅವರು ಈ ವಿಭಾಗದ ಕಂಚು ಗೆದ್ದುಕೊಂಡರು. ಶಾರದಾ ಸಿದ್ಧಿಗೆ ಕಂಚು: ಕರ್ನಾಟಕದ ಶಾರದಾ ಸಿದ್ಧಿ ಅವರು ಇದೇ ತಾಣದಲ್ಲಿ ನಡೆಯುತ್ತಿರುವ 26ನೇ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 48 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಸ್ನ್ಯಾಚ್‌ನಲ್ಲಿ 63 ಕೆ.ಜಿ. ಭಾರ ಎತ್ತಿದ ಶಾರದಾ ಅವರು ಜರ್ಕ್‌ನಲ್ಲಿ 81 ಕೆ.ಜಿ. ಭಾರ ಎತ್ತಿದರು. ಒಟ್ಟು 144 ಕೆ.ಜಿ. ಭಾರ ಎತ್ತುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ವಿಭಾಗದ ಚಿನ್ನ ಮೇಘಾಲಯದ ಸಂಜಿತಾ ಚಾನು ಅವರು ಗೆದ್ದುಕೊಂಡರು. ಅವರು ಒಟ್ಟು 155 ಕೆ.ಜಿ. (ಸ್ನ್ಯಾಚ್ 67; ಜರ್ಕ್ 88) ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದುಕೊಂಡರು. ಮಣಿಪುರದ ತೊಯಿನು ದೇವಿ (148 ಕೆ.ಜಿ) ಅವರು ಬೆಳ್ಳಿ ಪಡೆದರು.

ಮಹಿಳೆಯರ 53 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಮಣಿಪುರದ ಎಚ್. ಶಾಯಾ ದೇವಿ ಬಂಗಾರ ಪಡೆದರು. ಅವರು ಒಟ್ಟು 163 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಅವರು ಸ್ನ್ಯಾಚ್‌ನಲ್ಲಿ 73 ಕೆ.ಜಿ ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ 90 ಕೆ.ಜಿ. ಭಾರ ಎತ್ತಿದರು. ಮಣಿಪುರದವರೇ ಆದ ಎನ್. ಲಕ್ಷ್ಮೀ ದೇವಿ (162 ಕೆ.ಜಿ) ಬೆಳ್ಳಿ ಗೆದ್ದರೆ, ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್‌ನ್ನು ಪ್ರತಿನಿಧಿಸಿದ ಎಂ. ಸಂತೋಷಿ (161) ಕಂಚು ಪಡೆದುಕೊಂಡರು. ಈ ವಿಭಾಗದಲ್ಲಿ ಕಣದಲ್ಲಿದ್ದ ಕರ್ನಾಟಕದ ತಂಗ್ಬಿ ದೇವಿ ಪದಕ ಗೆಲ್ಲುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.